ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಜಿಹ್ವೆ ತಣಿಸುವ ಸ್ವಾದಿಷ್ಟ ರುಚಿಯ ‘ಡ್ರ್ಯಾಗನ್‌ ಫ್ರೂಟ್‌‘

ಪಾಪಸ್‌ ಕಳ್ಳಿ ಜಾತಿಗೆ ಸೇರಿರುವ ಸಸ್ಯ ಸಂಕ್ರಮಣವೇ ‘ಡ್ರ್ಯಾಗನ್‌ ಫ್ರೂಟ್‌‘
Last Updated 1 ನವೆಂಬರ್ 2020, 3:27 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಈಗ ಯಾವುದೇ ಹಣ್ಣಿನ ಅಂಗಡಿಗಳಲ್ಲಿ ಜೋಡಿಸಿರುವ ಹಣ್ಣುಗಳ ರಾಶಿಯಲ್ಲಿ ಡ್ರ್ಯಾಗನ್‌ ಫ್ರೂಟ್‌ ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತಿದೆ. ಈ ಹಣ್ಣು ಪಾಪಸ್‌ ಕಳ್ಳಿ ಜಾತಿಗೆ ಸೇರಿರುವ ಸಸ್ಯವಾಗಿದ್ದರೂ ಸಂಕ್ರಮಣಗೊಂಡಿರುವುದರಿಂದ (ಹೈಬ್ರಿಡ್‌) ಮುಳ್ಳುಗಳು ಕಡಿಮೆ.

ಡ್ರ್ಯಾಗನ್‌ ಫ್ರೂಟ್‌ ಬಿಳಿ ಮತ್ತು ಕೆಂಪು ಬಣ್ಣಗಳಿಂದ ಕೂಡಿದ್ದರೂ ರುಚಿಯಲ್ಲಿ ಮಾತ್ರ ಒಂದೇ ತೆರನಾಗಿದೆ. ಚನ್ನಾಗಿ ಬಲಿತು ಹಣ್ಣಾಗಿದ್ದರೆ ಸಿಹಿಯಾಗಿರುತ್ತದೆ. ಒಂದಿಷ್ಟು ಕಾಯಿ ಇದ್ದರೆ ಸ್ವಲ್ಪ ಹುಳಿ. ಆದರೆ, ಉಪ್ಪು ಸೇರಿಸಿಕೊಂಡು ತಿನ್ನಲು ತುಂಬಾ ರುಚಿ ಎನ್ನುತ್ತಾರೆ ಡ್ರ್ಯಾಗನ್‌ ಫ್ರೂಟ್‌ ಬೆಳೆಗಾರ ಶ್ರೀನಿವಾಸ್‌ರೆಡ್ಡಿ.

ತಾಲ್ಲೂಕಿಗೆ ಸಮೀಪದ ಹಾರೋಹಳ್ಳಿಯಲ್ಲಿ ಮೂರು ಎಕರೆ ವಿಸ್ತೀರ್ಣದಲ್ಲಿ ಡ್ರ್ಯಾಗನ್‌ ಫ್ರೂಟ್‌ ಗಿಡಗಳನ್ನು ಶ್ರೀನಿವಾಸ್‌ರೆಡ್ಡಿ ಬೆಳೆದಿದ್ದಾರೆ. ಒಂದು ಎಕರೆ ವಿಸ್ತೀರ್ಣದಲ್ಲಿ ಎರಡು ಸಾವಿರ ಸಸಿಗಳನ್ನು ನಾಟಿ ಮಾಡಿದ್ದಾರೆ. ಒಂದು ಸಾಲಿನಿಂದ ಮತ್ತೊಂದು ಸಾಲಿಗೆ 10 ಅಡಿ, ಹಾಗೆಯೇ ಒಂದು ಸಸಿಯಿಂದ ಮತ್ತೊಂದು ಸಸಿಗೆ 10 ಅಡಿ ಅಂತರದಲ್ಲಿ ಸಸಿಗಳನ್ನು ನಾಟಿ ಮಾಡಲಾಗಿದೆ.

ಸಿದ್ಧತೆ ಮುಖ್ಯ: ’ಗುಜರಾತ್‌ ರಾಜ್ಯದಿಂದ ಮೊದಲ ಬಾರಿಗೆ ಎರಡು ಸಾವಿರ ಸಸಿಗಳನ್ನು ತರಿಸಿ ಬೇಸಾಯ ಆರಂಭಿಸಿದೆ. ಈ ಬೆಳೆಗೆ ಭೂಮಿ ಸಿದ್ಧತೆ ಮುಖ್ಯ. ಡಿಸೆಂಬರ್‌ ತಿಂಗಳಲ್ಲಿ ಸಸಿಗಳನ್ನು ನಾಟಿ ಮಾಡುವ ಉದ್ದೇಶ ಇದ್ದರೆ ಕನಿಷ್ಠ ಒಂದು ತಿಂಗಳ ಹಿಂದಿನಿಂದಲೇ ಭೂಮಿ ಉಳುಮೆ ಮಾಡಿ ಸಿದ್ಧಗೊಳಿಸಬೇಕು. ಸಸಿ ನೆಡುವ ಸಿಮೆಂಟ್‌ ಅಥವಾ ಕಲ್ಲಿನ ಕಂಬದ ಸುತ್ತ ಕನಿಷ್ಠ ಎರಡು ಅಡಿಗಳಷ್ಟು ಮಣ್ಣಿನ ದಿಬ್ಬ ಮಾಡಿಕೊಂಡು ಬೇವು, ಹೊಂಗೆ ಹಿಂಡಿ, ಕುರಿ,ಮೇಕೆ ಹಾಗೂ ಸಗಣಿ ಗೊಬ್ಬರ ಸೇರಿಸಿ 20 ರಿಂದ 25 ದಿನಗಳವರೆಗೆ ಕಳೆಯಲು ಬಿಡಬೇಕು. ಇದಾದ ನಂತರ ಈ ಮೊದಲೇ ಬೆಳೆಸಿಕೊಂಡಿರುವ ಸಸಿಗಳನ್ನು ಒಂದು ಕಂಬದ ಸುತ್ತ ನಾಲ್ಕು ಸಸಿಗಳನ್ನು ನಾಟಿ ಮಾಡಬೇಕು. ಇದರ ಬಳ್ಳಿಗಳು ಕಂಬಕ್ಕೆ ತಾಗಿಕೊಂಡು ಬೆಳೆಯಲು ಸಹಕಾರಿಯಾಗುವಂತೆ ದಾರದಿಂದ (ಪ್ಲಾಸ್ಟಿಕ್‌ ದಾರ ಬಳಸಬಾರದು) ಕಟ್ಟಬೇಕು. ಸಸಿಗಳನ್ನು ನಾಟಿ ಮಾಡಿದ 14 ತಿಂಗಳ ನಂತರ ಗಿಡಗಳು ಬೆಳೆದು ಹೂವು ಬಿಟ್ಟು ಹಣ್ಣು ಸಿಗಲು ಆರಂಭವಾಗುತ್ತದೆ.ಒಂದು ಎಕರೆ ಪ್ರದೇಶದಲ್ಲಿ ಬೆಳೆಸಲು ಸುಮಾರು ಏಳು ಅಡಿ ಎತ್ತರ, ಒಂದು ಅಡಿ ಸುತ್ತಳತೆ 500 ಸಿಮೆಂಟ್‌ ಕಂಬಗಳು ಬೇಕು. ಸಿಮೆಂಟ್‌ ಕಂಬದ ತುದಿಯಲ್ಲಿ ಐದರಿಂದ ಆರು ಕಂಬಿಗಳನ್ನು ಛತ್ರಿಯಂತೆ ಬಿಡಬೇಕು. ಈ ಕಂಬಿಗಳಿಗೆ ಬೈಕ್‌ಗಳಿಗೆ ಬಳಸಿ ತೆಗೆದು ಹಾಕಲಾಗಿರುವ ಹಳೆ ಟೈರ್‌ಗಳನ್ನು ಇಡಬೇಕು. ಈ ಟೈರ್‌ಗಳ ಒಳಗಿನಿಂದ ಬಳ್ಳಿಗಳು ಹೊರಬರುವಂತೆ ಬೆಳೆಸಿದರೆ ಕೊಯ್ಲು ಮಾಡಲು, ಹೆಚ್ಚಿನ ಇಳುವರಿ ಪಡೆಯಲು ಸಹಕಾರಿಯಾಗುತ್ತದೆ ಎನ್ನುತ್ತಾರೆ ರೈತ ಶ್ರೀನಿವಾಸ್‌ರೆಡ್ಡಿ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT