ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ದೊಡ್ಡಬಳ್ಳಾಪುರ ಜನಪ್ರತಿನಿಧಿಗಳ ಛಾ‍ಪು

ಹಳ್ಳಿಯಿಂದ ಲೋಕಸಭೆ, ರಾಜ್ಯಸಭೆ ಪ್ರವೇಶಿಸಿದವರ ಹೆಜ್ಜೆ ಗುರುತು
Published 1 ಏಪ್ರಿಲ್ 2024, 4:33 IST
Last Updated 1 ಏಪ್ರಿಲ್ 2024, 4:33 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಲೋಕಸಭೆ, ರಾಜ್ಯಸಭೆಗಳಿಗೆ ಆಯ್ಕೆಯಾಗುವ ಮೂಲಕ ದೆಹಲಿಯಲ್ಲಿ ಹಲವಾರು ಜವಾಬ್ದಾರಿಯುತ ಹುದ್ದೆ ನಿರ್ವಹಿಸಿ ದೇಶದ ಆಡಳಿತದಲ್ಲೂ ದೊಡ್ಡಬಳ್ಳಾಪುರದ ಛಾಪುಮೂಡಿಸಿದ್ದಾರೆ ಇಲ್ಲಿನ ಜನಪ್ರತಿನಿಧಿಗಳು. ದೇಶದ ಆಡಳಿತದ ಇತಿಹಾಸದ ಪುಟಗಳಲ್ಲಿ ದಾಖಲಾಗುವಂತಹ ಕೆಲಸ ಮಾಡಿದ್ದಾರೆ.

ದೊಡ್ಡಬಳ್ಳಾಪುರದ ಟಿ.ಸಿದ್ದಲಿಂಗಯ್ಯ, ಮಲ್ಲೋಹಳ್ಳಿ ಗ್ರಾಮದ ಎಂ.ರಾಜಗೋಪಾಲ್ ಮತ್ತು ರಾಮೇಶ್ವರ ಗ್ರಾಮದ ಡಾ.ಎಲ್.ಹನುಮಂತಯ್ಯ ಅವರು ಹಳ್ಳಿಯಿಂ ರಾಜ್ಯಸಭೆ ದಾರಿ ತುಳಿದವರು. ತೂಬಗೆರೆ ಗ್ರಾಮದ ಆರ್.ಎಲ್.ಜಾಲಪ್ಪ ಲೋಕಸಭಾ ಸದಸ್ಯರಾಗಿದ್ದರು. ರಾಜ್ಯಸಭಾ ಸದಸ್ಯರಾಗಿದ್ದ ಸಚ್ಚಿದಾನಂದ ಸ್ವಾಮೀಜಿ ದೊಡ್ಡಬಳ್ಳಾಪುರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಟಿ.ಸಿದ್ದಲಿಂಗಯ್ಯ

ಟಿ.ಸಿದ್ದಲಿಂಗಯ್ಯ
ಟಿ.ಸಿದ್ದಲಿಂಗಯ್ಯ

ಮೈಸೂರು ಕಾಂಗ್ರೆಸ್‍ನ ಅಧ್ಯಕ್ಷರಾಗಿದ್ದ ದೊಡ್ಡಬಳ್ಳಾಪುರದ ಟಿ.ಸಿದ್ದಲಿಂಗಯ್ಯ 1967ರಲ್ಲಿ ರಾಜ್ಯಸಭೆ ಪ್ರವೇಶಿಸಿದ್ದರು. ಸ್ವಾತಂತ್ರ್ಯ ಹೋರಾಟಗಾರರಾಗಿ ಹೆಸರು ಮಾಡಿದ್ದ ಅವರು 1942ರಲ್ಲಿ ಬ್ರಿಟಿಷರೆ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಜೈಲು ವಾಸ ಅನುಭವಿಸಿದ್ದರು.

1952ರ ವಿಧಾನಸಭೆ ಚುನಾವಣೆಯಲ್ಲಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಮಂತ್ರಿಮಂಡಲದಲ್ಲಿ ವಿದ್ಯುತ್ ಮತ್ತು ಕೈಗಾರಿಕಾ ಖಾತೆ ಸಚಿವರಾಗಿ ಕೆಲಸ ಮಾಡಿದರು.

ರಾಜ್ಯಸಭಾ ಸದಸ್ಯ ಪೂಣಚ್ಚ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ 1967ರಲ್ಲಿ ಆಯ್ಕೆಯಾದರು. ಕೇಂದ್ರ ಸರ್ಕಾರ 1945-55ರಲ್ಲಿ ಕೆನಡಾದಲ್ಲಿ ನಡೆದ ಗಾಂಧಿವಾದಿಗಳ ಸಮ್ಮೇಳನಕ್ಕೆ ಸಿದ್ದಲಿಂಗಯ್ಯ ಅವರನ್ನು ಪ್ರತಿನಿಧಿಯಾಗಿ ಕಳುಹಿಸಿತು. ಇವರ ಪ್ರಯಾಣದ ವೆಚ್ಚ ಹೊರತು ಪಡಿಸಿ ₹12,000 ಕೇಂದ್ರ ಸರ್ಕಾರ ಮಂಜೂರು ಮಾಡಿತ್ತು. ಸಮ್ಮೇಳನ ಮುಗಿಸಿ ದೇಶಕ್ಕೆ ಹಿಂತಿರುಗಿದ ಸಿದ್ದಲಿಂಗಯ್ಯ ಅವರು ತಮ್ಮ ವೆಚ್ಚಕ್ಕೆ ಮಂಜೂರಾದ ₹12,000 ಬಾಬ್ತಿನಲ್ಲಿ ವೆಚ್ಚವಾಗದೇ ಉಳಿದಿದ್ದ ಹೆಚ್ಚುವರಿ ₹5,000ಅನ್ನು ಸರ್ಕಾರಕ್ಕೆ ಹಿಂತಿರುಗಿಸಿದ ಪ್ರಾಮಾಣಿಕ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರು.

88 ವರ್ಷಗಳ ತುಂಬು ಜೀವನ ನಡೆಸಿ 1984ರಲ್ಲಿ ಟಿ.ಸಿದ್ದಲಿಂಗಯ್ಯ ಅವರು ನಿಧನ ಹೊಂದಿದರು. ಕಾನೂನು ಪದವೀಧರರಾಗಿದ್ದ ಅವರು ವಕೀಲಿ ವೃತ್ತಿ ನಡೆಸುತ್ತಿದ್ದರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಉನ್ನತ ರಾಜಕೀಯ ಪದವೀಗೇರಿದರೂ ನಂಬಿದ ತತ್ವಗಳನ್ನು ಬಿಟ್ಟವರಲ್ಲ. ರಾಜಕೀಯ ಅಪರಾಧೀಕರಣದ ಇವತ್ತಿನ ದಿನಗಲ್ಲಿ ಸಿದ್ದಲಿಂಗಯ್ಯ ಅಪರೂಪದ ರಾಜಕೀಯ ಮುತ್ಸದ್ದಿಯಾಗಿ ಸದಾ ಜನಮಾನಸದಲ್ಲಿ ಉಳಿದಿದ್ದಾರೆ.

ಆರ್.ಎಲ್.ಜಾಲಪ್ಪ

ತಾಲ್ಲೂಕಿನ ತೂಬಗೆರೆ ಗ್ರಾಮದ ಆರ್.ಎಲ್.ಜಾಲಪ್ಪ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ 1996ರಲ್ಲಿ ಜನತಾದಳದ ಅಭ್ಯರ್ಥಿಯಾಗಿ ಗೆಲುವು ಸಾಧಿಸಿ ಮೊದಲ ಬಾರಿಗೆ ಲೋಕಸಭೆ ಪ್ರವೇಶ ಮಾಡಿದರು.

ಅದೇ ಸಂದರ್ಭದಲ್ಲಿ ಪ್ರಧಾನಿಯಾಗಿದ್ದ ಎಚ್.ಡಿ.ದೇವೇಗೌಡ ಮಂತ್ರಿಮಂಡಲದಲ್ಲಿ ಜವಳಿ ಮಂತ್ರಿಯಾಗಿದ್ದರು. ಜವಳಿ ಖಾತೆಯನ್ನು ರಾಜ್ಯ ಸಚಿವ ಸಂಪುಟ ದರ್ಜೆ ಸ್ಥಾನ ನೀಡಿದ್ದನ್ನು ಪ್ರತಿಭಟಿಸಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತಕ್ಷಣ ಎಚ್ಚೆತ್ತ ದೇವೇಗೌಡರು ಜವಳಿ ಖಾತೆಯ ಕ್ಯಾಬಿನೇಟ್‌ ದರ್ಜೆ ಸ್ಥಾನ ನೀಡಿದರು.

ಇದು ದೆಹಲಿ ಆಡಳಿತದ ಇತಿಹಾಸದಲ್ಲಿಯೇ ಮೈಲಿಗಲ್ಲಾಗಿದೆ. 1998 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅವರು ಜನತಾದಳ ತೊರೆದು ಕಾಂಗ್ರೆಸ್ ಪಕ್ಷ ಸೇರಿ ಮತ್ತೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸಂಸತ್‌ ಸದಸ್ಯರಾಗಿ ಅಯ್ಕೆಯಾದರು. 1999 ಮತ್ತು 2004 ರಲ್ಲೂ ಸಹ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಒಟ್ಟು ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾದ ತಾಲ್ಲೂಕಿನ ಪ್ರಮುಖ ಹಿರಿಯ ರಾಜಕಾರಣಿ.

ಸಚ್ಚಿದಾನಂದ ಸ್ವಾಮೀಜಿ

1978,1991 ಮತ್ತು 1992 ರಲ್ಲಿ ಮೂರು ಬಾರಿ ರಾಜ್ಯ‌ಸಭೆ ಸದಸ್ಯರಾಗಿ ಸಚ್ಚಿದಾನಂದ ಸ್ವಾಮೀಜಿ ಆಯ್ಕೆಯಾಗಿದ್ದರು.

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ನಿಕಟವರ್ತಿಯಾಗಿದ್ದ ಸಚ್ಚಿದಾನಂದ ಸ್ವಾಮೀಜಿ, ದೊಡಬಳ್ಳಾಪುರದ ರಾಜಕಾರಣದಲ್ಲಿ ಕಾಂಗ್ರೆಸ್ ಮುಖಂಡರಾಗಿ ದೊಡ್ಡ ಹೆಸರು ಮಾಡಿದ್ದರು. ಒಮ್ಮೆ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ನಂದಿಬೆಟ್ಟದ ತಪ್ಪಲಿನಲ್ಲಿರುವ ವಿಷ್ಣು ಆಶ್ರಮದಲ್ಲಿ ತಂಗುತ್ತಿದ್ದರು. ಇವರ ಸಂಪರ್ಕದಿಂದಾಗಿ ವಿಷ್ಣು ಆಶ್ರಮಕ್ಕೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಮುಖ ರಾಜಕೀಯ ಮುಖಂಡರು ಬರುತ್ತಿದ್ದರು. ಹಾಗೆಯೇ ಇಂದಿರಾಗಾಂಧಿ ಅವರು ದೊಡ್ಡಬಳ್ಳಾಪುರದ ನ್ಯಾಯಾಲಯಕ್ಕೆ ಬಂದಿದ್ದಾಗ ವಿಷ್ಣು ಆಶ್ರಮಕ್ಕೂ ಭೇಟಿ ನೀಡಿ ಕೆಲ ಸಮಯ ವಿಶ್ರಾಂತಿ ಪಡೆದಿದ್ದರು.

ಎಂ.ರಾಜಗೋಪಾಲ್

ತಾಲ್ಲೂಕಿನ ಮಧುರೆ ಹೋಬಳಿಯ ಮಲ್ಲೋಹಳ್ಳ ಗ್ರಾಮದ ಎಂ.ರಾಜಗೋಪಾಲ್ 1982 ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಅಂದಿನ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರಿಗೆ ಎಂ.ರಾಜಗೋಪಾಲ್ ಆತ್ಮೀಯರಾಗಿದ್ದರು. ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ ಪದಾಧಿಕಾರಿಯಾಗಿದ್ದರು. ಮಧುರೆ ಹೋಬಳಿಯಿಂದ ತಾಲ್ಲೂಕು ಬೋರ್ಡ್ ಸದಸ್ಯರಾಗಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದರು.

ಡಾ.ಎಲ್.ಹನುಮಂತಯ್ಯ

ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯ ರಾಮೇಶ್ವರ ಗ್ರಾಮದ ಡಾ.ಎಲ್.ಹನುಮಂತಯ್ಯ ಅವರು 2018ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ರಾಜ್ಯಸಭೆಯಲ್ಲಿ ಕನ್ನಡ ಭಾಷೆಯಲ್ಲೆ ಪ್ರಮಾಣವಚನ ಸ್ವೀಕರಿಸುವ ಮೂಲಕ ಗಮನಸೆಳೆದರು. ದಲಿತ ಮತ್ತು ಬಂಡಾಯ ಸಾಹಿತಿಯಾಗಿ ಪ್ರಸಿದ್ದರಾಗಿರುವ ಡಾ.ಎಲ್.ಹನುಮಂತಯ್ಯ ಅವರು ವಿಧಾನ ಪರಿಷತ್ ಸದಸ್ಯರಾಗಿ, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT