ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ತಾಂತ್ರಿಕ ಅಡಚಣೆ– ರಾಗಿ ಖರೀದಿ ನೋಂದಣಿ ಮತ್ತಷ್ಟು ವಿಳಂಬ

ಆಹಾರ ನಿಗಮದ ಜಾಲತಾಣದಲ್ಲಿ ತಾಂತ್ರಿಕ ಅಡಚಣೆ
Published 12 ಡಿಸೆಂಬರ್ 2023, 18:45 IST
Last Updated 12 ಡಿಸೆಂಬರ್ 2023, 18:45 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ನೋಂದಣಿಗೆ ಆಹಾರ ನಿಗಮದ ಜಾಲತಾಣದಲ್ಲಿ ತಾಂತ್ರಿಕ ಅಡಚಣೆ ಎದುರಾಗಿದ್ದು ನೋಂದಣಿ ಮತ್ತಷ್ಟು ವಿಳಂಭವಾಗುವ ಸಾಧ್ಯತೆ ಹೆಚ್ಚಾಗಿದೆ.

ಈ ಹಿಂದೆ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ರೈತರು ‘ಫ್ರೂಟ್ಸ್‌’ ಐ.ಡಿ ಸಂಖ್ಯೆಯನ್ನು ನೀಡಿ ನೋಂದಣಿ ಮಾಡಿಸಿದ ಸಮಯದಲ್ಲಿ ನೀಡಲಾಗುವ ನಿಗದಿತ ದಿನಾಂಕದಂದು ರಾಗಿ ಖರೀದಿ ಕೇಂದ್ರಕ್ಕೆ ರೈತರು ರಾಗಿ ಸರಬರಾಜು ಮಾಡಬಹುದಾಗಿತ್ತು. ಆದರೆ ಇದೇ ಪ್ರಥಮ ಬಾರಿಗೆ ಪಹಣಿಯಲ್ಲಿ(ಆರ್‌ಟಿಸಿ) ಹೆಸರು ಇರುವ ರೈತರೇ ಖರೀದಿ ಕೇಂದ್ರಕ್ಕೆ ಖುದ್ದಾಗಿ ಬೇಟಿ ನೀಡಿ ಬಯೋಮೆಟ್ರಿಕ್‌ ಮೂಲಕ ರಾಗಿ ಖರೀದಿಗೆ ಹೆಸರು ನೋಂದಣಿ ಮಾಡಿಸಬೇಕಿದೆ.

ಈ ಹೊಸ ನಿಯಮ ಜಾರಿಯಲ್ಲಿ ತಾಂತ್ರಿಕ ತೊಂದರೆ ಎದುರಾಗಿದೆ. ಅಧಿಕಾರಿಗಳು ನೋಂದಣಿ
ಕೇಂದ್ರಗಳಲ್ಲಿ ಎರಡು ದಿನಗಳಿಂದಲೂ  ಪ್ರಾಯೋಗಿಕ ನೋಂದಣಿ
ನಡೆಸುತ್ತಿದ್ದಾರೆ. ಆದರೆ ತಾಂತ್ರಿಕ ತೊಂದರೆ ಮಾತ್ರ ನಿವಾರಣೆಯಾಗಿಲ್ಲ.

‘ಆಹಾರ ನಿಗಮದ ಅಧಿಕೃತ ಜಾಲತಾಣದಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆ ಒಂದು ಜಿಲ್ಲೆಗಷ್ಟೇ ಸೀಮಿತವಾಗಿಲ್ಲ. ಇಡೀ ರಾಜ್ಯದಲ್ಲೇ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಜೋಳ ಖರೀದಿ ನೋಂದಣಿ ಪ್ರಾರಂಭಕ್ಕೆ ಅಡ್ಡಿಯಾಗಿದೆ’ ಎನ್ನುತ್ತಾರೆ ಆಹಾರ ಇಲಾಖೆಯ ಅಧಿಕಾರಿಗಳು.

ಬೆಂಬಲ ಬೆಲೆ ಯೋಜನೆಯಡಿ ಡಿ.1ರಿಂದ ರಾಗಿ ಖರೀದಿ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎನ್‌.ಶಿವಶಂಕರ್‌ ಅವರು ನ. 21 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾಹಿತಿ ನೀಡಿದ್ದರು. ಪ್ರತಿ ಕ್ವಿಂಟಲ್ ರಾಗಿಗೆ ₹ 3,846 ಬೆಂಬಲ ಬೆಲೆಯನ್ನು ಸರ್ಕಾರ ನಿಗದಿ ಪಡಿಸಿದೆ.

ಹೆಸರು ನೋಂದಣಿ ಮಾಡಿಸಿರುವ ರೈತರಿಂದ ಜ. 1ರಿಂದ ಮಾರ್ಚ್‌ 31ರವರೆಗೆ ಮಾತ್ರ ರಾಗಿ ಖರೀದಿಸಲಾಗುವುದು ಎಂದು ಖರೀದಿ ಕೇಂದ್ರದ ಮುಂದೆ ಬ್ಯಾನರ್‌ಗಳನ್ನು ಕಟ್ಟುವ ಮೂಲಕ ಪ್ರಚಾರವನ್ನು ಮಾಡಲಾಗಿದೆ. ಆದರೆ ನೋಂದಣಿ ಮಾತ್ರ ಪ್ರಾರಂಭವಾಗಿಲ್ಲ.

‘ರಾಗಿ ಖರೀದಿ ನೋಂದಣಿಗೆ ಹೊಸ ನಿಯಮ ಜಾರಿಗೆ ತರುವಾಗ ಪ್ರಾಯೋಗಿಕ ಸಿದ್ಧತೆಗಳನ್ನು ಪೂರ್ಣ ಗೊಳಿಸಿದ ನಂತರವೇ ನೋಂದಣಿ ದಿನಾಂಕವನ್ನು ಘೋಷಣೆ ಮಾಡ ಬೇಕಿತ್ತು. ಅಧಿಕಾರಿಗಳಲ್ಲಿನ ಸಮನ್ವಯತೆ ಕೊರತೆಯಿಂದಾಗಿ ರೈತರು ಪ್ರತಿ ದಿನವು ನಗರದಲ್ಲಿನ ಎಪಿಎಂಸಿ ಆವರಣದ ರೈತ ಭವನದಲ್ಲಿನ ನೋಂದಣಿ ಕೇಂದ್ರದ ಮುಂದೆ ಕಾದು ಕುಳಿತುಕೊಳ್ಳುವಂತಾಗಿದೆ. ಈ ಹಿಂದಿನ ವರ್ಷಗಳಲ್ಲಿ ನೋಂದಣಿಗೆ ಸಾಕಷ್ಟು ನೂಕು ನುಗ್ಗಲು ಉಂಟಾಗಿತ್ತು. ಅಲ್ಲದೆ ನೋಂದಣಿ ದಿನಾಂಕ ಮುಕ್ತಾಯ ವಾಗಿದ್ದರಿಂದ ಹಲವಾರು ಜನ ರೈತರು ಬೆಂಬಲ ಬೆಲೆ ಯೋಜನೆಯಲ್ಲಿ ರಾಗಿ ಮಾರಾಟ ಮಾಡುವುದರಿಂದ
ವಂಚಿತರಾಗಿದ್ದರು. ಹಾಗಾಗಿಯೇ ರೈತರು ಈ ಬಾರಿಯು ಅದೇ ರೀತಿ ಆಗುತ್ತದೆ ಅನ್ನುವ ಆತಂಕದಲ್ಲಿ ನೋಂದಣಿಗೆ ಕಾದು ಕುಳಿತುಕೊಳ್ಳುತ್ತಿದ್ದಾರೆ. ಖರೀದಿ ಕೇಂದ್ರದಲ್ಲಿ ರೈತರಿಗೆ ನಿಖರವಾದ ಮಾಹಿತಿಯನ್ನು ಮಾತ್ರ ಯಾರೂ ಸಹ ನೀಡದೇ ಇರುವುದರಿಂದ ರಾಗಿ ಬೆಳೆಗಾರರು ಗೊಂದಲಕ್ಕೆ ಒಳಗಾಗುವಂತಾಗಿದೆ ಎಂದು ರಾಜ್ಯ ರೈತ ಸಂಘದ ತಾಲ್ಲೂಕು ಮುಖಂಡ ಆರ್‌.ಸತೀಶ್‌ ತಿಳಿಸಿದ್ದಾರೆ.

***

ರೈತರಲ್ಲದವರು ನೋಂದಣಿ ಮಾಡಿಸುವುದನ್ನು ತಪ್ಪಿಸಲು ಸರ್ಕಾರ ಬಯೋಮೆಟ್ರಿಕ್‌ ಕಡ್ಡಾಯಗೊಳಿಸಿದೆ. ಹೀಗಾಗಿ ತಾಂತ್ರಿಕ ತೊಂದರೆ ಎದುರಾಗಿದೆ. ಇದನ್ನು ಸರಿಪಡಿಸುವ ತ್ವರಿತ ಪ್ರಕ್ರಿಯೆಗಳು ನಡೆಯುತ್ತಿವೆ. ಗುರುವಾರದ ಒಳಗೆ ಸಮಸ್ಯೆ ನಿವಾರಣೆಯಾಗುವ ನಿರೀಕ್ಷೆ ಇದೆ

–ವಿಭಾ ವಿದ್ಯಾ ರಾಥೋಡ್‌,  ತಹಶೀಲ್ದಾರ್‌, ದೊಡ್ಡಬಳ್ಳಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT