ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ನೀಡುವಲ್ಲಿ ಸರ್ಕಾರ ವಿಫಲ: ವಿಧಾನ ಪರಿಷತ್ ಸದಸ್ಯ ಎಸ್. ರವಿ

ಅಗತ್ಯ ವಸ್ತು ಖರೀದಿಗೆ ಜಿಲ್ಲಾಡಳಿತಕ್ಕೆ ₹ 25 ಲಕ್ಷ ಮಂಜೂರು
Last Updated 28 ಮೇ 2021, 4:16 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಜನರ ಬೇಡಿಕೆಗೆ ಅನುಗುಣವಾಗಿ ಲಸಿಕೆ ಪೂರೈಕೆ ಮಾಡುವಲ್ಲಿ ವಿಫಲವಾಗಿರುವ ಸರ್ಕಾರ ಅನುಮತಿ ನೀಡಿದರೆ ₹ 100 ಕೋಟಿ ಮೌಲ್ಯದ ಲಸಿಕೆ ಖರೀದಿಸಿ ಜನರಿಗೆ ಉಚಿತವಾಗಿ ನೀಡುವ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಆದರೆ, ಸರ್ಕಾರ ಅನುಮತಿ ನೀಡುತ್ತಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಎಸ್. ರವಿ ದೂರಿದರು.

ತಾಲ್ಲೂಕಿನ ಬೀರಸಂದ್ರದ ಬಳಿಯಿರುವ ಜಿಲ್ಲಾಡಳಿತ ಭವನದಲ್ಲಿ ಗುರುವಾರ ವಿಧಾನ ಪರಿಷತ್ ಸದಸ್ಯರ ನಿಧಿಯಿಂದ ಕೊರೊನಾ ತಡೆಗಟ್ಟಲು ಆಸ್ಪತ್ರೆಗಳಿಗೆ ಅವಶ್ಯಕ ಸಾಮಗ್ರಿ ಖರೀದಿಗಾಗಿ ₹ 25 ಲಕ್ಷ ಮಂಜೂರಾತಿಯ ಪತ್ರವನ್ನು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅವರಿಗೆ ವಿತರಿಸಿ ಅವರು ಮಾತನಾಡಿದರು.

ಯಾವಾಗ ಲಸಿಕೆ ಕೊಡ್ತೀರಿ ಎಂದು ಜನರು ಕೇಳಿರಲಿಲ್ಲ. ಸರ್ಕಾರವೇ ಹೇಳಿ ಸಮಯಕ್ಕೆ ಸರಿಯಾಗಿ ಲಸಿಕೆ ಪೂರೈಕೆ ಮಾಡುವಲ್ಲಿ ವಿಫಲವಾಗಿದೆ. 18-44 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತದೆ. ನೋಂದಣಿ ಮಾಡಿಕೊಳ್ಳಿ ಎಂದು ಹೇಳಿಕೆ ನೀಡಿ ನಂತರ ಮಾತಿಗೆ ತಪ್ಪಿದೆ ಎಂದರು.

ಈ ಹಿಂದೆ ಕೋವ್ಯಾಕ್ಸಿನ್ ಪಡೆದುಕೊಂಡಿರುವವರು 2ನೇ ಡೋಸ್ ಪಡೆಯಲು ಪರದಾಡುತ್ತಿದ್ದಾರೆ. 75 ದಿನಗಳಾಗಿದ್ದರೂ ಕೊಟ್ಟಿಲ್ಲ. ಮೊದಲ ಡೋಸ್ ಪಡೆಯುವವರಿಗೂ ಸರಿಯಾಗಿ ಲಸಿಕೆ ಪೂರೈಕೆಯಾಗುತ್ತಿಲ್ಲ. ಬೆಡ್ ಬ್ಲಾಕಿಂಗ್ ನಡೆಯುತ್ತಿದೆ ಎಂದು ಸುಳ್ಳು ಆರೋಪ ಮಾಡಿ ಪ್ರಚಾರ ಗಿಟ್ಟಿಸಿಕೊಂಡಿದ್ದ ಸಂಸದರೇ ಖಾಸಗಿ ಕ್ಲಿನಿಕ್‌ಗಳಲ್ಲಿ ₹ 900 ಕೊಟ್ಟು ಲಸಿಕೆ ಹಾಕಿಸಿಕೊಳ್ಳುವಂತೆ ಹೇಳ್ತಾರೆ. ಪೋಸ್ಟರ್‌ಗಳನ್ನು ಹಾಕಿಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಹಾಕಿದ್ದಾರೆ ಎಂದು ದೂರಿದರು.

ಉಚಿತವಾಗಿ ನೀಡಬೇಕಾದ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳ ಜೊತೆಗೆ ಶಾಮೀಲಾಗಿ ಬಡವರಿಂದ ಹಣ ಲೂಟಿ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಅನುಮಾನ ಮೂಡುತ್ತಿದೆ. ಹೆಣದ ಮೇಲೆ ಹಣ ಮಾಡಲಿಕ್ಕೆ ಹೊರಟಿರುವ ಸರ್ಕಾರವಾಗಿ ಕೆಲಸ ಮಾಡುತ್ತಿದೆ. ಈ ಸರ್ಕಾರದಲ್ಲಿ ಬಡವರಿಗೆ ನ್ಯಾಯ ಒದಗಿಸಲಿಕ್ಕೆ ಸಾಧ್ಯವಿಲ್ಲ ಎಂದರು.

ರಾಜ್ಯ ಸರ್ಕಾರದಿಂದ ಘೋಷಣೆ ಮಾಡಿರುವ ಪ್ಯಾಕೇಜ್ ಕೇವಲ ಕುರ್ಚಿ ಉಳಿಸಿಕೊಳ್ಳುವ ನೆಪವಷ್ಟೇ. ಇದರಿಂದ ಯಾರಿಗೂ ಪ್ರಯೋಜನವಾಗುತ್ತಿಲ್ಲ. ಇದೆಲ್ಲಾ ಸುಳ್ಳಿನ ಕಂತೆಯಾಗಿದೆ. ₹ 600 ಕೋಟಿ ಫಸಲ್ ಭೀಮಾ ಯೋಜನೆಯ ಹಣವನ್ನು ಪ್ಯಾಕೇಜ್‌ಗೆ ನೀಡಿದ್ದಾರೆ. ಸಹಕಾರ ಸಂಘಗಳ ಬಡ್ಡಿಯನ್ನೂ ಸೇರಿಸಲಾಗಿದೆ. ಕೊರೊನಾ ಮುಗಿದ ನಂತರ ಹಣ ನೀಡಿದರೆ ಪ್ರಯೋಜನವೇನು? ಎಂದು ಪ್ರಶ್ನಿಸಿದರು.

ದೇವನಹಳ್ಳಿಯಲ್ಲಿ ಜಿಲ್ಲಾ ಆಸ್ಪತ್ರೆಯಿಲ್ಲದಿದ್ದರೂ ಜಿಲ್ಲಾಡಳಿತ ಕೊರೊನಾ ಸೋಂಕು ನಿವಾರಣೆಗಾಗಿ ಸಾಕಷ್ಟು ಕ್ರಮ ಕೈಗೊಂಡಿದೆ. ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದರು.

ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ, ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿ ಅರುಳ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ. ಶ್ರೀನಿವಾಸ್, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಉಪಾಧ್ಯಕ್ಷ ಶಾಂತ್ ಕುಮಾರ್, ಮುಖಂಡ ಬಿ. ರಾಜಣ್ಣ, ಸೋಮಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT