ಬುಧವಾರ, ಜನವರಿ 22, 2020
21 °C
ಬುಳ್ಳಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದುಸ್ಥಿತಿ

ಹದಗೆಟ್ಟ ಶಾಲಾ ಆವರಣ: ಕಲಿಕೆಗೂ ಕುತ್ತು

ಎಂ.ಮುನಿನಾರಾಯಣ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಶಿಕ್ಷಣ ಪಡೆಯುವ ವಾತಾವರಣ ಉತ್ತಮವಾಗಿರಬೇಕು. ಆದರೆ, ಇಲ್ಲಿನ ಸರ್ಕಾರಿ ಶಾಲೆ ಆವರಣ ಅನೈರ್ಮಲ್ಯದಿಂದ ಕೂಡಿದೆ. ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯ ಇದಕ್ಕೆ ಕಾರಣ ಎಂದು ‍ಪೋಷಕರು ದೂರಿದ್ದಾರೆ.

ಹಾರೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುಳ್ಳಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ದಟ್ಟವಾಗಿ ಬೆಳೆದು ನಿಂತಿರುವ ಪಾರ್ಥೆನಿಯಂ ಹಾಗೂ ಕಳೆಗಿಡಗಳಿಂದಾಗಿ ಶಾಲಾವರಣದಲ್ಲಿ ಸ್ವಚ್ಛತೆ ಇಲ್ಲವಾಗಿದೆ. ಇಲ್ಲಿ ಕಲಿಯುತ್ತಿರುವ ಮಕ್ಕಳ ಶೈಕ್ಷಣಿಕ ಪ್ರಗತಿಗೂ ಮಾರಕವಾಗಿದೆ.

ಉತ್ತಮ ಪರಿಸರ, ಗುಣಮಟ್ಟದ ಶಿಕ್ಷಣ, ಪೌಷ್ಟಿಕಾಯುಕ್ತ ಆಹಾರ, ಪ್ರತಿ ಮಗುವಿನ ಹಕ್ಕು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಏರಿಕೆಗೆ ಸರ್ಕಾರವೂ ಹಲವು ಕಾರ್ಯಕ್ರಮ ರೂಪಿಸಿದೆ. ಆದರೆ, ಇಲ್ಲಿ ಕಲಿಯುತ್ತಿರುವ ಮಕ್ಕಳ ಹಕ್ಕುಗಳಿಗೆ ಚ್ಯುತಿ ಬರುವಂತಹ ವಾತಾವರಣ ನಿರ್ಮಾಣವಾಗಿದೆ. ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವಿನ ಸಮನ್ವಯತೆ ಕೊರತೆ ಪರಿಣಾಮ ಮಕ್ಕಳ ಹಕ್ಕು ಕಸಿಯಲಾಗುತ್ತಿದೆ. ಪಾಠ ಕಲಿಯುವ ಕೊಠಡಿ ಪಕ್ಕದಲ್ಲೇ ಬೆಳೆದು ನಿಂತಿರುವ ಗಿಡಗಳಿಂದ ಬರುವ ಸೊಳ್ಳೆಗಳ ಕಾಟ ಒಂದು ಕಡೆಯಾದರೆ, ಶಾಲೆ ಮುಂಭಾಗದಲ್ಲಿ ಧ್ವಜಾರೋಹಣಕ್ಕಾಗಿ ನೆಟ್ಟಿರುವ ಧ್ವಜಸ್ತಂಭಕ್ಕೆ ದನ – ಕರು ಕಟ್ಟಿಹಾಕಲಾಗುತ್ತಿದೆ.‌ ಮಕ್ಕಳು ಆಟವಾಡಲು ಸೂಕ್ತ ಜಾಗವಿಲ್ಲ. ಶಾಲೆಗೆ ವ್ಯವಸ್ಥಿತವಾದ ಗೇಟ್‌ ಇಲ್ಲದಿರುವ ಹಿನ್ನೆಲೆಯಲ್ಲಿ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಸ್ಥಳೀಯರು ಪ್ರಶ್ನಿಸಿದರೆ ಬೆದರಿಕೆ ಹಾಕುತ್ತಾರೆ ಎಂದು ಹೆಸರೇಳಲಿಚ್ಚಿಸದ ಸ್ಥಳೀಯರೊಬ್ಬರು ಹೇಳಿದರು.

ಶಾಲೆ ಆವರಣದೊಳಗೆ ಇರುವ ಅಂಗನವಾಡಿ ಕೇಂದ್ರದ ಸತ್ತಲೂ ಗಿಡಗಳು ಬೆಳೆದು ನಿಂತಿವೆ. ಮೂರು ತಿಂಗಳ ಹಿಂದಷ್ಟೇ ಗಿಡಗಳನ್ನು ಕಿತ್ತುಹಾಕಿ ಸ್ವಚ್ಛ ಮಾಡಿಸಲಾಗಿದೆ. ಈಚೆಗೆ ಸುರಿದ ಮಳೆಯಿಂದಾಗಿ ಗಿಡಗಳು ಬೆಳೆದು ನಿಂತಿವೆ ಎನ್ನುತ್ತಾರೆ ಸ್ಥಳೀಯ ವ್ಯಕ್ತಿಯೊಬ್ಬರು.

ಶಿಕ್ಷಕಿ ನಾಗವೇಣಿ ಮಾತನಾಡಿ, ಸ್ವಚ್ಛತೆಗಾಗಿ ಯಾವುದೇ ಅನುದಾನ ಇಲ್ಲ. ಪಂಚಾಯಿತಿಗೂ ಅರ್ಜಿ ನೀಡಲಾಗಿದೆ. ಅಡುಗೆ ಸಿಬ್ಬಂದಿಯೇ ಬಿಡುವಿನ ಸಮಯದಲ್ಲಿ ಸ್ವಚ್ಛತೆಯಲ್ಲಿ ತೊಡಗುತ್ತಾರೆ ಎಂದರು. 

ಗ್ರಾಮ ಪಂಚಾಯಿತಿ ಸದಸ್ಯ ರಾಜಪ್ಪ ಮಾತನಾಡಿ, ಮಳೆಗಾಲದಿಂದಾಗಿ ಗಿಡಗಳು ಬೆಳೆದು ನಿಂತಿವೆ. ಪಂಚಾಯಿತಿಗೆ ಯಾವುದೇ ಆದಾಯದ ಮೂಲಗಳಿಲ್ಲ. ಶಾಲಾ ಆವರಣ ಸ್ವಚ್ಛತೆಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ಮಾತನಾಡಿ, ಶಾಲಾ ಆವರಣದಲ್ಲಿ ಗಿಡ ನಾಶಪಡಿಸಲು ಕಳೆ ಔಷಧ ಸಿಂಪಡಣೆ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು. ಶಾಲಾಭಿವೃದ್ಧಿ ಸಮಿತಿ ನಿರ್ವಹಣೆಗಾಗಿ ಇರುವ ಅನುದಾನದಲ್ಲಿ ಸ್ವಚ್ಛತೆ ಕಾಪಾಡಬೇಕು. ಎಲ್ಲದಕ್ಕೂ ಪಂಚಾಯಿತಿ ಕಡೆಗೆ ಬೊಟ್ಟು ಮಾಡಿದರೆ ಪರಿಹಾರ ಕಷ್ಟ ಸಾಧ್ಯ ಎಂದರು. 
 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು