ಶುಕ್ರವಾರ, ಫೆಬ್ರವರಿ 3, 2023
18 °C
ಜಿಗಣಿ ಬಳಿ ವಿಶ್ವ ಯೋಗಾಸನ ಸ್ಪರ್ಧೆಗೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಚಾಲನೆ

ಒಲಿಂಪಿಕ್ಸ್‌ಗೆ ಯೋಗ ಸೇರ್ಪಡೆಗೆ ಕೇಂದ್ರ ಯತ್ನ: ಸಿಎಂ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ಮುಂಬರುವ ಒಲಿಂಪಿಕ್ಸ್‌ನಲ್ಲಿ ಯೋಗ ಸೇರ್ಪಡೆಗೆ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲ್ಲೂಕಿನ ಜಿಗಣಿ ಸಮೀಪದ ಪ್ರಶಾಂತಿ ಕುಟೀರದ ಎಸ್‌-ವ್ಯಾಸ ಯೋಗ ವಿಶ್ವವಿದ್ಯಾಲಯದಲ್ಲಿ ಯೋಗಾಸನ ವಿಶ್ವಕಪ್‌ ಕ್ರೀಡೆಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ವಿಶ್ವ ಯೋಗ ದಿನವನ್ನು ವಿಶ್ವದ ಬಹುತೇಕ ಎಲ್ಲಾ ದೇಶಗಳಲ್ಲಿಯೂ ಆಚರಿಸುವ ಮೂಲಕ ಯೋಗಕ್ಕೆ ಗೌರವ ಮತ್ತು ವಿಶ್ವಮಾನ್ಯತೆ ದೊರೆತಿದೆ. ಯೋಗ ಅತ್ಯಂತ ವೈಜ್ಞಾನಿಕವಾದ ವಿಧಾನವಾಗಿದ್ದು ರೋಗಗಳಿಂದ ಮುಕ್ತಿ ಪಡೆದು ಸದೃಢ ವ್ಯಕ್ತಿಗಳಾಗಲು ದಾರಿದೀಪವಾಗಿದೆ’ ಎಂದರು.

‘ಯೋಗ ವಿಜ್ಞಾನ ಮತ್ತು ಆಧ್ಯಾತ್ಮದ ಸಮ್ಮಿಲನವಾಗಿದೆ. ಹಾಗಾಗಿ ಯೋಗದ ಮೂಲಕ ದೇಹ ಮತ್ತು ಮನಸ್ಸಿಗೆ ಹೊಸ ಚೈತನ್ಯ ನೀಡುತ್ತದೆ. ವ್ಯಕ್ತಿಯ ಚಾರಿತ್ರ್ಯ ನಿರ್ಮಾಣ ಮಾಡುವಲ್ಲಿ ಸ್ಫೂರ್ತಿ, ಶಿಸ್ತು ಮತ್ತು ಮೌಲ್ಯಯುತ ಜೀವನ ನಡೆಸಲು ಅವಶ್ಯಕವಾದ ಶಕ್ತಿಯನ್ನು ಯೋಗ ದೊರಕಿಸಿಕೊಡುತ್ತದೆ. ಯೋಗದ ಮೂಲಕ ಯಶಸ್ಸು ಪಡೆಯಬಹುದು’ ಎಂದರು.

‘ಮಾನವನ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಯೋಗ ಉಪಯುಕ್ತವಾಗಿದೆ. ಒತ್ತಡವನ್ನು ನಿರ್ವಹಿಸುವ ಶಕ್ತಿಯನ್ನು ನೀಡುತ್ತದೆ. ಸಂಶೋಧನೆಗಳ ಪ್ರಕಾರ ಮನುಷ್ಯರು ಮೆದುಳಿನ ಶೇ 6ರಷ್ಟು ಸಾಮರ್ಥ್ಯವನ್ನು ಬಳಸುತ್ತಿದ್ದಾನೆ. ವಿಶೇಷ ವ್ಯಕ್ತಿಗಳು ಶೇ 22ರಷ್ಟು ಮೆದುಳಿನ ಸಾಮರ್ಥ್ಯವನ್ನು ಬಳಸುತ್ತಿದ್ದಾರೆ. ಹಾಗಾಗಿ ಇನ್ನುಳಿದ ಶೇ 78ರಷ್ಟು ಸಾಮರ್ಥ್ಯವನ್ನು ಬಳಕೆಯಾಗುತ್ತಿಲ್ಲ. ಯೋಗದ ಮೂಲಕ ಮೆದುಳಿನ ಬಳಕೆಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದು ಸಂಶೋಧನೆಗಳಿಂದ ದೊರೆತಿದೆ’ ಎಂದರು.

ಯೋಗ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಆರ್.ನಾಗೇಂದ್ರ ಮಾತನಾಡಿ, ವಿಶ್ವ ಯೋಗಾಸನ ಸ್ಪರ್ಧೆಯು ಇದೇ ಮೊದಲ ಬಾರಿಗೆ ಭಾರತದಲ್ಲಿ ನಡೆಯುತ್ತಿದೆ. ವಿವಿಧ ದೇಶಗಳ 200 ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ ಎಂದರು.

ಕಂದಾಯ ಸಚಿವ ಆರ್‌.ಅಶೋಕ್‌, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ಯೋಗಾಸನ ವಿಶ್ವಕಪ್‌ ಕ್ರೀಡೆಗಳ ಫೆಡರೇಷನ್‌ನ ಅಧ್ಯಕ್ಷೆ ರಾಜಶ್ರೀ ಚೌಧರಿ, ಕೆ.ಜೆ.ಪುರುಷೋತ್ತಮ್‌, ಸಬಾಸ್ಟಿಯನ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು