ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುರಿಗಾಹಿಗಳ ಅಲೆಮಾರಿ ಬದುಕು!

ಮೇವು ಹರಿಸುತ್ತಾ ಕುರಿಗಾಹಿಗಳ ಪಯಣ । ವರ್ಷಕ್ಕೆ 2,500 ಕೀ.ಮಿ ನಡಿಗೆ
ಡಿ.ಎನ್.ವೆಂಕಟೇಶ್
Published 6 ಮೇ 2024, 4:22 IST
Last Updated 6 ಮೇ 2024, 4:22 IST
ಅಕ್ಷರ ಗಾತ್ರ

ಹೊಸಕೋಟೆ: ಒಮ್ಮೆ ಮನೆ ಬಿಟ್ಟರೆ ಮತ್ತೆ ಮನೆ ಮುಖ ನೋಡುವುದು ಎರಡು ವರ್ಷದ ಬಳಿಕವೇ. ಈ ನಡುವಿನ ಎರಡು ಸಾವಿರಕ್ಕೂ ಹೆಚ್ಚಿನ ಕಿ.ಮೀ ಪ್ರಯಾಣದಲ್ಲಿ ವೈವಿದ್ಯಮಯ ಜನ, ಸಂಸ್ಕೃತಿಯ ದರ್ಶನ. ಸಾವಿರಾರು ಊರು–ಹೊಲಗಳಲ್ಲಿ ಅಲೆಮಾರಿಯ ಪಯಾಣ...

– ಇದು ಊರೂರು ಸುತ್ತಿ ಕುರಿ ಮೇಯಿಸುತ್ತಾ‌ ತಮ್ಮ ಬದುಕಿನ ಬಂಡಿ ದೂಡುತ್ತಿರುವ ಕುರಿಗಾಯಿಗಳ ಅಲೆಮಾರಿ ಬದುಕಿನ ಚಿತ್ರಣ.

ಉತ್ತಮ ಜೀವನ ನಡೆಸಲು ಬಹುತೇಕರು ತಮ್ಮ ಕುಲಕಸಬು‌ ಬಿಟ್ಟು ನಾನಾ ವೇಷ ಧರಿಸಿ, ಉದ್ಯೋಗ ಮಾಡುತ್ತಾರೆ. ದೇಶ–ವಿದೇಶಕ್ಕೆಲ್ಲ ಪ್ರಯಾಣಿಸುತ್ತಾರೆ. ಆದರೆ ಕುರಿಗಾಹಿಗಳು ತಮ್ಮ ಬದುಕಿಗೆ ಕುರಿಗಳನ್ನೆ ಆಶ್ರಯಿಸಿದ್ದಾರೆ.

ತುಮಕೂರು ಜಿಲ್ಲೆಯ ಮಧುಗಿರಿ ಮತ್ತು ಆಂಧ್ರಪ್ರದೇಶದ ಗಡಿ ಭಾಗದ ರತ್ನಗಿರಿಯ ಗೊಲ್ಲರಹಟ್ಟಿ ಗ್ರಾಮದ ಒಂದೇ ಕುಟುಂಬ ಹತ್ತು ಮಂದಿ ತಮ್ಮ ಕುಟುಂಬದೊಂದಿಗೆ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಹೋಬಳಿಯ ಭಾಗದಲ್ಲಿ 600 ಕುರಿಗಳೊಂದಿಗೆ ಬೀಡು ಬಿಟ್ಟಿದ್ದಾರೆ.

ಕುರಿ ಮೇಯಿಸುತ್ತಾ ಸಾಗುವ ವೇಳೆ ಮಾತಿಗೆ ಸಿಕ್ಕ ಈ ಮಂದಿ ತಮ್ಮ ಅಲೆಮಾರಿಯ ಪಯಣವನ್ನು ಬಿಚ್ಚಿಟ್ಟರು. ತಮ್ಮ ಪಯಣ ಹಾದಿ ಮತ್ತು ಅನುಭವವನ್ನು ಹಂಚಿಕೊಂಡರು.

ನೆಮ್ಮದಿಯ ಕೆಲಸ: ಯಾರದೋ ಕೈ ಕೆಳಗೆ ಕೆಲಸ ಮಾಡುವುದಕ್ಕಿಂತ ನಮ್ಮದೆ ಸ್ವಂತ ಎನಿಸಿಕೊಳ್ಳುವ ಮತ್ತು ಲಾಭದಾಯಕವಾದ ಈ ಕುರಿ ಕಾಯುವ ಕೆಲಸ ನೆಮ್ಮದಿ ತಂದಿದೆ. ಎಲ್ಲಾ ನಮ್ಮ ಸಂಬಂಧಿಗಳೇ ಆದ್ದರಿಂದ ವರ್ಷಾನುಗಟ್ಟಲೆ ಅಲೆಮಾರಿಗಳಾಗಿ ಕುರಿ ಮೇಯಿಸುವುದು ನಮಗೇನು ಕಷ್ಟ ಎನಿಸುತ್ತಿಲ್ಲ. ನಾಯಿನರಿ, ಕಳ್ಳಕಾಕರ ಒಂದಿಷ್ಟ ಸಮಸ್ಯೆ ಬಿಟ್ಟರೆ ಯಾವುದೇ ದೊಡ್ಡ ಮಟ್ಟದ ಸಮಸ್ಯೆ ಈವರೆಗೂ ನಾವು ಎದುರಿಸಿಲ್ಲ ಎನ್ನುತ್ತಾರೆ ಕುರಿಗಾಹಿ ರಂಗನಾಥ್.

ಸುಮಾರು 500 ಕುರಿ ಇರುವ ಕಿರು ಮಂದೆಯಲ್ಲಿ ದಿನಕ್ಕೆ ಐದಾರು ಕುರಿ ಮರಿ ಹಾಕುತ್ತಾವೆ. ಮರಿಗಳನ್ನು ನಾವು ಮಂದೆ ಹಾಕುವ ಸ್ಥಳದಲ್ಲಿಯೇ ಬಿಟ್ಟು ಹೋಗುತ್ತೇವೆ. ಅದನ್ನು ನೋಡಿಕೊಳ್ಳಲು ಇಲ್ಲಿಬ್ಬರನ್ನು ಬಿಟ್ಟು ಹೋಗುತ್ತೇವೆ. ದಿನೇ ದಿನೇ ಮಂದೆ ಬೆಳೆಯುತ್ತದೆ. ಅದರಲ್ಲಿ ಒಂದಿಷ್ಟು ಕುರಿಗಳನ್ನು ಹಣದ ಅವಶ್ಯಕತೆ ಉಂಟಾದಾಗ ಮಾರಾಟ ಮಾಡುತ್ತೇವೆ ಎನ್ನುತ್ತಾರೆ ಕುರಿಗಾಹಿಗಳು.

ಈ ಭಾಗದಲ್ಲಿ ಕುರಿ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇದೆ. ರೈತರು ತಮ್ಮ ಹೊಲಗಳಲ್ಲಿ ಕುರಿ ಮಂದೆ ಹಾಕಲು ಹಣ ನೀಡುತ್ತಾರೆ. ಮಂದೆ ಹಾಕಿಕೊಳ್ಳಲು ಯಾವುದೇ ತಕರಾರಿಲ್ಲದೆ ರೈತರು ಅವಕಾಶ ನೀಡುತ್ತಾರೆ ಎನ್ನುತ್ತಾರೆ ಅವರು.

ಒಮ್ಮೆ ಮನೆ ಬಿಟ್ಟರೆ ಮತ್ತೆ ಮನೆಗೆ ವಾಪಸ್ ಹೋಗಲು ಒಂದೆರಡು ವರ್ಷವೇ ಬೇಕು. ಕುರಿ ಮೇಯಿಸಿಕೊಂಡು ದಿನಕ್ಕೆ 6 ರಿಂದ 8 ಕಿ.ಮೀ ನಡೆಯುತ್ತೇವೆ. ಎರಡು ವರ್ಷದ ಅವಧಿಯಲ್ಲಿ 2,500 ಕೀ.ಮಿ‌ ಗೂ ಅಧಿಕ ನಡೆಯುತ್ತೇವೆ. ಒಮ್ಮೊಮ್ಮೆ ಇದಕ್ಕಿಂತ ಹೆಚ್ಚಿನ ದೂರವೂ ನಡೆಯಬಹುದು.

ಈ ಪಯಣದಲ್ಲಿ ಕುರಿ ಮಂದೆಯ ಗಾತ್ರವನ್ನು ಹೆಚ್ಚಿಸುತ್ತಾ, ತಮ್ಮ ಗೌರವದ ಬದುಕಿಗೂ ಚ್ಯುತಿ ಬಾರದಂತೆ ಬದುಕುತ್ತೇವೆ. ಬೇಸಿಗೆಯ ಊರಿ ಬೇಸಿಲಿನಲ್ಲೂ ನಮ್ಮ ಪಯಣ ನಿರಂತರವಾಗಿ ಸಾಗುತ್ತದೆ ಎನ್ನುತ್ತಾರೆ ರಂಗನಾಥ್, ಸತೀಶ್‌.

ಮಂದೆ ಬಳಿಯಲ್ಲಿಯೇ ಕಟ್ಟಿ ಹಾಕಿ ಮೇಯಿಸುವ ಕುರಿ ಮರಿಗಳು
ಮಂದೆ ಬಳಿಯಲ್ಲಿಯೇ ಕಟ್ಟಿ ಹಾಕಿ ಮೇಯಿಸುವ ಕುರಿ ಮರಿಗಳು

ರಾತ್ರಿ ಪಾಳಿ; ಸವಾಲಿನ ಕೆಲಸ ಬೆಳಗಿನ ಜಾವ ಕುರಿ ಮೇಯಿಸುವಾಗ ತೋಟಗಳಿಗೆ ಹೋಗದಂತೆ ತಪ್ಪಿ ಹೋಗದಂತೆ ಕುರಿ ಕಾಯುವುದು ಒಂದು ಕೆಲಸವಾದರೆ ರಾತ್ರಿ ವೇಳೆ ಕುರಿಗಳನ್ನು ಕಳ್ಳರಿಂದ ನಾಯಿಗಳಿಂದ ಮತ್ತು ಇತರೆ ಕಾಡು ಪ್ರಾಣಿಗಳಿಂದ ಕಾಪಾಡುವುದು ಮತ್ತೊಂದು ಕೆಲಸ. ಹಗಲು ಪಾಳಿಗಿಂತ ರಾತ್ರಿ ಪಾಳಿ ಮುಖ್ಯವಾದದ್ದು. ಎರಡು ಗಂಟೆಗೆ ಇಬ್ಬರಂತೆ ಕುರಿ ಮಂದೆ ಕಾಯುತ್ತೇವೆ. ಹತ್ತು ಜನರಿಂದ ಐದು ಪಾಳಿಗಳಲ್ಲಿ ರಾತ್ರಿ ಕಾಯುತ್ತೇವೆ ಎನ್ನುತ್ತಾರೆ ಕುರಿಗಾಹಿಗಳು. ಹೆದ್ದಾರಿ ಜಾಡು ಹಿಡಿದು ನಡಿಗೆ ಮನೆಯಿಂದ ಹೊರಡುವ ಮಂದೆ ಮತ್ತೆ ಮನೆಗೆ ಸೇರುವ ವೇಳೆಗೆ ದುಪ್ಪಟ್ಟಾಗಿರುತ್ತದೆ. ಇದರಿಂದ ಕೋಟ್ಯಂತರ ವ್ಯವಹಾರ ನಡೆಯುತ್ತದೆ. ಕುರಿಗಳನ್ನು ಎಚ್ಚರಿಕೆಯಿಂದ ಕಾಯುವ ಕೆಲಸವಷ್ಟೇ ಕಷ್ಟ. ರಾಷ್ಟ್ರೀಯ ಹೆದ್ದಾರಿಗಳ ಜಾಡನ್ನೇ ಹಿಡಿದು ನಡೆಯುತ್ತೇವೆ ಎನ್ನುತ್ತಾರೆ ಎನ್ನುತ್ತಾನೆ ಕುರಿಗಾಹಿ ರಂಗನಾಥ ಮತ್ತು ಸತೀಶ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT