ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಸಾವಿರ ಕಲಾವಿದರಿಗೆ ಸಹಾಯಧನ

ಆನೇಕಲ್‌: ಬಲವಂತರಾವ್‌ ಪಾಟೀಲ್‌ ಹೇಳಿಕೆ
Last Updated 3 ಜೂನ್ 2020, 14:19 IST
ಅಕ್ಷರ ಗಾತ್ರ

ಆನೇಕಲ್: ‘ಕೊರೊನಾ ಸಂಕಷ್ಟದ ಸಮಯದಲ್ಲಿ ತೊಂದರೆಗೊಳಗಾಗಿರುವ ಕಲಾವಿದರಿಗೆ ಸರ್ಕಾರದ ವತಿಯಿಂದ ರಾಜ್ಯದಲ್ಲಿ 10 ಸಾವಿರ ಕಲಾವಿದರಿಗೆ ತಲಾ ₹ 2 ಸಾವಿರ ಸಹಾಯಧನವನ್ನು ಅವರ ಬ್ಯಾಂಕ್‌ ಖಾತೆಗಳಿಗೆ ಜಮೆ ಮಾಡಲಾಗಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್‌ ಪಾಟೀಲ್‌ ತಿಳಿಸಿದರು.

ಅವರು ಪಟ್ಟಣದಲ್ಲಿ ಕರುನಾಡ ರಂಗ ಕಲಾವಿದರ ಒಕ್ಕೂಟ ಮತ್ತು ರೋಟರಿ ಸಂಸ್ಥೆಯ ವತಿಯಿಂದ ಕಲಾವಿದರಿಗೆ ಆಹಾರದ ಕಿಟ್‌ಗಳನ್ನು ವಿತರಿಸಿ ಮಾತನಾಡಿದರು.

‘ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಬೇಡಿಕೆಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಅದರಂತೆ ಸರ್ಕಾರ ಎರಡು ಕೋಟಿ ರೂಪಾಯಿ ಹೆಚ್ಚುವರಿಯಾಗಿ ಬಿಡುಗಡೆ ಮಾಡಿದೆ. ಶೀಘ್ರದಲ್ಲಿ ಈ ಅನುದಾನವನ್ನು ಅರ್ಹ ಕಲಾವಿದರ ಖಾತೆಗಳಿಗೆ ಜಮೆ ಮಾಡಲಾಗುವುದು’ ಎಂದರು.

‘ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಹಾಗಾಗಿ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ಸಂಘ ಸಂಸ್ಥೆಗಳು ಆಹಾರದ ಕಿಟ್‌ ನೀಡುವ ಮೂಲಕ ಕಲಾವಿದರಿಗೆ ನೆರವಾಗಿರುವುದು ಅರ್ಥಪೂರ್ಣ’ ಎಂದರು.

ರೋಟರಿ ಸಂಸ್ಥೆಯ ಬಿ.ಕೆ.ಶ್ರೀಧರ್‌ ಮಾತನಾಡಿ, ‘ರೋಟರಿ ಸಂಸ್ಥೆಯ ಧ್ಯೇಯ ಸೇವೆಯಾಗಿದೆ. ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ 26 ಲಕ್ಷ ಆಹಾರ ಕಿಟ್‌ಗಳನ್ನು ದೇಶಾದ್ಯಂತ ರೋಟರಿ ಸಂಸ್ಥೆ ಮೂಲಕ ವಿತರಿಸಲಾಗಿದೆ. ಮಾಸ್ಕ್, ಸ್ಯಾನಿಟೈಸರ್‌, ವೆಂಟಿಲೇಟರ್‌ ಸೇರಿದಂತೆ ಆರೋಗ್ಯ ಪರಿಕರಗಳನ್ನು ವಿವಿಧ ಆಸ್ಪತ್ರೆಗಳಿಗೆ 24 ಕೋಟಿ ವೆಚ್ಚದಲ್ಲಿ ನೀಡಿದೆ’ ಎಂದರು.

‘ಆನೇಕಲ್‌ ತಾಲ್ಲೂಕಿನಲ್ಲಿ ರೋಟರಿ ಸಂಸ್ಥೆಯ ಮೂಲಕ ಶಿಕ್ಷಣ, ಆರೋಗ್ಯ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಕಲಾವಿದರಿಗೆ ನೆರವಾಗುವ ನಿಟ್ಟಿನಲ್ಲಿ ಆಹಾರದ ಕಿಟ್‌ಗಳನ್ನು ನೀಡಲಾಗಿದೆ’ ಎಂದರು.

ರೋಟರಿ ಸಂಸ್ಥೆಯ ಅಮರೇಶ್‌ರೆಡ್ಡಿ, ರಾಮಚಂದ್ರ, ವಿಧಾತ್‌ ವಿದ್ಯಾಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ತಾ.ನಂ.ಕುಮಾರಸ್ವಾಮಿ, ಕರುನಾಡ ರಂಗ ಕಲಾವಿದರ ಒಕ್ಕೂಟದ ತೆಲಗರಹಳ್ಳಿ ದೊಡ್ಡಣ್ಣ, ಡೈರಿ ವೀರಭದ್ರಪ್ಪ, ಚಂದ್ರಪ್ಪ, ಹರಿಕಥೆ ಬಸವರಾಜು, ಸಂಜಯ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT