ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜುಂಡೇಶ್ವರನ ಕೈಚಳಕದಲ್ಲಿ ಮೈದೆಳೆದ ಗಣಪ

ಆನೇಕಲ್‌: ಆರು ದಶಕದಿಂದ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕುಟುಂಬ
Published 17 ಸೆಪ್ಟೆಂಬರ್ 2023, 14:04 IST
Last Updated 17 ಸೆಪ್ಟೆಂಬರ್ 2023, 14:04 IST
ಅಕ್ಷರ ಗಾತ್ರ

ಆನೇಕಲ್ : ಪಟ್ಟಣದಲ್ಲಿ ಆರು ದಶಕಗಳಿಂದ ಗಣಪತಿ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕಲಾವಿದ ನಂಜುಂಡೇಶ್ವರ ಅವರ ಕುಟುಂಬ ಈ ಬಾರಿಯ ಗಣೇಶ ಚತುರ್ಥಿಗೆ ‌ವೈವಿದ್ಯಮ ರೂಪದ ಗಣೇಶ ಮೂರ್ತಿಗಳನ್ನು ತಯಾರಿಸಿದ್ದಾರೆ.

ನಂಜುಂಡೇಶ್ವರ ಅವರ ಮನೆಯಲ್ಲಿ ತಯಾರಿಸಿರುವ ಬಗೆಬಗೆಯ ಗಣಪನ ಮೂರ್ತಿಗಳು ಹಾಗೂ ಮುದ್ದು ಮುದ್ದಾದ ಗುಂಡು ಗೌರಮ್ಮನ ಮೂರ್ತಿಗಳು ಎಲ್ಲರ ಆಕರ್ಷಣೆಯಾಗಿವೆ.

ನಂಜುಂಡೇಶ್ವರ ಅವರು ಆರು ದಶಕಗಳಿಂದಲೂ ವಿಶಿಷ್ಟ ಗಣಪತಿ ಮೂರ್ತಿಗಳ ತಯಾರು ಮಾಡುವಲ್ಲಿ ತನ್ನದೇ ಆದ ಹೆಗ್ಗಳಿಕೆಯನ್ನು ಹೊಂದಿದ್ದು, ತಾಲ್ಲೂಕಿನ ಹಲವು ಗ್ರಾಮಗಳ ಜನರು ಮತ್ತು ನೆರೆಯ ತಮಿಳುನಾಡಿನ ಕೆಲವು ಪ್ರದೇಶಗಳ ಜನರು ಗೌರಿ–ಗಣಪತಿ ಮೂರ್ತಿಗಾಗಿ ಆನೇಕಲ್‌ನ ಕಲಾವಿದ ಎಸ್‌.ನಂಜುಂಡೇಶ್ವರ ಅವರ ಮನೆಗೆ ಬರುವುದು ವಿಶೇಷ.

ಗಣಪನ ಮೂರ್ತಿಗಳನ್ನು ಪೌರಾಣಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಹಿನ್ನೆಲೆಯೊಂದಿಗೆ ಸಿದ್ಧಪಡಿಸುವುದು ಹಾಗೂ ಜನರ ಬೇಡಿಕೆಗೆ ಅನುಗುಣವಾಗಿ ಸಿದ್ಧಪಡಿಸುವ ಕೌಶಲ ನಂಜುಂಡೇಶ್ವರ ಅವರ ಕುಟುಂಬಕ್ಕೆ ಕರಗತವಾಗಿದೆ. ಅವರ ತಾಯಿ ಮುತ್ತಮ್ಮ ಸೇರಿದಂತೆ ಕುಟುಂಬದ ಎಲ್ಲರೂ ಪಾಲ್ಗೊಂಡು ಗೌರಿ–ಗಣಪತಿ ಮೂರ್ತಿಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಾರೆ.

ಈ ಭಾರಿ ಜಾಂಬವ ಗಣಪತಿ, ದಕ್ಷಿಣ ಮೂರ್ತಿ ಗಣಪತಿ, ಕಾಂತಾರ ಗಣಪತಿ, ಯಕ್ಷಗಾನ ಗಣಪತಿ, ಪಂಚಮುಖಿ ಗಣಪತಿ, 16 ಕೈಗಳ ವೀರ ಗಣಪತಿ, ಅಯ್ಯಪ್ಪ ಗಣಪತಿ, ಪಾಂಡುರಂಗ ಗಣಪತಿ, ಸ್ಕಂದ ಗಣಪತಿ, ವೆಂಕಟೇಶ್ವರ ಗಣಪತಿ, ಶುಕ ಗಣಪತಿ(ಗಿಣಿ), ಮಯೂರ ಗಣಪತಿ, ಆಂಜನೇಯ-ಶ್ರೀರಾಮ ಗಣಪತಿ ಸೇರಿದಂತೆ ವಿವಿಧ ರೂಪಗಳಲ್ಲಿ ಗಣಪತಿ ಮೂರ್ತಿಗಳನ್ನು ಸಿದ್ಧಪಡಿಸಿದ್ದು, ಒಂದೊಂದು ಮೂರ್ತಿಗಳು ನೋಡುಗರ ಗಮನ ಸೆಳೆಯುತ್ತದೆ.

ಪರಿಸರ ಸ್ನೇಹಿ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಈ ಬಾರಿ ಪರಿಸರ ಸ್ನೇಹಿ ಗಣಪನ ಮೂರ್ತಿಗಳನ್ನು ಹೆಚ್ಚಾಗಿ ತಯಾರಿಸಲಾಗಿದೆ ಎನ್ನುತ್ತಾರೆ ನಂಜುಂಡೇಶ್ವರ.

ಆನೇಕಲ್‌ನ ಪಸುವಲಪೇಟೆಯಲ್ಲಿರುವ ಭಜನೆಮನೆ ರಸ್ತೆಯ ಮುತ್ತಮ್ಮ ಅವರ ಕುಟುಂಬಕ್ಕೆ ಗಣಪತಿಗಳನ್ನು ತಯಾರು ಮಾಡುವಲ್ಲಿ ಅತ್ಯಂತ ಹೆಚ್ಚಿನ ಬೇಡಿಕೆಯಿದೆ. ಮುತ್ತಮ್ಮ ಅವರು ಕಳೆದ ಆರು ದಶಕಗಳಿಗೂ ಹೆಚ್ಚು ಕಾಲದಿಂದ ಗಣಪತಿಯನ್ನು ತಯಾರು ಮಾಡುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.

ಮುತ್ತಮ್ಮ ಅವರ ಮಕ್ಕಳಾದ ನಂಜುಂಡೇಶ್ವರ, ವೇಣುಗೋಪಾಲ, ನಾಗರಾಜ, ಸೊಸೆಯರಾದ ಕಾತ್ಯಾಯಿಣಿ, ಲೀಲಾವತಿ, ಮಹೇಶ್ವರಿ, ಮತ್ತು ಮೊಮ್ಮಕ್ಕಳಾದ ಮೈತ್ರಾಶ್ರೀ, ಭವ್ಯಾಶ್ರೀ, ಕೃತಿಕಾ, ಪರಿಮಳ ಸೇರಿದಂತೆ ಮನೆ ಮಂದಿಯೆಲ್ಲ ಗೌರಿ ಗಣಪನ ಮೂರ್ತಿಗಳನ್ನು ಸಿದ್ಧಪಡಿಸುವ ಕಾಯಕದಲ್ಲಿ ಆರು ತಿಂಗಳಿಗೂ ಹೆಚ್ಚು ಕಾಲ ತೊಡಗಿಸಿಕೊಂಡಿದ್ದಾರೆ.

ಬೆಂಗಳೂರು, ಆನೇಕಲ್‌ ತಾಲ್ಲೂಕಿನ ಚಂದಾಪುರ, ಹೆಬ್ಬಗೋಡಿ, ವಿವಿಧ ಗ್ರಾಮಗಳ ಜನರು ಗಣಪತಿಯನ್ನು ಕೊಳ್ಳಲು ಆಗಮಿಸುತ್ತಾರೆ. ನೆರೆಯ ತಮಿಳುನಾಡಿನ ಡೆಂಕಣಿಕೋಟೆ, ಹೊಸೂರು, ಥಳೀ ಸೇರಿದಂತೆ ಗಡಿ ಗ್ರಾಮಗಳ ಜನರು ಬರುತ್ತಾರೆ. ಗಣಪನ ಮೂರ್ತಿಗಳು ₹200 ನಿಂದ ₹20 ಸಾವಿರದ ವರೆಗೂ ಮಾರಾಟವಾಗುತ್ತವೆ. ಗಾತ್ರ, ಶೈಲಿಗಳಿಗೆ ತಕ್ಕಂತೆ ಬೆಲೆ ನಿಗದಿ ಮಾಡಲಾಗುತ್ತದೆ ಎನ್ನುತ್ತಾರೆ ಮುತ್ತಮ್ಮ ತಿಳಿಸಿದರು.

ಕಾಂತಾರ ಗಣಪತಿ
ಕಾಂತಾರ ಗಣಪತಿ
ಆದಿ ಜಾಂಬವ ಗಣಪತಿ
ಆದಿ ಜಾಂಬವ ಗಣಪತಿ
ಯಕ್ಷಗಾನ ಗಣಪತಿ
ಯಕ್ಷಗಾನ ಗಣಪತಿ
ಗಣಪತ ತಯಾರಕರಾದ ಮುತ್ತಮ್ಮ
ಗಣಪತ ತಯಾರಕರಾದ ಮುತ್ತಮ್ಮ
ಆನೇಕಲ್‌ನ ಕಲಾವಿದ ಎಸ್‌.ನಂಜುಂಡೇಶ್ವರ
ಆನೇಕಲ್‌ನ ಕಲಾವಿದ ಎಸ್‌.ನಂಜುಂಡೇಶ್ವರ

ಆರು ದಶಕಗಳಿಂದಲೂ ನಮ್ಮ ಕುಟುಂಬ ಗಣಪತಿ ಮೂರ್ತಿ ತಯಾರಿಕೆಯಲ್ಲಿ ತೊಡಗಿದೆ. ಈ ವರ್ಷ ಕಾಂತರ ಗಣಪತಿ ದರ್ಬಾರ್‌ ಗಣಪತಿ ಮತ್ತು ಯಕ್ಷಗಾನ ಗಣಪತಿಗಳಿಗೆ ಹೆಚ್ಚಿನ ಬೇಡಿಕೆ ಇದೆ

-ಮುತ್ತಮ್ಮ ಗಣಪತಿ ತಯಾರಕರು

ಸರ್ಕಾರ ಪಿಓಪಿ ಗಣಪತಿಗಳನ್ನು ನಿಷೇಧ ಮಾಡಬೇಕು. ಇದರಿಂದಾಗಿ ಮಣ್ಣಿನಿಂದ ತಯಾರು ಮಾಡುವ ಕಲಾವಿದರಿಗೆ ಹೆಚ್ಚಿನ ಬೆಲೆ ಬರುತ್ತದೆ. ಪಿಒಪಿ ಗಣಪತಿಗಳಿಂದಾಗಿ ಮಾಲಿನ್ಯ ಉಂಟಾಗುತ್ತದೆ

-ಎಸ್‌.ನಂಜುಂಡೇಶ್ವರ ಗಣಪತಿ ತಯಾರಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT