ಬುಧವಾರ, ಜನವರಿ 22, 2020
18 °C

ಕಲಾವಿದರಿಗೆ ಆಶ್ರಯ ಕಲ್ಪಿಸುವಲ್ಲಿ ಸರ್ಕಾರಗಳು ವಿಫಲ: ರಾಜೇಂದ್ರಗೌಡ ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕಲಾವಿದರ ಬದುಕಿಗೆ ಆಶ್ರಯ ಕಲ್ಪಿಸುವ ಕಾರ್ಯಕ್ರಮಗಳನ್ನು ಅಧಿಕಾರಕ್ಕೆ ಬಂದ ಯಾವ ಸರ್ಕಾರಗಳೂ ಮಾಡದ ಕಾರಣ ಇಂದು ರಂಗಭೂಮಿ ಕಲಾವಿದರ ಬದುಕು ದುಸ್ತರವಾಗುತ್ತಿದೆ ಎಂದು ಅಖಿಲ ಕರ್ನಾಟಕ ಕನ್ನಡಾಂಬೆ ಹಿತರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ರಾಜೇಂದ್ರಗೌಡ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಕನ್ನಡ ಕಲಾವಿದರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಕನ್ನಡ ದೀಪ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

‘ರಂಗಭೂಮಿ ಕಲಾವಿದರಿಂದ ಗ್ರಾಮೀಣ ಭಾಗದಲ್ಲಿ ಜಾನಪದ ಸಾಹಿತ್ಯ ಜೀವಂತವಾಗಿದೆ. ಇಂತಹ ಕಲಾವಿದರ ಏಳಿಗೆ ಹಾಗೂ ಸಾಹಿತ್ಯದ ಉದ್ಧಾರಕ್ಕಾಗಿ ಪ್ರತ್ಯೇಕವಾದ ಇಲಾಖೆಯಿದ್ದರೂ ನಾಡಿನಲ್ಲಿ ಕಲಾವಿದರು, ಕಲೆ ಅಳಿವಿನಂಚಿಗೆ ಸರಿಯುತ್ತಿರುವುದು ದುರಂತ. ಈ ಬಗ್ಗೆ ಕಲಾವಿದರೂ ಒಗ್ಗಟ್ಟಾಗಿ ಸರ್ಕಾರದ ಕಣ್ಣು ತೆರೆಸುವಂತಹ ಕೆಲಸ ಮಾಡಬೇಕಾಗಿದೆ' ಎಂದರು.

ಬಿ.ಕೆ.ಎಸ್.ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಿ.ಕೆ.ಶಿವಪ್ಪ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಪ್ರಾಮಾಣಿಕವಾಗಿ ಕನ್ನಡದ ಸೇವೆ ಮಾಡುವವರು, ಕಲಾವಿದರಿಗೆ ವೇದಿಕೆಗಳು ಕೊಟ್ಟು ಅವರಿಗಾಗಿ ದುಡಿಯವಂತಹ ವ್ಯಕ್ತಿಗಳು ಎಲೆಮರೆ ಕಾಯಿಯಂತೆ ಕೆಲಸ ಮಾಡುತ್ತಿದ್ದಾರೆ. ಇವರನ್ನು ಗುರ್ತಿಸುವಂತಹ ಕೆಲಸವನ್ನು ಯಾವ ಸರ್ಕಾರವೂ ಮಾಡಲ್ಲ. ಸರ್ಕಾರದ ಗಮನ ಸೆಳೆಯಬೇಕಾದರೆ ಹೋರಾಟ ಮಾಡಬೇಕಾಗಿ ಬಂದಿರುವುದು ಶೋಚನೀಯ ಸಂಗತಿಯಾಗಿದೆ.

‘ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಎಲೆಮರೆ ಕಾಯಿಯಂತೆ ಇರುವ ಕಲಾವಿದರಿಗೆ ವೇದಿಕೆಗಳು ಕಲ್ಪಿಸುವಂತಹ ಕೆಲಸ ಮಾಡಬೇಕು. ಇಂತಹ ವೇದಿಕೆ ಒದಗಿಸಿಕೊಡಬೇಕಾದರೆ ಸುಸಜ್ಜಿತವಾದ ಕಲಾಭವನ ನಿರ್ಮಾಣ ಮಾಡಬೇಕಾಗಿದೆ’ ಎಂದರು.

ಮುಖಂಡ ರಾಮಚಂದ್ರಪ್ಪ ಮಾತನಾಡಿ, ‘ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕು. ಕಲೆ ಜನರಿಗೆ ಉತ್ತಮ ಸಂಸ್ಕಾರ ಕಲಿಸಿ, ಜೀವನದ ಮಾರ್ಗ ತೋರಿಸಿಕೊಡುವ ಶಕ್ತಿ ಹೊಂದಿದೆ. ಇಂತಹ ಕಲೆಯ ಬಗ್ಗೆ ಯುವಜನರನ್ನು ಪ್ರೇರೇಪಿಸಬೇಕು. ಯುವಕರಲ್ಲಿ ಇರುವ ಕಲೆಯನ್ನು ಹೊರಗೆ ತರುವಂತಹ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇದಕ್ಕೆ ಅಗತ್ಯವಾಗಿರುವ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.

ಕಲಾವಿದರು ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳ ತುಣುಕುಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಿದರು.

ರಂಗ ಕಲಾವಿದ ರಬ್ಬನಹಳ್ಳಿ ಮುನಿರಾಜು ಅವರನ್ನು ಸನ್ಮಾನಿಸಿದರು. ಎಂ.ವಿ.ನಾಯ್ಡು ತಂಡದಿಂದ ರಂಗಗೀತೆಗಳ ಗಾಯನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಲಾವಿದರಾದ ವಿ.ಎನ್.ರಮೇಶ್, ಕನಕರಾಜು, ಚಿತ್ರನಿರ್ಮಾಪಕ ಮುನೇಗೌಡ, ರಬ್ಬನಹಳ್ಳಿ ರಾಮಣ್ಣ, ಗೋವಿಂದರಾಜು, ಸುಬ್ರಮಣಿ, ಗಾಯಕ ನರಸಿಂಹಪ್ಪ, ನಾಗರಾಜ್, ಭೈರೇಗೌಡ, ವೆಲ್ಡರ್ ಮುನಿಮಾರಪ್ಪ, ಅಮರನಾಥ್ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು