ವಿಜಯಪುರ(ದೇವನಹಳ್ಳಿ): ದೇಶ ಸುತ್ತಬೇಕು, ಕೋಶ ಓದಬೇಕು ಎನ್ನುವ ಗಾದೆ ಮಾತಿನಂತೆ ಜೀವನಾನುಭವ ಪಡೆಯಲು ಈ ಎರಡು ಕಾರ್ಯ ಮಾಡುವುದು ಉತ್ತಮ. ಬೇರೆ ಬೇರೆ ಪ್ರದೇಶ ಸಂದರ್ಶಿಸಿ ಅಲ್ಲಿನ ಸಮಾಜ, ಜನರ ಜೀವನ ಶೈಲಿ ಅನುಭವಿಸುವುದಾರೆ, ಮತ್ತೊಂದು ಜ್ಞಾನಾರ್ಜನೆ.
ಈ ನಿಟ್ಟಿನಲ್ಲಿ ಪ್ರಕೃತಿ, ನೀರಿನ ಸಂರಕ್ಷಣೆ ಜತೆಗೆ ವನ್ಯಜೀವಿ ಸಂರಕ್ಷಣೆ ಕುರಿತು, ಕನ್ನಡ ಭಾಷೆ ಸೊಗಡು ಎಲ್ಲೆಡೆ ಪಸರಿಸಬೇಕು ಎನ್ನುವ ಧ್ಯೇಯ ಗುರಿಯಾಗಿಸಿಕೊಂಡು ಸೆ.2ರಿಂದ 30ರವರೆಗೆ 8,100 ಕೀ.ಮೀ.ವ್ಯಾಪ್ತಿಯನ್ನು ದ್ವಿಚಕ್ರ ವಾಹನದಲ್ಲಿ ಕ್ರಮಿಸುವ ಮೂಲಕ 29 ದಿನಗಳ ಪ್ರವಾಸ ಮುಗಿಸಿ ಬಂದ ಪಟ್ಟಣದ 46ವರ್ಷದ ಎಸ್.ಕುಮಾರ್ ಅವರನ್ನು ಸ್ಥಳೀಯರು ಮಂಗಳವಾರ ಮುಂಜಾನೆ ಬರಮಾಡಿಕೊಂಡರು.
ಈ ಕುರಿತು ಮಾತನಾಡಿ ಎಸ್.ಕುಮಾರ್, ‘29 ದಿನ ಪ್ರವಾಸದಲ್ಲಿ ಹಲವು ರಾಜ್ಯ, ಅಲ್ಲಿನ ಜನರ ಜೀವನ ಶೈಲಿ, ಅಲ್ಲಿನ ಸಂಸ್ಕೃತಿ ಪರಿಚಯ ಮಾಡಿಕೊಳ್ಳುವುದರ ಜೊತೆಗೆ ಕನ್ನಡ ಭಾಷೆ ಹಿರಿಮೆ ಸಾರಲಾಯಿತು. ಹಲವು ರಾಜ್ಯಗಳ ಜನರು, ಕನ್ನಡದ ಧ್ವಜ ಹಿಡಿದು, ಪೋಟೊ ತೆಗೆಸಿಕೊಂಡು ಕನ್ನಡ ಭಾಷೆ ಕಲಿಯುವ ಪ್ರಯತ್ನ ಮಾಡಿದರು’.
ನಾಡಿನಲ್ಲಿರುವ ಉದ್ಯಾನ, ಜಲಪಾತ, ನಮ್ಮಲ್ಲಿರುವ ಮಠಗಳ ಬಗ್ಗೆ ಮಾತನಾಡಿಸಿ ಮಾಹಿತಿ ಪಡೆದರು. ದ್ವಿಚಕ್ರ ವಾಹನದ ಮೇಲೆ ಅಂಟಿಸಿದ್ದ ಪುನೀತ್ ರಾಜ್ ಕುಮಾರ್ ಫೋಟೊ ಸುಲಭವಾಗಿ ಗುರ್ತಿಸಿ ಉಪಚರಿಸಿದರು. ಗೊತ್ತಿಲ್ಲದ ಮಾರ್ಗಗಳ ಬಗ್ಗೆ ತಿಳಿಸಿಕೊಟ್ಟರು. ಅವರಲ್ಲಿ ಪೊಲೀಸ್ ಅಧಿಕಾರಿಗಳೂ ಇದ್ದರು.
‘ಕೆಲವು ರಾಜ್ಯಗಳಲ್ಲಿ ದ್ವಿಚಕ್ರ ವಾಹನ ಹಿಂಬಾಲಿಸಿದ ಪೊಲೀಸರು ವಾಹನ ಅಡ್ಡಗಟ್ಟಿ ತಡೆದಿದ್ದರು. ಪುನೀತ್ ರಾಜ್ ಕುಮಾರ್ ಪೋಟೊ ನೋಡುತ್ತಿದ್ದಂತೆ ನೀವು ಕರ್ನಾಟಕದವರಾ? ಎಂದು ಪ್ರೀತಿಯಿಂದ ಮಾತನಾಡಿಸಿ ಉಪಚರಿಸಿದರು. ಒಂದು ಹೊಟೇಲ್ ಗೆ ಹೋದಾಗ ತುಂಬಾ ಬಳಲಿದ್ದೆ. ಅಲ್ಲಿನ ಹೊಟೇಲ್ ಮಾಲೀಕರು, ಪುನೀತ್ ರಾಜ್ ಕುಮಾರ್ ಪೋಟೊ ಕಂಡು, ನನ್ನನ್ನು ಸ್ವಲ್ಪ ದೂರದಲ್ಲಿ ಕುಳಿತುಕೊಳ್ಳುವಂತೆ ಹೇಳಿದರು. ಬೇಸರದಿಂದಲೇ ದೂರ ಹೋಗಿ ಕುಳಿತ ನಂತರ, ಅವರು ನನ್ನನ್ನು ಫ್ಯಾನ್ ಕೆಳಗೆ ಕೂರಿಸಿರುವುದು ಅರಿವಿಗೆ ಬಂತು’ ಎಂದು ಭಾವುಕರಾದರು.
‘ನಾನು ತೆರಳಿದ ಬಹುತೇಕ ರಸ್ತೆಗಳು ದಟ್ಟವಾದ ಅರಣ್ಯದಿಂದ ಕೂಡಿದ್ದವು. ಇಲ್ಲಿನ ಹೊಟೇಲ್ ಬಳಿಯಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿ, ರಸ್ತೆಯಲ್ಲಿ ಸಂಚಾರ ಮಾಡುವ ಯಾವುದೇ ಪ್ರಾಣಿಗಳಿಗೆ ಹಾನಿಯುಂಟು ಮಾಡದಂತೆ ಜಾಗೃತಿ ಮೂಡಿಸುತ್ತಿದ್ದೆ. ಬಹಳಷ್ಟು ಮಂದಿ ಈ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು‘ ಎಂದು ಪ್ರವಾಸದ ಅನುಭವ ಹಂಚಿಕೊಂಡರು.
‘ನಾನು ಪ್ರಕೃತಿ, ನೀರಿನ ಸಂರಕ್ಷಣೆ, ವನ್ಯಜೀವಿ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಆರಂಭಿಸಿದ ನನ್ನ ಪ್ರವಾಸಕ್ಕೆ ಸ್ಥಳೀಯ ಮಾಜಿ ಪುರಸಭೆ ಸದಸ್ಯ ಬಲಮುರಿ ಶ್ರೀನಿವಾಸ್, ಚೈತನ್ಯ ತುಂಬಿದರು. ನಾವು ಹೋಗಿದ್ದ ದೇಶದ ಬಹುತೇಕ ರಾಜ್ಯಗಳಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿಸಿದ್ದರು. ಇದರಿಂದಾಗಿ ಎಲ್ಲ ರಾಜ್ಯಗಳಲ್ಲಿ ಸ್ನೇಹಿತರನ್ನು ಸಂಪಾದಿಸಲು ಸಾಧ್ಯವಾಯಿತು‘ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.