ಸೋಮವಾರ, ಸೆಪ್ಟೆಂಬರ್ 21, 2020
21 °C

ಯೋಧರನ್ನು ಗೌರವಿಸಿ: ಜಿ.ಲಕ್ಷ್ಮೀನಾರಾಯಣಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ನಮ್ಮ ಮನೆಗಿಂತ ದೇಶ ದೊಡ್ಡದು ಎಂಬ ಭಾವದೊಂದಿಗೆ ಗಡಿ ಭಾಗದಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧರಾಗಿ, ನಮ್ಮೆಲ್ಲರನ್ನು ನಿತ್ಯ ರಕ್ಷಣೆ ಮಾಡುವ ಯೋಧರನ್ನು ನಾವೆಲ್ಲರೂ ಗೌರವಿಸಬೇಕು. ಅವರಿಂದ ಪ್ರೇರಣೆಗೊಂಡು ನಾವೆಲ್ಲರು ಶ್ರೇಷ್ಠ ರಾಷ್ಟ್ರನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಲಕ್ಷ್ಮೀನಾರಾಯಣಪ್ಪ ಹೇಳಿದರು.

ಚನ್ನರಾಯಪಟ್ಟಣ ಹೋಬಳಿ ನಲ್ಲೂರು ರೇಷ್ಮೆ ಬೆಳೆಗಾರರ ರೈತರ ಸೇವಾ ಸಂಘದ ಆವರಣದಲ್ಲಿ, ಗಡಿ ಭದ್ರತಾಪಡೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನಲ್ಲೂರು ಚನ್ನಕೇಶವ ಅವರಿಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಚೀನಾ ದೇಶದ ಸೈನಿಕರಂತೆ ನಮ್ಮ ಸೈನಿಕರು ಸಂಬಳಕ್ಕಾಗಿ ಸೇವೆ ಮಾಡುವವರಲ್ಲ. ಬದಲಾಗಿ ನಮ್ಮ ಸೈನಿಕರು ಭಾರತಮಾತೆಯ ಮಾನ ಉಳಿಸಲು, ದೇಶದ ನಾಗರಿಕರನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಬಲ್ಲವರಾಗಿದ್ದಾರೆ. ಇಂತಹ ದೇಶದಲ್ಲಿ ನಾವೆಲ್ಲರೂ ನಮ್ಮ ಸೈನಿಕರ ಬಗ್ಗೆ ವಿಶೇಷ ಗೌರವ ನೀಡಬೇಕು’ ಎಂದರು.

ನಿವೃತ್ತ ಯೋಧ ಚನ್ನಕೇಶವ ಮಾತನಾಡಿ, ‘ಭಾರತದ ಇವತ್ತಿನ ತಾರುಣ್ಯವು ದೇಶದ ರಕ್ಷಣೆಗೆ ಪ್ರಾಮುಖ್ಯತೆ ನೀಡುತ್ತಿರುವುದು ಶ್ಲಾಘನೀಯ. ಇಂತಹ ಶ್ರೇಷ್ಠ ರಾಷ್ಟ್ರದ ನಿರ್ಮಾಣಕ್ಕೆ ನಾವೆಲ್ಲರೂ ಸಹಕಾರ, ಸಮಯ ನೀಡಬೇಕು. ಕಾಶ್ಮೀರದ ಶ್ರೀನಗರದಲ್ಲಿರುವರಿಗೆ ಪಾಕಿಸ್ತಾನಕ್ಕೆ ಹೋಗಬೇಕು ಎಂಬ ಬಯಕೆ ಇಲ್ಲ. ಆದರೆ ಕಾಶ್ಮೀರದಲ್ಲಿದ್ದೇ, ಪಾಕಿಸ್ತಾನಕ್ಕೆ ಜೈಕಾರ ಹಾಕಿ ಕೇಂದ್ರ ಸರ್ಕಾರದಿಂದ ಹೆಚ್ಚು ಅನುದಾನ ಪಡೆಯುವ ಪ್ರಕ್ರಿಯೆಯನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಇದೀಗ ಕೇಂದ್ರ ಸರ್ಕಾರಕ್ಕೆ ಅದು ಅರ್ಥವಾಗಿದೆ. ಭಾರತೀಯ ಯೋಧರಿಗೆ ಯಾವುದೇ ಜವಾಬ್ದಾರಿ ನೀಡಿದರೂ, ಅದನ್ನು ಯಶಸ್ವಿಯಾಗಿ ಮುಗಿಸಿಕೊಂಡು ಬರುತ್ತಾರೆ’ ಎಂದರು.

ನಿವೃತ್ತ ಸೇನೆಯ ಅಧಿಕಾರಿ ರಾಮ್‌ದಾಸ್ ಮಾತನಾಡಿ, ‘ಭಾರತದ ಜನರು ಸುಖ, ನೆಮ್ಮದಿ, ಸುರಕ್ಷಿತವಾಗಿ ಇರಲು ಸೈನಿಕರ ಕರ್ತವ್ಯ, ತ್ಯಾಗ, ಬಲಿದಾನ ಕಾರಣ. ಯಾವುದಾದರೂ ಇಲಾಖೆಯಲ್ಲಿ ಹುತಾತ್ಮರ ಎನ್ನುವುದಾದರೆ ಅದು ಸೈನ್ಯ ಮತ್ತು ಪೊಲೀಸ್‌ ಇಲಾಖೆಯಲ್ಲಿ ಮಾತ್ರವೇ. ಸಮಾಜದ ಸ್ವಾಸ್ಥ್ಯಕ್ಕಾಗಿ ತಮ್ಮ ಪ್ರಾಣಾರ್ಪಣೆ ಮಾಡಿದವರನ್ನು ಹುತಾತ್ಮರು ಎಂದು ಕರೆಯಲಾಗುತ್ತದೆ’ ಎಂದರು.

ನಿವೃತ್ತ ಯೋಧ ಜಯರಾಂ ಮಾತನಾಡಿದರು.

ಹರಿಕಥೆ ದಾಸ ಪುಟ್ಟಣ್ಣ, ಯೋಧ ನಮನ ಟೀಂನ ಪದಾಧಿಕಾರಿಗಳು, ನಿವೃತ್ತ ಯೋಧ ರಾಮಚಂದ್ರ, ಮಾರುತಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ, ನಲ್ಲೂರು ರೇಷ್ಮೆ ಬೆಳೆಗಾರರ ರೈತರ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ಸುಬ್ರಮಣಿ, ನಿರ್ದೇಶಕರಾದ ಆನಂದ್, ಕೃಷ್ಣಪ್ಪ, ಕಾರ್ಯನಿರ್ವಹಣಾಧಿಕಾರಿ ವರದರಾಜ್, ನಲ್ಲೂರು ಗ್ರಾಮದ ಮುಖಂಡರಾದ ಜಯರಾಮಪ್ಪ, ನಾಗೇಶ್, ಚನ್ನಕೇಶವ, ಕೃಷ್ಣಪ್ಪ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು