ಶನಿವಾರ, ಸೆಪ್ಟೆಂಬರ್ 19, 2020
26 °C

ಕೊಮ್ಮಸಂದ್ರ ಗ್ರಾಮದಲ್ಲಿ ಓಂ ಶಕ್ತಿ ದೇವರ ವಿಗ್ರಹ ಪ್ರತಿಷ್ಠೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ವಿಜಯಪುರ: ಹೋಬಳಿಯ ಕೊಮ್ಮಸಂದ್ರ ಗೇಟ್ನಲ್ಲಿರುವ ಓಂ ಶಕ್ತಿ ದೇವಾಲಯದಲ್ಲಿ ವಿಗ್ರಹ ಪ್ರತಿಷ್ಠಾಪನೆಯನ್ನು ವಿವಿಧ ಪೂಜಾ ವಿಧಿವಿಧಾನಗಳೊಂದಿಗೆ ಶನಿವಾರ ಮಾಡಲಾಯಿತು.

ಮಹಿಳೆಯರೇ ದೇವಾಲಯದಲ್ಲಿ ಕುಳಿತು ಪೂಜಾ ವಿಧಾನಗಳು, ಹೋಮ ಹವನಗಳನ್ನು ನಡೆಸಿದರು. ದೇವಾಲಯಕ್ಕೆ ವಿಶೇಷ ಹೂವಿನ ಅಲಂಕಾರ, ವಿದ್ಯುತ್ ದೀಪಾಲಂಕಾರಗಳನ್ನು ಮಾಡಲಾಗಿತ್ತು. ಪೂರ್ಣ ಕುಂಭ ಕಲಶಗಳೊಂದಿಗೆ ದೇವರಿಗೆ ವಿಶೇಷ ಪೂಜೆ ಮಾಡಿದರು.

ದೇವಾಲಯದ ಮುಖ್ಯಸ್ಥ ಸಿ.ಪ್ರಕಾಶ್ ಮಾತನಾಡಿ, ದೇವಾಲಯವನ್ನು ನಿರ್ಮಾಣ ಮಾಡಿ ಎರಡು ವರ್ಷಗಳಿಗೂ ಹೆಚ್ಚು ಕಾಲವಾಗಿದೆ. ಇಲ್ಲಿ ಮೊದಲು ಪ್ರತಿಷ್ಠಾಪನೆ ಮಾಡಲಾಗಿದ್ದ ವಿಗ್ರಹವನ್ನು ಕಳವು ಮಾಡಲಾಗಿತ್ತು. ನಂತರ 6 ಅಡಿ ಎತ್ತರದ ಓಂ ಶಕ್ತಿ ದೇವತೆಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎಂದರು.

ಪ್ರತಿ ವರ್ಷ ನೂರಾರು ಮಂದಿ ಮಹಿಳೆಯರು ಇಲ್ಲಿಂದ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿಕೊಂಡು ತಮಿಳುನಾಡಿನ ಓಂ ಶಕ್ತಿ ದೇವಾಲಯಕ್ಕೆ ಹೋಗಿ ಬರುತ್ತಿದ್ದಾರೆ ಎಂದು ತಿಳಿಸಿದರು.

ಧಾರ್ಮಿಕ ಕಾರ್ಯಗಳಿಂದ ಜನರು ವಿಮುಖರಾಗುತ್ತಿರುವ ಈ ದಿನಗಳಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಅವರೊಂದಿಗೆ ಯುವಜನರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.

ಹಿರಿಯ ಧಾರ್ಮಿಕ ಮುಖಂಡ ಸಾಧು ಚನ್ನಪ್ಪ ಮಾತನಾಡಿ, ‘ದೇವತಾ ಕಾರ್ಯಗಳನ್ನು ಹೆಚ್ಚು ಮಾಡುವುದರಿಂದ ಹಳ್ಳಿಗಳ ಸುತ್ತಲೂ ಸಂಚರಿಸುವ ದುಷ್ಟ ಶಕ್ತಿಗಳಿಂದ ಜನರಿಗೆ ಯಾವುದೇ ಅಪಾಯ ಸಂಭವಿಸುವುದಿಲ್ಲ ಎನ್ನುವ ನಂಬಿಕೆಯಿದೆ. ಅದರಂತೆ ಇಲ್ಲಿನ ಅನೇಕ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. ದೇವಾಲಯಗಳನ್ನು ಊರಿನ ಹೊರಗೆ ನಿರ್ಮಾಣ ಮಾಡಿರುವುದು ಕೂಡಾ ಇದೇ ಉದ್ದೇಶಕ್ಕಾಗಿಯೇ. ಜನರು ಇಂತಹ ಕಾರ್ಯಗಳಲ್ಲಿ ಕೈ ಜೋಡಿಸಬೇಕು’ ಎಂದರು.

ದೇವಾಲಯದಲ್ಲಿ ಪ್ರತಿಷ್ಠಾಪನಾ ಕಾರ್ಯದಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು. ಮಹಿಳಾ ಭಕ್ತರಿಂದ ಓಂ ಶಕ್ತಿ ದೇವರ ಭಜನೆಗಳು ನಡೆದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.