ಗುರುವಾರ , ಮೇ 19, 2022
20 °C
ಮನೆ ಮತ್ತು ಶೆಡ್‌ಗಳಿಗೆ ನುಗ್ಗಿದ ನೀರು: ಕೆರೆಯಂತಾದ ರಸ್ತೆಗಳು

ತಾಲ್ಲೂಕಿನಾದ್ಯಂತ ಭಾರಿ ಮಳೆ: ಮಳೆಗೆ ನಲುಗಿದ ಆನೇಕಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ತಾಲ್ಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ವಿವಿಧ ಗ್ರಾಮಗಳು ಕೆರೆಗಳಾಗಿವೆ. ಮನೆಗಳಿಗೆ, ಶೆಡ್‌ಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಲಕ್ಷಾಂತರ ರೂ. ಬೆಳೆ ಹಾನಿಯಾಗಿದೆ. ಹಲವಾರು ಕೆರೆಗಳು ಕೋಡಿ ಹೋಗಿದ್ದು ರಸ್ತೆಗಳೇ ಕೆರೆಗಳಾಗಿವೆ.

ಆನೇಕಲ್‌ ತಾಲ್ಲೂಕಿನ ಹೆನ್ನಾಗರ ಕೆರೆ ಕೋಡಿ ಹೋಗಿದ್ದು ಕೋಡಿಯ ನೀರು ತೋಟಗಳಿಗೆ, ಶೆಡ್‌ಗಳಿಗೆ ನೀರು ಹರಿದಿದ್ದು ಕೋಳಿಗಳು ಮತ್ತು ಹಂದಿಗಳು ಮೃತಪಟ್ಟಿರುವ ಘಟನೆ ನಡೆದಿದೆ.

ಹೆನ್ನಾಗರ ಕೃಷ್ಣಪ್ಪ ಅವರಿಗೆ ಸೇರಿದ ಕೋಳಿ ಫಾರ್ಮ್‌ ಶೆಡ್‌ಗೆ ನೀರು ನುಗ್ಗಿದ್ದು ಎರಡು ಸಾವಿರ ಕೋಳಿಗಳು ಮೃತಪಟ್ಟಿವೆ. ಹಂದಿ ಶೆಡ್‌ನಲ್ಲಿದ್ದ 25 ಹಂದಿಗಳು ಮೃತಪಟ್ಟಿವೆ. ಹಲವು ತಿಂಗಳುಗಳಿಂದ ಸಾಕಿದ್ದ ಕೋಳಿ ಮತ್ತು ಹಂದಿಗಳು ಮಳೆಯಿಂದಾಗಿ ಸಾವನ್ನಪ್ಪಿದ್ದು ನಷ್ಟ ಉಂಟಾಗಿದೆ. ಸರ್ಕಾರ ಪರಿಹಾರ ನೀಡಬೇಕು ಎಂದು ಕೃಷ್ಣಪ್ಪ ಮನವಿ ಮಾಡಿದರು.

ಹೆನ್ನಾಗರ ಸಮೀಪ ಕುರಿಯ ಶೆಡ್‌ಗಳಿಗೆ ನೀರು ನುಗ್ಗಿದ್ದರಿಂದ ಶೆಡ್‌ಗಳಲ್ಲಿದ್ದ ಕುರಿಗಳನ್ನು ಸ್ಥಳಾಂತರಿಸಲು ರೈತರು ಪರದಾಡಿದರು. ರೈತರು ಹರಸಾಹಸ ಮಾಡಿ ಕುರಿಗಳನ್ನು ಸಾಗಿಸಿದರು.

ರಾಜಕಾಲುವೆ ಒತ್ತುವರಿಯಿಂದಾಗಿ ನೀರು ಕಾಲುವೆಯಲ್ಲಿ ಹರಿಯದೇ ಹೊಲ ಗದ್ದೆಗಳಿಗೆ ಹರಿದಿದ್ದರಿಂದ
ಬಾಳೆ ತೋಟ, ಗುಲಾಬಿ, ಚೆಂಡು, ಸೇವಂತಿಗೆ ತೋಟಗಳು ನೀರಿನಲ್ಲಿ ಮುಳುಗಿವೆ. ಕೊಯ್ಲಿಗೆ ಬಂದಿದ್ದ ರಾಗಿ ಬೆಳೆಯು ನೀರು ಪಾಲಾಗಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆದಿದ್ದ ಬೆಳೆ ಮಳೆಯಿಂದಾಗಿ ಕೈಗೆ ಬಾರದಂತಾಗಿದೆ ಎಂದು ಪ್ರಗತಿಪರ ರೈತ ಎಂ.ಬಾಬುರೆಡ್ಡಿ ತಿಳಿಸಿದರು.

ಆನೇಕಲ್‌ ಪಟ್ಟಣದ ವಾರ್ಡ್‌ ನಂ.6ರಲ್ಲಿ ಶ್ರೀನಿವಾಸ್‌ ಎಂಬುವವರಿಗೆ ಸೇರಿದ ಮನೆಯ ಗೋಡೆ ಮಳೆಯಿಂದಾಗಿ ಕುಸಿದಿದೆ. ಕೈ ಮಗ್ಗದ ಕೆಲಸ ಮಾಡುತ್ತಿದ್ದ ಶ್ರೀನಿವಾಸ್‌ ಅವರ ಮನೆ ಕುಸಿದಿರುವುದು ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಶ್ರೀನಿವಾಸ್‌ ಮಾತನಾಡಿ ಕೈ ಮಗ್ಗ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದೆವು. ಆದರೆ ಮಳೆಯಿಂದಾಗಿ ಮನೆಯ ಗೋಡೆ ಕುಸಿದಿದೆ. ಸರ್ಕಾರ ಮನೆ ಕಟ್ಟಿಕೊಳ್ಳಲು ನೆರವಾಗಬೇಕು ಎಂದು ಮನವಿ ಮಾಡಿದರು.

ಆನೇಕಲ್‌ ಪುರಸಭೆ ವ್ಯಾಪ್ತಿಯ ನಾರಾಯಣಪುರದಲ್ಲಿ ಸುಮಾರು 25ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮನೆಗಳಿಗೆ ನೀರು ಹರಿದಿರುವುದರಿಂದ ದಿನಸಿ ಸಾಮಗ್ರಿಗಳು ನೀರು ಪಾಲಾಗಿವೆ. ಹಾಗಾಗಿ ದಿನದ ಊಟಕ್ಕೂ ತತ್ವಾರ ಉಂಟಾಗಿದೆ. ಕೆಲವು ಸಂಘ ಸಂಸ್ಥೆಗಳು ಆಹಾರ ಪೂರೈಕೆ ಮಾಡುತ್ತಿವೆ.

ಪುರಸಭಾ ಅಧ್ಯಕ್ಷ ಎನ್‌.ಎಸ್.ಪದ್ಮನಾಭ ಮಾತನಾಡಿ, ‘ಕೆಲವು ಮನೆಗಳು ಕೆರೆಯ ಪಕ್ಕದಲ್ಲೇ ಇರುವುದರಿಂದ ನೀರು ಹರಿದಿದೆ. ಪುರಸಭೆ ವತಿಯಿಂದ ರಾಜಕಾಲುವೆಯನ್ನು ತೆರವುಗೊಳಿಸಿ ಕೆರೆಯಲ್ಲಿನ ಹೆಚ್ಚುವರಿ ನೀರು ಹರಿದು ಹೋಗುವಂತೆ ಮಾಡಲಾಗಿದೆ. ಇದರಿಂದಾಗಿ ಮನೆಗಳಿಗೆ ನೀರು ಹರಿಯದಂತೆ ಮಾಡಲಾಗಿದೆ. ಆನೇಕಲ್‌ನಲ್ಲಿ ಕೆಲವು ಮನೆಗಳು ಮಳೆಯಿಂದಾಗಿ ಕುಸಿದಿವೆ. ಇವುಗಳಿಗೆ ಕಂದಾಯ ಇಲಾಖೆಯು ಪರಿಹಾರ ನೀಡಬೇಕು’ ಎಂದರು.

ಕೋಡಿ ಹೋದ ಕೆರೆಗಳು: ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತಾಲ್ಲೂಕಿನ ಹಲವು ಕೆರೆಗಳು ಕೋಡಿ ಹೋಗಿವೆ. ಹೆನ್ನಾಗರ, ಹೀಲಲಿಗೆ ಚೋಳರ ಕೆರೆ, ಮುತ್ತಾನಲ್ಲೂರು, ಬಿದರಗುಪ್ಪೆ, ಚಂದಾಪುರ ಸೇರಿದಂತೆ ಹಲವು ಕೆರೆಗಳು ಹಲವು ವರ್ಷಗಳ ನಂತರ ಕೋಡಿ ಹೋಗಿವೆ.

ಕೆರೆಯಂತಾದ ರಸ್ತೆಗಳು: ಬಿಡುವಿಲ್ಲದೇ ಸುರಿಯುತ್ತಿರುವ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 7ರ ಹೆಬ್ಬಗೋಡಿ ಬಳಿ ರಸ್ತೆಯಲ್ಲಿ ನೀರು ತುಂಬಿದ್ದು ರಸ್ತೆಗಳು ಕೆರೆಯಂತಾಗಿವೆ. ವೀರಸಂದ್ರ ಜಂಕ್ಷನ್‌ ಬಳಿ ಸುತ್ತಮುತ್ತಲಿನ ಪ್ರದೇಶದ ನೀರು ಹರಿದು ವಾಹನಗಳು ಸಂಚರಿಸಬೇಕಾದರೆ ತೀವ್ರ ಸಮಸ್ಯೆ ಉಂಟಾಯಿತು. ದ್ವಿಚಕ್ರ ವಾಹನಗಳು ಪರದಾಡುತ್ತಾ ಸಾಗಿದರೆ ಮಳೆಯ ನೀರಿನಿಂದಾಗಿ ರಸ್ತೆಗಳು ನದಿಯಂತಾಗಿದ್ದರಿಂದ ಕಾರು ಸೇರಿದಂತೆ ಹಲವು ವಾಹನಗಳು ರಸ್ತೆಯ ಮಧ್ಯದಲ್ಲಿ ನಿಂತು ಹೋಗಿದ್ದ ದೃಶ್ಯ ರಾಷ್ಟ್ರೀಯ ಹೆದ್ದಾರಿ 7ರ ವೀರಸಂದ್ರ ಬಳಿ ಕಂಡು ಬಂದಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು