ಭಾನುವಾರ, ಮಾರ್ಚ್ 26, 2023
31 °C

ದೊಡ್ಡಬೆಳವಂಗಲ: ಅಕ್ರಮ ಕಲ್ಲು ಗಣಿಗಾರಿಕೆ, ತಹಶೀಲ್ದಾರ್‌ ನೇತೃತ್ವದ ತಂಡ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬೆಳವಂಗಲ (ದೊಡ್ಡಬಳ್ಳಾಪುರ): ತಾಲ್ಲೂಕಿನ ಬೊಮ್ಮನಹಳ್ಳಿಯ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆ ಮೇಲೆ ತಹಶೀಲ್ದಾರ್ ಮೋಹನಕುಮಾರಿ ಮತ್ತು ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಅಧಿಕಾರಿಗಳ ದಾಳಿ ಬೆನ್ನಲ್ಲೇ ಅಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರು ಪರಾರಿಯಾಗಿದ್ದಾರೆ. ದಾಳಿ ನಂತರ ಸ್ಥಳಕ್ಕೆ ಆಗಮಿಸಿದ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ವಿನೋದ್‌ಕುಮಾರ್ ಸಂಬಂಧಪಟ್ಟ ಇಲಾಖೆಗಳಿಂದ ಪರವಾನಗಿ ಪಡೆದಿರುವ ದಾಖಲೆಗಳನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿ ಮನವರಿಕೆ‌ ಮಾಡಿಕೊಡುವ ಪ್ರಯತ್ನ ಮಾಡಿದರು. ಆದರೆ, ಮೇಲ್ನೋಟಕ್ಕೆ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂಬುದು‌ ಮನದಟ್ಟಾದ ಹಿನ್ನೆಲೆಯಲ್ಲಿ ತಹಶೀಲ್ದಾರ್ ನಿಷೇಧಿತ ಪ್ರದೇಶ ಎಂದು ನಾಮಫಲಕ ಹಾಕಿಸಿದರು.

ಈ ಬಗ್ಗೆ ಮಾಹಿತಿ ನೀಡಿದ ತಹಶೀಲ್ದಾರ್ ಮೋಹನಕುಮಾರಿ, ಸರ್ಕಾರಿ ಭೂಮಿಯಲ್ಲಿ ಬಂಡೆಗಳನ್ನು ಒಡೆದು ಖಾಸಗಿ ಉದ್ದೇಶಗಳಿಗೆ ಬಳಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಹೀಗಾಗಿ, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ತಿಳಿಸಲಾಗಿದೆ. ಮಾಲೀಕರ ಬಳಿಯಿರುವ ದಾಖಲೆ ಪರಿಶೀಲಿಸಿ ದೂರು ದಾಖಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಸ್ಥಳ ಸರ್ಕಾರಿ ಭೂಮಿ ಆಗಿದೆ. ಗಣಿಗಾರಿಕೆಗೆ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಪರವಾನಗಿ ನೀಡಿರುವುದು ಆಶ್ಚರ್ಯವೆನಿಸಿದೆ. ಹೀಗಾಗಿ, ದಾಳಿ ನಡೆಸಿ ಈ ಸ್ಥಳ ನಿಷೇಧಿತ ಪ್ರದೇಶವೆಂದು ನಾಮಫಲಕ ಅಳವಡಿಸಿದ್ದೇವೆ. ಸೋಮವಾರ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯು ಪರವಾನಗಿ ನೀಡಿರುವುದನ್ನು ಪ್ರಶ್ನಿಸಿ ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಗೆ ವರದಿ ಸಲ್ಲಿಸಲಾಗುವುದು. ದಾಳಿ ವೇಳೆ ಅಲ್ಲಿ ಕೆಲಸ ನಿರ್ವಹಿಸುವ ಚಾಲಕರು ಪರಾರಿಯಾದ ಕಾರಣ ವಾಹನಗಳನ್ನು ಜಪ್ತಿ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ದಾಳಿ ಸಂದರ್ಭದಲ್ಲಿ ರಾಜಸ್ವ ನಿರೀಕ್ಷಕ ತುಳಸಿರಾಮ್, ದೊಡ್ಡಬೆಳ ವಂಗಲ ಉಪ ತಹಶೀಲ್ದಾರ್ ರಾಜೀವ್ ಸೇರಿದಂತೆ ಕಂದಾಯ ಅಧಿಕಾರಿಗಳು, ಪೊಲೀಸರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು