ಭಾನುವಾರ, ಮಾರ್ಚ್ 26, 2023
24 °C

ದೇವನಹಳ್ಳಿ: 7ರಂದು ಜೆಡಿಎಸ್ ಭವನ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ‘ವಿಧಾನಸಭಾ ಕ್ಷೇತ್ರದಲ್ಲಿನ ಯಾವುದೇ ಪ್ರಜೆ ತನ್ನ ಸಮಸ್ಯೆ ಹೇಳಿಕೊಳ್ಳಲು ಹಾಗೂ ಪಕ್ಷದ ಕಾರ್ಯಕರ್ತರ ಸಂಘಟನೆಗಾಗಿ ಜೆಡಿಎಸ್ ಭವನ ನಿರ್ಮಾಣವಾಗಿದ್ದು, ನ. 7ರಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಉದ್ಘಾಟನೆ ಮಾಡಲಿದ್ದಾರೆ’ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ಪಿ.ಎಲ್.ಡಿ. ಬ್ಯಾಂಕಿನಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಟ್ಟಣದಲ್ಲಿ ಈ ಮುಂಚೆ ನಿರ್ಮಾಣಗೊಂಡಿದ್ದ ಜೆಡಿಎಸ್ ಭವನದಲ್ಲಿ ಮೂರನೇ ಅಂತಸ್ತನ್ನು ನನ್ನ ಸ್ವಂತ ಖರ್ಚಿನಿಂದ ಹಾಗೂ ಪಕ್ಷದ ಮುಖಂಡರ ಸಹಕಾರದಿಂದ ನಿರ್ಮಾಣ ಮಾಡಲಾಗಿದೆ. ಇದು ಪಕ್ಷ ಸಂಘಟನೆಯ ಜೊತೆಗೆ ಕ್ಷೇತ್ರದ ಪ್ರತಿಯೊಬ್ಬ ಕಾರ್ಯಕರ್ತನ ಸೊತ್ತಾಗಿದೆ’ ಎಂದು ತಿಳಿಸಿದರು.

ಕ್ಷೇತ್ರದಲ್ಲಿ ಪಕ್ಷ ಸಂಘಟಿಸಲು ಬೂತ್ ಮಟ್ಟದಿಂದಲೇ ಕಾರ್ಯಕರ್ತರ ಪಡೆ ಕೆಲಸ ಮಾಡುತ್ತಿದೆ. ನಮ್ಮ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಕಾರ್ಯಕರ್ತರು ಮನೆ ಮನೆಗೆ ತಿಳಿಸುವಂತಹ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಬೂತ್ ಕಮಿಟಿಗಳನ್ನು ರಚನೆ ಮಾಡಿ ಸಂಘಟನೆಗೆ ಒತ್ತು ನೀಡಲಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು, ಮುಖಂಡರು ಸೇರಲಿದ್ದಾರೆ ಎಂದರು.

ಜೆಡಿಎಸ್ ತಾಲ್ಲೂಕು ಘಟಕದ ಅದ್ಯಕ್ಷ ಆರ್. ಮುನೇಗೌಡ ಮಾತನಾಡಿ, ಪಟ್ಟಣದಲ್ಲಿ ಜೆಡಿಎಸ್ ಭವನದ ಉದ್ಘಾಟನೆಯ ಜೊತೆಗೆ ₹ 80 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪಿ.ಡಿ.ಎಲ್. ಬ್ಯಾಂಕಿನ ಕಟ್ಟಡವನ್ನು ಉದ್ಘಾಟನೆ ಮಾಡಲಿದ್ದಾರೆ ಎಂದರು.

ಕೆಂಪೇಗೌಡ ಸರ್ಕಲ್‌ನಲ್ಲಿ ಕುಮಾರಸ್ವಾಮಿ ಅವರನ್ನು ಸ್ವಾಗತ ಮಾಡಲಾಗುವುದು. ಎರಡೂ ಕಟ್ಟಡಗಳನ್ನು ಉದ್ಘಾಟನೆ ಮಾಡಿದ ನಂತರ ಹಳೇ ಬಸ್ ನಿಲ್ದಾಣದಲ್ಲಿ ಕಾರ್ಯಕರ್ತರ ಸಮಾವೇಶ ನಡೆಯಲಿದೆ ಎಂದು ಹೇಳಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಮುನೇಗೌಡ, ಪಿ.ಎಲ್.ಡಿ. ಬ್ಯಾಂಕಿನ ಅಧ್ಯಕ್ಷ ಮುನಿರಾಜು ಮಾತನಾಡಿದರು. ಜೆಡಿಎಸ್ ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ಜಿ.ಎ. ರವೀಂದ್ರ, ಕಲ್ಯಾಣ್ ಕುಮಾರ್ ಬಾಬು, ಬ್ಯಾಂಕ್ ಸದಸ್ಯೆ ಅನ್ನಪೂರ್ಣಮ್ಮ, ಮುಖಂಡರಾದ ಸಂಪಂಗಪ್ಪ, ಸಿ. ಮುನಿರಾಜು, ಬಸವರಾಜ್, ಪಟಾಲಪ್ಪ, ಆರ್.ಕೆ. ನಂಜೇಗೌಡ, ಕಗ್ಗಲಹಳ್ಳಿ ಗುರಪ್ಪ, ಜಯರಾಮಯ್ಯ, ಹನುಮಪ್ಪ, ಭೀಮರಾಜ್, ಆರ್. ಭರತ್, ಆಶಾ ರವೀಂದ್ರ, ತಾಲ್ಲೂಕು ಸೊಸೈಟಿ ಅಧ್ಯಕ್ಷ ನಾರಾಯಣಸ್ವಾಮಿ, ಮಂಡಿಬೆಲೆ ರಾಜಣ್ಣ, ನೆರಗನಹಳ್ಳಿ ಶ್ರೀನಿವಾಸ್, ಚಿಕ್ಕನಾರಾಯಣಸ್ವಾಮಿ, ಜಗದೀಶ್, ರಾಮಮೂರ್ತಿ, ರಬ್ಬನಹಳ್ಳಿ ಪ್ರಭಾಕರ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.