ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆನೇಕಲ್ | ಮೂಲೆಗುಂಪಾದ ಮುತ್ಯಾಲಮಡುವು ಜಲಪಾತ

ಮೈದುಂಬಿದ ಜಲಪಾತ । ಗುಂಡಿ ರಸ್ತೆ, ಸೌಕರ್ಯ ಕೊರತೆ । ಬಾರದ ಜನ । ಪ್ರವಾಸಿ ತಾಣವಾಗಿ ಅಭಿವೃದ್ಧಿಗೆ ಒತ್ತಾಯ
Published 3 ಜೂನ್ 2024, 4:40 IST
Last Updated 3 ಜೂನ್ 2024, 4:40 IST
ಅಕ್ಷರ ಗಾತ್ರ

ಆನೇಕಲ್ : ಉತ್ತಮ ಮಳೆ ಹಿನ್ನೆಲೆ ತಾಲ್ಲೂಕಿನ ಪ್ರವಾಸಿ ತಾಣ ಮುತ್ಯಾಲಮಡುವಿನಲ್ಲಿ ಜಲಪಾತ ಮೈದುಂಬಿದು ಗತವೈಭವ ಮರುಕಳಿಸಿದೆ. ಆದರೆ ಒಂದು ಪ್ರವಾಸಿ ತಾಣಕ್ಕೆ ಬೇಕಾದ ಸೌಕರ್ಯ ಕೊರತೆಯಿಂದ ಮುತ್ಯಾಲಮಡುವು ಮೂಲೆಗುಂಪಾಗಿದೆ.

ಮುತ್ಯಾಲಮಡುವು ಬೆಂಗಳೂರಿಗೆ ಸಮೀಪವಿದ್ದು, ಇಲ್ಲಿಗೆ ವಾರಾಂತ್ಯದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಆದರೆ ಪ್ರವಾಸಿಗರಿಗೆ ಸೌಲಭ್ಯಗಳಿಲಿಲ್ಲ.

ಸುಣವಾರ ಗೇಟ್‌ನಿಂದ ಮುತ್ಯಾಲಮಡುವುವರೆಗಿನ ಸುಮಾರು ಎರಡು ಕಿ.ಮೀ ರಸ್ತೆ ಹದಗೆಟ್ಟಿದ್ದು, ಗುಂಡಿಗಳಿಂದ ತುಂಬಿದೆ. ಮಳೆಯಿಂದ ಗುಂಡಿಗಳಲ್ಲಿ ನೀರು ತುಂಬಿಕೊಂಡಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ. ಸುಸಜ್ಜಿತ ರಸ್ತೆ ಇಲ್ಲದೆ ಪ್ರವಾಸಿಗರು ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ.

ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ವಿಪುಲ ಅವಕಾಶಗಳಿದ್ದರೂ ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯದಿಂದ ಮುತ್ಯಾಲಮಡುವು ಪ್ರಸಿದ್ಧಿ ಪಡೆದಿಲ್ಲ. ಮಳೆಗಾಲದಲ್ಲಿ ಜನರನ್ನು ಆಕರ್ಷಿಸುವ ಮುತ್ಯಾಲಮಡುವು ಬೇಸಿಗೆಕಾಲದಲ್ಲಿ ನೀರಿಲ್ಲದೇ ಬಣಗುಡುತ್ತದೆ. ವರ್ಷಪೂರ್ತಿ ಪ್ರವಾಸಿಗರು ಈ ತಾಣದಲ್ಲಿ ವಿಹರಿಸಲು ಅನುಕೂಲವಾದ ಸೌಲಭ್ಯ ಕಲ್ಪಿಸಿಕೊಡಬೇಕು ಎಂಬುದು ಪ್ರವಾಸಿಗರ ಒತ್ತಾಯ.

ಆನೇಕಲ್‌ನ ಸೆರಗಿನಲ್ಲಿರುವ ಮುತ್ಯಾಲಮಡುವು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಇಲ್ಲಿನ ಜಲಪಾತ ಹಾಗೂ ಕಣಿವೆ ನೋಡಲು ನಯನ ಮನೋಹರವಾಗಿದೆ. ಆದರೆ ಇಲ್ಲಿನ ಕೆಲವು ಅವ್ಯವಸ್ಥೆಯಿಂದ ಪ್ರವಾಸಿಗರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ.

ಹೀಗಾಗಿ ಮುತ್ಯಾಲಮಡುವು ಅಭಿವೃದ್ಧಿಗೆ ಪ್ರತ್ಯೇಕ ಕ್ರಿಯಾ ಯೋಜನೆ ತಯಾರಿಸಿ, ಪ್ರಮುಖ ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸಬೇಕೆಂದು ಪ್ರವಾಸಿಗರ ಆಗ್ರಹ.

ಪೊಲೀಸ್‌ ಚೌಕಿ ಅವಶ್ಯಕ: ಪ್ರವಾಸಿಗರ ಸುರಕ್ಷತೆಗಾಗಿ ಇಲ್ಲಿಂದು ಪೊಲೀಸ್‌ ಚೌಕಿ ಸ್ಥಾಪಿಸಬೇಕಿದೆ. ಪೊಲೀಸ್‌ ಇಲಾಖೆಯು ವಾರಾಂತ್ಯದ ದಿನಗಳಲ್ಲಿ ಪೊಲೀಸ್‌ ಗಸ್ತು ಹೆಚ್ಚಿಸಬೇಕು. ವಿವಿಧೆಡೆಯಿಂದ ಬರುವ ಪ್ರವಾಸಿಗರು ಸುರಕ್ಷತೆಯಿಂದ ಪ್ರವಾಸಿ ತಾಣ ವೀಕ್ಷಿಸಲು ಅನುವು ಮಾಡಿಕೊಡಬೇಕು ಎಂಬುದು ಸ್ಥಳೀಯರ ಮನವಿ.

ನಿರ್ವಹಣೆಯಿಲ್ಲದ ಉದ್ಯಾನ : ಮುತ್ಯಾಲಮಡುವಿನ ಕಣಿವೆಯ ಮೇಲ್ಭಾಗದಲ್ಲಿ ನಿರ್ಮಿಸಿರುವ ಉದ್ಯಾನ ನಿರ್ವಹಣೆ ಇಲ್ಲದೇ ಗಿಡಗಂಟಿಗಳಿಂದ ಆವೃತ್ತವಾಗಿದ್ದು, ಸೊರಗಿದೆ. ಉದ್ಯಾನದ ಒಳಗೆ ಕಾಲಿಡಲು ಸಾಧ್ಯವಾಗದಂತೆ ಗಿಡ ಗಂಟಿಗಳು ಬೆಳೆದಿವೆ. ಮುತ್ಯಾಲಮಡುವಿನಲ್ಲಿ ಎಲ್ಲಂದರಲ್ಲಿ ಮದ್ಯದ ಬಾಟಲ್‌ಗಳು, ಪ್ಲಾಸ್ಟಿಕ್‌ ತ್ಯಾಜ್ಯ ಎಸೆಯಲಾಗಿದೆ. ಇದರಿಂದ‌ ಇತ್ತ ಪ್ರವಾಸಿಗರು ಉದ್ಯಾನ ಪ್ರವೇಶಿಸುತ್ತಿಲ್ಲ. ಗಿಡಗೆಂಟಿ ಮತ್ತು ತ್ಯಾಜ್ಯವನ್ನು ತೆರವುಗೊಳಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯ.

ವಾರಾಂತ್ಯದಲ್ಲಿ ನೀರಿನ ಕಾರಂಜಿ ವ್ಯವಸ್ಥೆ ಮಾಡಿದರೆ ಉದ್ಯಾನದಲ್ಲಿ ಕುಳಿತು ನೋಡಲು ಅನುಕೂಲವಿದೆ. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಕಾಳಜಿ ವಹಿಸಬೇಕು. ಮಕ್ಕಳ ಆಟದ ಉಪಕರಣಗಳನ್ನು ಅಳವಡಿಸಬೆಕೆಂದು ಇದರಿಂದ ಪ್ರವಾಸಿಗರನ್ನು ಆಕರ್ಷಿಸಬಹುದು. ಪ್ರವಾಸಿಗರು ಹೆಚ್ಚಿದಂತೆ ಸ್ಥಳೀಯರು ವ್ಯಾಪಾರವು ವೃದ್ಧಿಯಾಗುತ್ತದೆ ಎನ್ನತ್ತಾರೆ ವ್ಯಾಪಾರಿಗಳು.

ಅಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಮುತ್ಯಾಲಮಡುವು ಕಣಿವೆ
ಅಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಮುತ್ಯಾಲಮಡುವು ಕಣಿವೆ
ಮುತ್ಯಾಲಮಡುವಿನಲ್ಲಿ ನೀರಾಟದಲ್ಲಿ ತೊಡಗಿರುವ ಯುವಕರು
ಮುತ್ಯಾಲಮಡುವಿನಲ್ಲಿ ನೀರಾಟದಲ್ಲಿ ತೊಡಗಿರುವ ಯುವಕರು
ಮುತ್ಯಾಲಮಡುವಿನಲ್ಲಿ ನಿರ್ವಹಣೆಯಿಲ್ಲದೇ ಗಿಡಗಂಟಿಗಳಿಂದ ಆವೃತ್ತವಾಗಿರುವ ಉದ್ಯಾನವನ
ಮುತ್ಯಾಲಮಡುವಿನಲ್ಲಿ ನಿರ್ವಹಣೆಯಿಲ್ಲದೇ ಗಿಡಗಂಟಿಗಳಿಂದ ಆವೃತ್ತವಾಗಿರುವ ಉದ್ಯಾನವನ
ಕಣಿವೆಯಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ
ಕಣಿವೆಯಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ
ಮುತ್ಯಾಲಮಡುವು ಕಣಿವೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಸ್ಥಿತಿ
ಮುತ್ಯಾಲಮಡುವು ಕಣಿವೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಸ್ಥಿತಿ

ಮುತ್ಯಾಲಮಡುವು ಅಭಿವೃದ್ಧಿಗೆ ಆಗಬೇಕಿರುವ ಕಾರ್ಯಗಳ ಬಗ್ಗೆ ಪ್ರವಾಸೋದ್ಯಮ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯ ಸಚಿವ ಭೇಟಿಯಾಗಿ ಚರ್ಚಿಸಿ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲಾಗುವುದು

-ಬಿ.ಶಿವಣ್ಣ, ಆನೇಕಲ್‌ ಶಾಸಕ

ಪ್ರಕೃತಿಯ ಸೊಬಗು ನೀರಿಲ್ಲದೇ ಬತ್ತಿಹೋಗಿದ್ದ ಮುತ್ಯಾಲಮಡುವು ಜಲಪಾತ  ಮಳೆಯಿಂದಾಗಿ ಬೋರ್ಗರೆಯುತ್ತಿದ್ದು ಮುತ್ತಗಳಂತೆ ಚಿಮ್ಮುವ ನೀರಹನಿಗಳು ಹಸಿರಿನ ಪ್ರಕೃತಿಯ ನಡುವೆ ಹೊಸ ಪ್ರಪಂಚ ಸೃಷ್ಠಿ ಮಾಡುತ್ತದೆ. ಅಚ್ಚ ಹಸಿರಿನ ಸುಂದರ ತಾಣದ ನಡುವೆ 400ಕ್ಕೂ ಹೆಚ್ಚು ಮೆಟ್ಟಿಲು ಇಳಿದು ಕಣಿವೆ ತಲುಪಿದರೆ ಜಲಪಾತದ ದೃಶ್ಯ ಆಯಾಸವನ್ನು ಮರೆಯಾಗಿಸುತ್ತದೆ. 300ಅಡಿಗಳಿಗೂ ಎತ್ತರದಿಂದ ಹರಿಯುವ ನೀರು ಜನರನ್ನು ಕೈಬೀಸಿ ಕರೆಯುತ್ತಿದೆ. ಆನೇಕಲ್‌ ಭೌಗೋಳಿಕ ಹೆಗ್ಗುರುತು ಆನೇಕಲ್‌ ಮುತ್ಯಾಲಮಡುವು ಜಲಪಾತ ಅಭಿವೃದ್ಧಿ ಪಡಿಸುವುದರಿಂದ ಪ್ರವಾಸಿತಾಣಕ್ಕೆ ಹೆಚ್ಚಿನ ಪ್ರವಾಸಿಗರು ಆಗಮಿಸಲು ಅನುಕೂಲವಾಗುತ್ತದೆ. ಮುತ್ಯಾಲಮಡುವು ಆನೇಕಲ್‌ಗೆ ಒಂದು ಭೌಗೋಳಿಕ ಹೆಗ್ಗುರು. ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಆಗಬೇಕು. ಮುತ್ಯಾಲಮಡುವಿನಲ್ಲಿ ಹಲವಾರು ಸಿನಿಮಾ ಚಿತ್ರೀಕರಣವಾಗಿದೆ. ಇಲ್ಲಿನ ಕಣಿವೆಯ ದೃಶ್ಯ ಕಣ್ತುಂಬಿಕೊಳ್ಳಲು ದಶಕಗಳ ಹಿಂದೆ ವೀಕ್ಷಣಾ ಗೋಪುರ ನಿರ್ಮಿಸಲಾಗಿತ್ತು. ಆದರೆ ಇಂದು ವೀಕ್ಷಣಾ ಗೋಪುರ ಪ್ರೇಮಿಗಳ ಹೆಸರಿನ ಕೆತ್ತನೆಯಿಂದಾಗಿ ವಿಲಕ್ಷಣವಾಗಿದೆ. ಹಾಗಾಗಿ ಅಭಿವೃದ್ಧಿ ಕಾರ್ಯ ಕೈಗೊಂಡು ಪ್ರವಾಸಿಗರ ನೆಚ್ಚಿನ ತಾಣವಾಗಿ ಮಾಡಬೇಕು ಎಸ್‌.ಜಗನ್ನಾಥರಾವ್‌ ಬಹುಳೆ ಲೇಖಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT