ನಾರಾಯಣಸ್ವಾಮಿ ವಿಎಸ್ಎಸ್ಎನ್ ನೂತನ ಅಧ್ಯಕ್ಷ

7
35 ವರ್ಷಗಳ ಸಹಕಾರ ಸಂಘದ ಒಡನಾಟ* ಅವಿರೋಧ ಆಯ್ಕೆ

ನಾರಾಯಣಸ್ವಾಮಿ ವಿಎಸ್ಎಸ್ಎನ್ ನೂತನ ಅಧ್ಯಕ್ಷ

Published:
Updated:
Deccan Herald

ದೇವನಹಳ್ಳಿ: ಇಲ್ಲಿನ ಬೊಮ್ಮವಾರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಉಗನವಾಡಿ ಗ್ರಾಮದ ಎನ್.ನಾರಾಯಣಸ್ವಾಮಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು.

ಚುನಾವಣೆಯಲ್ಲಿ ಎನ್.ನಾರಾಯಣಸ್ವಾಮಿ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಪರಿಶೀಲಿಸಿದ ಚುನಾವಣಾಧಿಕಾರಿ ವಿ.ಶಿವಕುಮಾರ್ ನಿಗದಿತ ಅವಧಿಯ ನಂತರ ಅಧ್ಯಕ್ಷರ ಆಯ್ಕೆಯನ್ನು ಘೋಷಿಸಿದರು.

ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ವಿಶ್ವನಾಥಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸಹಕಾರ ಸಂಘದ ನಿರ್ದೇಶಕ ಎನ್.ರಾಮಮೂರ್ತಿ, ಪ್ರಸ್ತುತ ವರ್ಷದಲ್ಲಿ ಕೆಸಿಸಿ ಸಾಲ ₹1.32 ಕೋಟಿ, ಸಂಘದ ಸ್ವಂತ ಬಂಡವಾಳದ ಸಾಲ ₹1.9 ಕೋಟಿ, ವ್ಯಾಪಾರ ವಹಿವಾಟು ಸಾಲ ₹85 ಲಕ್ಷ, ಚಿನ್ನಾಭರಣ ಸಾಲ ₹17 ಲಕ್ಷ, ಸ್ತ್ರೀಶಕ್ತಿ ಸಂಘಗಳಿಗೆ ಸಾಲ ₹11.47 ಲಕ್ಷ, ರೈತರಿಗೆ ಮಧ್ಯಮಾವಧಿ ಸಾಲ ₹57 ಲಕ್ಷ ನೀಡಲಾಗಿದೆ ಎಂದರು.

ಬೇಸಿಗೆ ಕಾಲದಲ್ಲಿ ತೋಟಗಾರಿಕೆ ಬೆಳೆ ಬೆಳೆಯುವ ರೈತರನ್ನು ಆಯ್ಕೆ ಮಾಡಿಕೊಂಡು ಸಾಲ ನೀಡಬೇಕು. ಸ್ತ್ರೀಶಕ್ತಿ ಮತ್ತು ಸ್ವಸಹಾಯ ಗುಂಪುಗಳಿಗೆ ಸಾಲ ನೀಡಲು ಹೆಚ್ಚು ಒತ್ತು ನೀಡಿ ಪ್ರಾಮಾಣಿಕವಾಗಿ ನಿಗದಿತ ಅವಧಿಯಲ್ಲಿ ಅವರು ಸಾಲ ತೀರುವಳಿ ಮಾಡಲಿದ್ದಾರೆ ಎಂದು ತಿಳಿಸಿದರು.

ನೂತನ ಅಧ್ಯಕ್ಷ ಎನ್. ನಾರಾಯಣಸ್ವಾಮಿ ಮಾತನಾಡಿ, ‘ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ನಿರ್ದೇಶಕನಾಗಿ ಏಳು ಬಾರಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯನಾಗಿ ಎರಡು ಬಾರಿ ಆಯ್ಕೆಗೊಂಡಿದ್ದೇನೆ. ಸತತ 35 ವರ್ಷಗಳ ಸಹಕಾರ ಸಂಘದ ಒಡನಾಟದಲ್ಲಿ ನಾನೆಂದು ಅಧ್ಯಕ್ಷ ಸ್ಥಾನಕ್ಕಾಗಿ ಹಾತೊರೆದವನಲ್ಲ. ಈಗ ಎಲ್ಲ ನಿರ್ದೇಶಕರು ಅವಿರೋಧ ಆಯ್ಕೆಗೆ ಸಹಕರಿಸಿದ್ದಾರೆ’ ಎಂದರು.

‘ಸಹಕಾರ ಸಂಘಗಳು ರೈತರ ಒಡನಾಡಿಯಾಗಬೇಕು ಎಂಬುದು ನನ್ನ ಅಭಿಪ್ರಾಯ. ರೈತರ ಪ್ರಗತಿಯ ಜತೆಗೆ ಸಂಘ ಬೆಳೆಯಬೇಕು. ಸಹಕಾರ ಸಂಘದಲ್ಲಿಯೇ ಸಾಲ ಪಡೆಯುವಂತೆ ರೈತರ ಮನ ಒಲಿಸಬೇಕು’ ಎಂದರು.

ಸಹಕಾರ ಸಂಘ ಉಪಾಧ್ಯಕ್ಷೆ ಶೈಲಜಾ, ನಿರ್ದೇಶಕರಾದ ಕೋಡಿಮಂಚೇನಹಳ್ಳಿ ನಾಗೇಶ್, ಸುನೀಲ್, ಬಿ.ಕೆ.ದಿನಕರ್, ಮುನಿಯಪ್ಪ, ಬಿ.ಸಿ.ಆನಂದ್ ಕುಮಾರ್, ಡಿಸಿಸಿ ಬ್ಯಾಂಕ್ ಪ್ರತಿನಿಧಿ ರಮೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !