ಶನಿವಾರ, ಮೇ 21, 2022
25 °C

ಗಂಗಾತಾಯಿ ಜಾತ್ರಾ ಮಹೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಗ್ರಾಮದೇವತೆ ಗಂಗಾತಾಯಿ ದೇವಿಯ ಊರ ಜಾತ್ರೆ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.

ಕಳೆದ ಒಂದು ವಾರದಿಂದ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಂಡಿದ್ದ ಜನರು ಬೆಳಿಗ್ಗೆ ಸಂಭ್ರಮದಿಂದ ತಂಬಿಟ್ಟಿನ ದೀಪಗಳನ್ನು ಮಾಡಿಕೊಂಡು ಬಂದು ಬೆಳಗುವ ಮೂಲಕ ದೇವಿಗೆ ಹರಕೆ ತೀರಿಸಿದರು.

ಪಟ್ಟಣದ ಪ್ರತಿಯೊಂದು ಮನೆಯಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿತ್ತು. ದೂರದ ಊರುಗಳಿಂದ ಬಂದಿದ್ದ ನೆಂಟರು, ಸ್ನೇಹಿತರಿಂದ ಮನೆಗಳಲ್ಲಿ ಸಂಭ್ರಮ ಕಳೆಗಟ್ಟಿತ್ತು. ಮಹಿಳೆಯರು ತಂಬಿಟ್ಟಿನ ದೀಪಗಳು ತಯಾರು ಮಾಡಿದರೆ, ಹೆಣ್ಣು ಮಕ್ಕಳು ರಾತ್ರಿಯಿಡಿ ದೀಪಗಳನ್ನು ಹೊತ್ತುಕೊಂಡು ಹೋಗಲು ಬುಟ್ಟಿಗಳಿಗೆ ಬಣ್ಣ ಬಣ್ಣದ ಹೂಗಳಿಂದ ಅಲಂಕಾರ ಮಾಡಿದ್ದರು.

ದೀಪಗಳನ್ನು ಹೊರುವ ಹೆಣ್ಣು ಮಕ್ಕಳಿಗೆ ವಿಶೇಷ ಅಲಂಕಾರ ಮಾಡಿ, ದೀಪಗಳನ್ನು ಹೊರಿಸಿದರು. ತಮಟೆ ವಾದಕರು ಮನೆ, ಮನೆಗೆ ತೆರಳಿ ದೀಪಗಳನ್ನು ಹೊರಡಿಸಿದರು.

ಕೆಲವು ಮನೆಗಳ ಮುಂದೆ ಸಗಣಿಯಿಂದ ಸಾರಿಸಿ ರಂಗೋಲಿ ಬಿಡಿಸಿದ್ದರು. ಪಟ್ಟಣದ‌ಲ್ಲಿ ತಮಟೆ ಸದ್ದು ಕೇಳಿಸುತ್ತಿತ್ತು. ಜಾತ್ರಾ ಕಮಿಟಿಯಿಂದ ಪಟ್ಟಣದ ಮುಖ್ಯದ್ವಾರಗಳಲ್ಲಿ ನಿರ್ಮಿಸಿದ್ದ ಬೃಹತ್ ಸ್ವಾಗತ ಫಲಕಗಳು ಜನರನ್ನು ಸ್ವಾಗತಿಸಿದವು. ಪ್ರತಿಯೊಂದು ಮನೆಯಿಂದಲೂ ಒಂದೊಂದು ಸಮುದಾಯದವರು ಒಂದೊಂದು ಬಾರಿಗೆ ಒಟ್ಟಿಗೆ ದೇವಾಲಯಕ್ಕೆ ದೀಪಗಳನ್ನು ಹೊತ್ತುಕೊಂಡು ಬಂದು ಬೆಳಗಿಕೊಂಡು
ಹೋಗುತ್ತಿದ್ದರು.

ಜಾತ್ರೆ ಅಂಗವಾಗಿ ಗಂಗಾತಾಯಿ ದೇವಾಲಯದಲ್ಲಿ ದೇವರಿಗೆ ವಿಶೇಷ ಹೂವು ಮತ್ತು ವಿದ್ಯುತ್ ದೀಪಾಂಲಕಾರ ಮಾಡಲಾಗಿತ್ತು. ದೇವಾಲಯಕ್ಕೆ ಬಂದಿದ್ದ ವಿವಿಧ ಗಣ್ಯರು ದೇವರ ದರ್ಶನ ಪಡೆದರು. ಆವರಣದಲ್ಲಿ ಗಣ್ಯರನ್ನು ಅಭಿನಂದಿಸಿದರು.

ಬಾಡೂಟದ ಘಮಲು: ಜಾತ್ರೆ ಅಂಗವಾಗಿ ಮನೆಗಳಲ್ಲಿ ಬಾಡೂಟ ಮಾಡಿಸಿ, ಬಂದಿದ್ದ ಅತಿಥಿಗಳಿಗೆ ಊಟ ಬಡಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ಉಳ್ಳವರು ಬೃಹತ್ ಶಾಮಿಯಾನ ಹಾಕಿ ಮಾಂಸದೂಟ ಬಡಿಸಿದರೆ, ಬಡವರು, ಮಧ್ಯಮ ವರ್ಗದವರು ಮನೆಗೆ ಬಂದಿದ್ದ ಅತಿಥಿಗಳಿಗೆ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ಉಣ ಬಡಿಸಿದರು.

ಪಟ್ಟಣದಲ್ಲಿ ಬೆಳಿಗ್ಗೆ ಮಾಂಸ ಮಾರಾಟದ ಅಂಗಡಿಗಳ ಮುಂದೆ ಜನರು, ಮಾಂಸ ಖರೀದಿಗಾಗಿ ಕಿಕ್ಕಿರಿದು ನಿಂತಿದ್ದ ದೃಶ್ಯಗಳು ಕಂಡು ಬಂದಿತು. ಜಾತ್ರೆ ಅಂಗವಾಗಿ ವಾರದ ಮೊದಲೇ ಮುಂಗಡವಾಗಿ ಇಂತಿಷ್ಟು ಮಾಂಸ ಬೇಕು ಎಂದು ಕೆಲವರು ಕಾಯ್ದಿರಿಸಿದ್ದರು. ಕುರಿ ಮತ್ತು ಕೋಳಿ ಮಾಂಸದ ಬೆಲೆ ತುಸು ಏರಿಕೆ
ಕಂಡಿತ್ತು.

ದೇಗುಲದ ಆವರಣದಲ್ಲಿ ಜಾತ್ರೆ ಅಂಗವಾಗಿ ಸೇರಿದ್ದ ಯುವಕರು ಕೈಗಳಿಗೆ ಟ್ಯಾಟೂಗಳನ್ನು ಹಾಕಿಸಿಕೊಳ್ಳಲು ಮುಗಿಬಿದ್ದಿದ್ದರು. ವಿವಿಧ ಅಟಿಕೆ ಅಂಗಡಿಗಳು ತಲೆ ಎತ್ತಿದ್ದವು. ಮೋಡಕವಿದ ವಾತಾವರಣ ಹಾಗೂ ಆಗಾಗ ಬೀಳುತ್ತಿದ್ದ ಜಿಟಿ ಜಿಟಿ ಮಳೆಯಿಂದ ಎಲ್ಲೆಡೆ ಚಳಿಯ
ವಾತಾವರಣವಿತ್ತು.

ಜಾತ್ರಾ ಮಹೋತ್ಸವದ ಅಂಗವಾಗಿ ಬೆಂಗಳೂರಿನ ಅಣ್ಣಮ್ಮ ತಾಯಿ ದೇವಿಯನ್ನು ಮರಿಯಪ್ಪನವರ ಕುಟುಂಬದವರು ತಂದು ಪೂಜಿಸಿದರು. ದೀಪಗಳನ್ನು ಬೆಳಗಲಿಕ್ಕೆ ಬಂದಂತಹ ಭಕ್ತರು ಅಣ್ಣಮ್ಮ ತಾಯಿಗೆ ಪೂಜೆ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.