ಆನೇಕಲ್ : ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೊಳಿಸುವ ಸಂಬಂಧ ತಹಶೀಲ್ದಾರ್ ಶಿವಪ್ಪ.ಎಚ್.ಲಮಾಣಿ ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಬುಧವಾರ ನಡೆಸಲಾಯಿತು.
ತಹಶೀಲ್ದಾರ್ ಶಿವಪ್ಪ.ಎಚ್.ಲಮಾಣಿ ಮಾತನಾಡಿ, ಆನೇಕಲ್ ತಾಲ್ಲೂಕು ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಎಲ್ಲಾ ಪಟಾಕಿ ಮಾರಾಟಗಾರರ ಗೋದಾಮುಗಳನ್ನು ಪರಿಶೀಲಿಸಲು ಹಾಗೂ ಅಲ್ಲಿ ಹಸಿರು ಪಟಾಕಿಯಲ್ಲದೇ ಇನ್ಯಾವುದೇ ನಿಷೇಧಿತ ಪಟಾಕಿ ದಾಸ್ತಾನು ಮಾಡಿದ್ದಲ್ಲಿ ಇಡೀ ಗೋದಾಮು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಸಂಬಂಧಿಸಿದ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅನಧಿಕೃತವಾಗಿ ಪಟಾಕಿ ಮಳಿಗೆಗಳನ್ನು ತೆರೆದಲ್ಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲು ಮತ್ತು ಮುಟ್ಟುಗೋಲು ಹಾಕಿಕೊಂಡು ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು. ಅತ್ತಿಬೆಲೆ-ಹೊಸೂರು ಚೆಕ್‌ಪೋಸ್ಟ್‌ನಲ್ಲಿ ಪೊಲೀಸ್ ಇಲಾಖೆ, ತೆರಿಗೆ ಅಧಿಕಾರಿಗಳು, ಆರ್‌ಟಿಓ, ತೂಕ ಮತ್ತು ಅಳತೆ ಮಾಪನ ಇಲಾಖೆ ಒಳಗೊಂಡಂತೆ ಎರಡು ತಂಡಗಳನ್ನು ರಚಿಸಿ ಪರಿಶೀಲಿಸಲು ಸೂಚಿಸಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಸೂಚನೆಗಳನ್ನು ಪಾಲಿಸಬೇಕಾಗಿದೆ ಎಂದರು.
ಆನೇಕಲ್ ತಾಲ್ಲೂಕು ವ್ಯಾಪ್ತಿಯಲ್ಲಿ ಪಟಾಕಿಗಳ ನಿಯಂತ್ರಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಜಾಥಾ ನಡೆಸಬೇಕು. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಸ್ಥಳೀಯ ಸಂಸ್ಥೆಗಳು ಕ್ರಮ ವಹಿಸಬೇಕು ಎಂದರು.