ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕದಾಸರನ್ನು ಜಾತಿ ಸೀಮಿತಗೊಳಿಸದಿರಿ

Last Updated 14 ನವೆಂಬರ್ 2019, 13:11 IST
ಅಕ್ಷರ ಗಾತ್ರ

ವಿಜಯಪುರ: ಸಾಮಾಜಿಕ ಏಳಿಗೆಗೆ ಶ್ರಮಿಸಿದ, ಅಸಮಾನತೆ ವಿರುದ್ಧ ಧ್ವನಿ ಎತ್ತಿದ ಕನಕದಾಸರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಶೋಚನೀಯ ಎಂದು ಶಿರಡಿ ಸಾಯಿ ಕರಿಯರ್ ಆಕಾಡೆಮಿಯ ತರಬೇತುದಾರ ಕೆ.ಶಶಿಕುಮಾರ್ ಹೇಳಿದರು.

ಇಲ್ಲಿನ ರಾಯಲ್ ಪಬ್ಲಿಕ್‌ ಶಾಲೆಯ ಆವರಣದಲ್ಲಿ ಬುಧವಾರ ಶ್ರೀಕೃಷ್ಣ ಸತ್ಸಂಗ ಸೇವಾ ಸಮಿತಿಯಿಂದ ಆಯೋಜಿಸಿದ್ದ ಶ್ರೀಮದ್ ಭಗವದ್ಗೀತಾ ಪಾರಾಯಣ, ಕೈವಾರ ಯೋಗಿನಾರೇಯಣ ಯತೀಂದ್ರರ ಹಾಗೂ ಕನಕಪುರಂದರ ಗೀತ ತತ್ವಾಮೃತ ರಸಧಾರೆಯ 173ನೇ ಕಾರ್ಯಕ್ರಮ ಹಾಗೂ ಶ್ರೀಕೃಷ್ಣ ಮಾಸಿಕ ದ್ವಾದಶಿ ವಿಚಾರಧಾರೆ ಗೋಷ್ಠಿಯ 124 ನೇ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನಕದಾಸರು ನಮ್ಮೆಲ್ಲರ ದಾರಿ ದೀಪ. ಅವರ ಚಿಂತನೆ, ಆದರ್ಶಗಳು ಎಂದೆಂದಿಗೂ ಅನುಕರಣೀಯ. ಕನಕದಾಸರು ತೋರಿದ ಅರಿವಿನ ದಾರಿಯಲ್ಲಿ ನಾವು ಪರಿವರ್ತನೆಯ ಬದುಕನ್ನು ಕಟ್ಟಿಕೊಳ್ಳುತ್ತ ಸಾಗಿದ್ದೇವೆ. ಶತಮಾನಗಳ ಹಿಂದೆ ಜಾತಿ ಪದ್ಧತಿ, ಸಾಮಾಜಿಕ ಅಸಮಾನತೆಗಳನ್ನು ಹೋಗಲಾಡಿಸಲು ಪ್ರಯತ್ನಿಸಿದರು. ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮತ್ತಷ್ಟೂ ಬದಲಾಗಬೇಕು. ಜನರ ಮನಸ್ಥಿತಿ ಬದಲಾಗಬೇಕು. ಮಹನೀಯರ ಸಂದೇಶಗಳನ್ನು ಸಾರುವ, ಯುವ ಜನತೆಗೆ ಪರಿಚಯಿಸುವ ಕೆಲಸ ಆಗಬೇಕು. ಆಗ ಇಂತಹ ಜಯಂತಿಗೆ ಅರ್ಥ ಬರುತ್ತದೆ ಎಂದರು.

ಪುರಸಭಾ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್‌ಕುಮಾರ್ ಮಾತನಾಡಿ, ‘ಮಹನೀಯರ ತತ್ತ್ವ ಆದರ್ಶಗಳನ್ನು ಜೀವಂತವಾಗಿಡುವ ನಿಟ್ಟಿನಲ್ಲಿ ಬುದ್ಧ, ಬಸವಣ್ಣ, ಕನಕದಾಸರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಜನರಲ್ಲಿ ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಸತ್ಸಂಗ ಕಾರ್ಯಕ್ರಮಗಳು ಅನಿವಾರ್ಯವಾಗಿವೆ. ಕನಕದಾಸರ ಜಯಂತಿ ಆಚರಿಸುವುದಷ್ಟೇ ಅಲ್ಲ. ಅವರ ತತ್ತ್ವ ಬೋಧನೆಗಳನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಸತ್ಸಂಗದ ಅಧ್ಯಕ್ಷ ಜೆ.ಎಸ್.ರಾಮಚಂದ್ರಪ್ಪ ಮಾತನಾಡಿ, ‘ಕರ್ನಾಟಕದಲ್ಲಿ 15 ನೇ ಶತಮಾನದಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಕನಕದಾಸರು ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಸಮಾಜದಲ್ಲಿನ ಅಸಮಾನತೆ, ಜಾತಿ ಜಾತಿಗಳ ನಡುವೆ ಇದ್ದ ಕಂದಕಗಳ ವಿರುದ್ಧ ಕನಕದಾಸರು 500 ವರ್ಷಗಳ ಹಿಂದೆಯೇ ಹೋರಾಡಿದರು’ ಎಂದು ಹೇಳಿದರು.

ಸತ್ಸಂಗದ ಸಂಚಾಲಕ ವಿ.ಎನ್.ವೆಂಕಟೇಶ್ ಮಾತನಾಡಿ, ‘ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು 316 ಕೀರ್ತನೆಗಳನ್ನು ರಚಿಸಿದ್ದಾರೆ. ಕನಕದಾಸರ ಭಕ್ತಿ ಪಾರಮ್ಯವನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು. ಕಲ್ಲಿನಲ್ಲಿ ದೇವರಿದ್ದಾನೆಯೇ ಎಂದು ಪ್ರಶ್ನಿಸುವವರಿಗೆ ಉತ್ತರ ರೂಪದಲ್ಲಿ ದೇವರನ್ನೆ ತನ್ನ ಕಡೆಗೆ ತಿರುಗಿಸಿಕೊಳ್ಳುವಲ್ಲಿ ಯಶಸ್ಸು ಕಂಡ ಕನಕದಾಸರೇ ಸಾಕ್ಷಿಯಾಗಿದ್ದಾರೆ’ ಎಂದರು.

ಗಾಯಕರಾದ ಟಿ.ಮಹಾತ್ಮಾಂಜನೇಯ, ನರಸಿಂಹಪ್ಪ ಅವರಿಂದ ಗೀತಗಾಯನ ನಡೆಯಿತು. ಕಾರ್ಯಕ್ರಮಕ್ಕೆ ಗೌರಮ್ಮ ವೆಂಕಟಶಾಮಪ್ಪ ಅವರು ಸೇವಾಕರ್ತರಾಗಿದ್ದರು. ಹೆಣ್ಣು ಮಕ್ಕಳಿಗೆ ಉಚಿತವಾಗಿ ಬಳೆಗಳು ತೊಡಿಸಲಾಯಿತು. ಬಡವರಿಗೆ ಕಂಬಳಿಗಳು ವಿತರಣೆ ಮಾಡಿದರು. ಮಕ್ಕಳಿಗೆ ನೋಟ್ ಪುಸ್ತಕಗಳು ವಿತರಣೆ ಮಾಡಿದರು.

ಭಗವದ್ಗೀತಾ ಪ್ರವಚಕ ಕೇಶವಭಟ್ಟಾಚಾರ್ಯ, ಸತ್ಸಂಗದ ಉಪಾಧ್ಯಕ್ಷ ಪಿ.ನಾರಾಯಣಪ್ಪ, ಮೇಲೂರು ಎಚ್.ವಿ.ರಾಮಕೃಷ್ಣಪ್ಪ, ವಿ.ರಾಮಾಂಜನೇಯ, ಪುರಸಭೆ ಆರೋಗ್ಯ ನಿರೀಕ್ಷಕಿ ಪ್ರಭಾವತಿ, ಬಾಲೇಪುರ ಸರ್ಕಾರಿ ಶಾಲೆಯ ಶಿಕ್ಷಕ ವೆಂಕಟಾಚಲಯ್ಯ, ನೇತ್ರಾವತಿ, ವಿ.ಎನ್.ರಮೇಶ್, ಮುನಿರಾಜು, ವಿ.ಕೃಷ್ಣಪ್ಪ, ವಿ.ನಾಗಯ್ಯ, ಎಸ್.ಆರ್.ಲಕ್ಷ್ಮೀನಾರಾಯಣ, ಆರ್.ರಾಜಶೇಖರ್, ರಘು, ಎಂ. ಮುನಿರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT