ಶನಿವಾರ, ಜುಲೈ 31, 2021
28 °C
137 ಕೆರೆಗಳಿಗೆ ವೃಷಭಾವತಿ ನದಿ ಸಂಸ್ಕರಿಸಿದ ನೀರು: ಶಾಸಕ ಕೃಷ್ಣ ಬೈರೇಗೌಡ

ಯೋಜನೆ ವಿಳಂಬವಾದರೆ ಹೋರಾಟ ‌ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಯಾವುದೇ ಶಾಶ್ವತ ನಿರಾವರಿ ಸೌಲಭ್ಯವಿಲ್ಲದ ಗ್ರಾಮಾಂತರ ಜಿಲ್ಲೆಯಲ್ಲಿ ಎರಡನೇ ಹಂತದ ತ್ಯಾಜ್ಯ ಸಂಸ್ಕರಿಸಿದ ನೀರು 137 ಕೆರೆಗಳಿಗೆ ನೀರು ಹರಿಸುವ ವೃಷಭಾವತಿ ಏತನೀರಾವರಿ ಯೋಜನೆ ಸರ್ಕಾರ ಮುಂದೆ ಪ್ರಸ್ತಾಪ ಇಟ್ಟು ಒತ್ತಾಯಿಸಲಾಗಿದೆ ಎಂದು ಶಾಸಕ ಕೃಷ್ಣ ಬೈರೇಗೌಡ ಹೇಳಿದರು.

ಇಲ್ಲಿನ ವೆಂಕಟಗಿರಿಕೋಟೆ, ಆವತಿ, ಮಾಳಿಗೆನಹಳ್ಳಿ, ಬಿದಲೂರು ದೇವಸ್ಥಾನದ ಕೆರೆ ಮತ್ತು ದೇವನಹಳ್ಳಿ ನಗರದ ಚಿಕ್ಕ ಕೆರೆಗೆ  ಹರಿಯುತ್ತಿರುವ ನಾಗವಾರ ಮತ್ತು ಹೆಬ್ಬಾಳ ಕೆರೆ ಸಂಸ್ಕರಿಸಿದ ನೀರು ಪರಿಶೀಲನೆ ನಡೆಸಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಕೋಲಾರ – ಚಲ್ಲಘಟ್ಟ ಏತನೀರಾವರಿ ಯೋಜನೆಗೆ ₹1400ಕೋಟಿ ಮತ್ತು ನಾಗವಾರ ಮತ್ತು ಹೆಬ್ಬಾಳ ಕೆರೆ ನೀರು ಸಂಸ್ಕರಿಸಿ ಕೆರೆಗಳಿಗೆ ತುಂಬಿಸುವ ಏತನೀರಾವರಿ ಯೋಜನೆಗೆ ₹1ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಲಾಗಿತ್ತು. ಪ್ರಸ್ತುತ ಎರಡು ಯೋಜನೆಗಳಿಂದ ಬಯಲುಸೀಮೆ ಬರಪೀಡಿತ  ರೈತರಿಗೆ ಆಶಾದಾಯಕವಾಗಿದ್ದು, ಯೋಜನೆ ಸಾರ್ಥಕವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಎಚ್.ಎನ್ ವ್ಯಾಲಿ ವ್ಯಾಪ್ತಿಯಲ್ಲಿ 210 ಎಂ.ಎಲ್.ಡಿ ಸಂಸ್ಕರಿಸಿದ ನೀರು ಕೆರೆಗಳಿಗೆ ಹರಿಸುವ ಯೋಜನೆ ಪೈಕಿ ಒಂದು ಸಂಸ್ಕರಣ ಘಟಕ (ಎಸ್.ಟಿ.ಎಫ್ )ದಿಂದ 110 ಎಂ.ಎಲ್.ಡಿ ಮಾತ್ರ ಸಂಸ್ಕರಣೆಯಾಗುತ್ತಿದೆ. ಮತ್ತೊಂದು ಸಂಸ್ಕರಣ ಘಟಕ ಲಾಕ್ ಡೌನ್ ನಿಂದ ಸ್ಥಗಿತಗೊಂಡಿದೆ. ನಾಲ್ಕಾರು ತಿಂಗಳಲ್ಲಿ ಎನ್.ಎಚ್ ವ್ಯಾಲಿ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬವ ವಿಶ್ವಾಸವಿದೆ. ಹೊಸಕೋಟೆ ತಾಲ್ಲೂಕಿಗೆ ಈಗಾಗಲೇ ಕೆ.ಸಿ.ವ್ಯಾಲಿಯಿಂದ ನೀರು ಹರಿಯುತ್ತಿದೆ ಎಂದು ಹೇಳಿದರು.

ವೃಷಭಾವತಿ ನದಿ ತ್ಯಾಜ್ಯ ನೀರು ಸಂಸ್ಕರಿಸಿ ಕೆರೆಗಳಿಗೆ ಹರಿಸುವ ಯೋಜನೆಗೆ ಈ ಹಿಂದೆಯೇ ಕ್ರಿಯಾಯೋಜನೆ ರೂಪಿಸಲಾಗಿತ್ತು. ಸಮ್ಮಿಶ್ರ ಸರ್ಕಾರದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಬೇಕಿತ್ತು. ರಾಜಕೀಯ ಪಲ್ಲಟದಿಂದ ಅದು ಸಾಧ್ಯವಾಗಿಲ್ಲ. ಈ ಯೋಜನೆಯಿಂದ ತೂಬಗೆರೆ ಹೋಬಳಿ ಸೇರಿದಂತೆ ದೊಡ್ಡಬಳ್ಳಾಪುರ ತಾಲ್ಲೂಕು ವ್ಯಾಪ್ತಿಯಲ್ಲಿನ 78 ಕೆರೆಗಳು ಮತ್ತು ನೆಲಮಂಗಲ ತಾಲ್ಲೂಕಿನ 50 ಕೆರೆಗಳು ಮತ್ತು ದೇವನಹಳ್ಳಿ ತಾಲ್ಲೂಕು ಕುಂದಾಣ ಹೋಬಳಿಯ 9 ಕೆರೆಗಳಿಗೆ ನೀರು ಹರಿಸುವ ಯೋಜನೆ ಇದಾಗಿದೆ. ಇದರ ಬಗ್ಗೆ ಸರ್ಕಾರದ ಮೇಲೆ ಒತ್ತಡ ತರಲಾಗಿದ್ದು ನೀರಾವರಿ ಸಚಿವ ಮಧುಸ್ವಾಮಿ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.

ಮುಖಂಡರಾದ ಕೆ.ವೆಂಕಟಸ್ವಾಮಿ, ಮುನಿನರಸಿಂಹಯ್ಯ, ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಘಟಕದ ಉಪಾಧ್ಯಕ್ಷ ಸಿ.ಜಗನ್ನಾಥ್, ಪ್ರಧಾನ ಕಾರ್ಯದರ್ಶಿ ಆರ್.ರವಿಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಲಕ್ಷ್ಮಿನಾರಾಯಣ, ಕೆ.ಸಿ.ಮಂಜುನಾಥ್, ರಾಧಮ್ಮ , ಕೆ.ಪಿ.ಸಿ.ಸಿ ಸದಸ್ಯರಾದ ಚಿನ್ನಪ್ಪ, ಮುನಿರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಪ್ಪ, ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಪ್ಪ, ಉಪಾಧ್ಯಕ್ಷರಾದ ಎಸ್.ಪಿ.ಮುನಿರಾಜು, ಶಾಂತಕುಮಾರ್, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಕಾಶ, ತಾಲ್ಲೂಕು ಕೃಷಿಕ ಸಮಾಜ ಅಧ್ಯಕ್ಷ ಶ್ರೀನಿವಾಸ್ ಗೌಡ, ನಿರ್ದೇಶಕ ದೇವರಾಜ್, ಖಜಾಂಚಿ ಅವತಿ ವೆಂಕಟೇಶ್, ಖಾದಿ ಬೋರ್ಡ್ ತಾಲ್ಲೂಕು ಘಟಕ ಅಧ್ಯಕ್ಷ ನಾಗೇಗೌಡ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು