ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ: ಆನೆ ಮೇಲೆ ದುರ್ಗಾ ಮಹೇಶ್ವರಿ ಮೆರವಣಿಗೆ

ಮೆರಗು ನೀಡಿದ ಗಮನ ಸೆಳೆದ ಜಾನಪದ ಕಲಾತಂಡಗಳ ಪ್ರದರ್ಶನ
Published : 22 ಅಕ್ಟೋಬರ್ 2023, 13:50 IST
Last Updated : 22 ಅಕ್ಟೋಬರ್ 2023, 13:50 IST
ಫಾಲೋ ಮಾಡಿ
Comments

ವಿಜಯಪುರ: ಹೋಬಳಿಯ ಗಡ್ಡದನಾಯಕನಹಳ್ಳಿ ದುರ್ಗಾಮಹೇಶ್ವರಿ ದೇವಿಯ ದೇವಾಲಯದಲ್ಲಿ ಭಾನುವಾರ ದುರ್ಗಾಷ್ಟಮಿ ಅಂಗವಾಗಿ ಆನೆಯ ಅಂಬಾರಿ ಉತ್ಸವ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.

ವೇದಪಾರಾಯಣ, ಗಣಪತಿ ಪೂಜೆ, ಕಲಶಾರಾಧನೆ, ಸ್ವಸ್ತಿಪುಣ್ಯಾಹ ವಾಚನ, ದೇವನಾಂದಿ, ಪಂಚಗವ್ಯ ರಕ್ಷಾಬಂಧನ, ಕಲಾಶಾರಾಧನೆ, ಚಂಡಿಸಪ್ತಶತಿ ಪಾರಾಯಣ, ಗಣಪತಿಹೋಮ, ನವಗ್ರಹಹೋಮ, ಚಂಡಿಕಾಹೋಮ, ಮಹಾಪೂರ್ಣಾಹುತಿ, ಕುಂಭಾಭಿಷೇಕ, ದಿವ್ಯಅಲಂಕಾರ, ದಿವ್ಯದರ್ಶನ, ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ನಡೆಯಿತು.

ಕೇರಳ, ತಮಿಳುನಾಡು ರಾಜ್ಯಗಳಿಂದ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ಡೊಳ್ಳುಕುಣಿತ, ಪೂಜಾಕುಣಿತ, ಪಟ್ಟದಕುಣಿತ, ವೀರಗಾಸೆ, ನವದುರ್ಗೆ ಕುಣಿತ, ಗಾರುಡಿಬೊಂಬೆಗಳು, ಕೀಲುಕುದುರೆಗಳ ಪ್ರದರ್ಶನ ಎಲ್ಲರ ಗಮನಸೆಳೆಯಿತು. ಶಿವಲೀಲಾ ಸಂಗೀತ ಅಕಾಡೆಮಿಯಿಂದ ಮಹಿಷಾಸುರ ಮರ್ದಿನಿ ನೃತ್ಯರೂಪಕ ಪ್ರದರ್ಶನ ಗಮನ ಸೆಳೆಯಿತು.

ಅಂಬಾರಿ ಉತ್ಸವದ ಅಂಗವಾಗಿ ದೇವಿಗೆ ವಿಶೇಷ ಹೂವಿನ ಅಲಂಕಾರ ಹಾಗೂ ಚಿನ್ನಾಭರಣಗಳಿಂದ ಅಲಂಕಾರ ಮಾಡಲಾಗಿತ್ತು. ಪ್ರಧಾನ ಅರ್ಚಕ ನಾಗರಾಜಪ್ಪ ಅವರು, ವಿಧಿವಿಧಾನಗಳಂತೆ ಪೂಜಾ ಕಾರ್ಯಕ್ರಮಗಳು ನೆರವೇರಿಸಿದರು. ನಂತರ ಉತ್ಸವಮೂರ್ತಿಯನ್ನು ಮೂರು ಬಾರಿ ದೇವಾಲಯ ಪ್ರದಕ್ಷಿಣೆ ಮಾಡಿಸಿ, ಆನೆಯ ಮೇಲೆ ಮೆರವಣಿಗೆ ಮಾಡಲಾಯಿತು.

ಮೆರವಣಿಗೆ ಉದ್ದಕ್ಕೂ ರಸ್ತೆಯ ಇಕ್ಕೆಲುಗಳಲ್ಲಿ ನಿಂತಿದ್ದ ಜನರು ಭಕ್ತಿಯಿಂದ ನಮಿಸಿ, ದೇವಿಗೆ ಪುಷ್ಪಾರ್ಚನೆ ಮಾಡಿದರು. ತಿಮ್ಮನಹಳ್ಳಿಯವರೆಗೂ ಸಂಚರಿಸಿ, ನಂತರ ಗಡ್ಡದನಾಯಕನಹಳ್ಳಿ ಗ್ರಾಮ ಪ್ರದಕ್ಷಿಣೆ ಮಾಡಿ ದೇವಾಲಯಕ್ಕೆ ವಾಪಸ್ಸು ಕರೆತರಲಾಯಿತು.

ವಿಶೇಷ ಅಲಂಕಾರ: ದೇವಾಲಯದ ಆವರಣವನ್ನು ವೈಕುಂಠದ ಮಾದರಿಯಲ್ಲಿ ವಿವಿಧ ಅಲಂಕಾರಿಕ ಹೂಗಳು ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಮಂಡಿಬೆಲೆ, ತಿಮ್ಮನಹಳ್ಳಿಯ ಮುಖ್ಯರಸ್ತೆಗಳವರೆಗೂ ದೀಪಾಲಂಕಾರ ಮಾಡಲಾಗಿತ್ತು. ಸಾವಿರಾರು ಮಂದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.

ದೇವಾಲಯಕ್ಕೆ ಬಂದಿದ್ದ ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿತ್ತು. ರಾಜ್ಯ, ಅಂತರರಾಜ್ಯಗಳಿಂದಲೂ ಭಕ್ತರು ಬಂದು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಸೇರಿದಂತೆ ವಿವಿಧ ಗಣ್ಯರು ದೇವಾಲಯಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಕೃಷಿಕ ಸಮಾಜದ ತಾಲ್ಲೂಕು ಉಪಾಧ್ಯಕ್ಷ ಮಂಡಿಬೆಲೆ ದೇವರಾಜಪ್ಪ, ಆರ್.ಕೇಶವ, ರಾಮಚಂದ್ರಪ್ಪ, ಚನ್ನಹಳ್ಳಿ ರಾಜಣ್ಣ, ಎಂ.ನಾರಾಯಣಸ್ವಾಮಿ, ವೇಣುಗೋಪಾಲ್, ನಾಗರಾಜಪ್ಪ, ಯಲಿಯೂರು ವೀರಣ್ಣ, ಹಾಜರಿದ್ದರು.

ಡೊಳ್ಳು ಕುಣಿತ
ಡೊಳ್ಳು ಕುಣಿತ
ಕಶಲ ನೃತ್ಯ
ಕಶಲ ನೃತ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT