ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದರ ಬದುಕು ಅಯೋಮಯ: ಮೋಹನ್ ಬಾಬು

‘ರಂಗಭೂಮಿ ಕಲಾವಿದರ ಅಭಿವೃದ್ಧಿ ನಿಗಮ ಸ್ಥಾಪಿಸಿ’
Last Updated 5 ನವೆಂಬರ್ 2020, 1:53 IST
ಅಕ್ಷರ ಗಾತ್ರ

ವಿಜಯಪುರ: ‘ಆಧುನಿಕ ತಂತ್ರಜ್ಞಾನದ ಪ್ರಭಾವ ಹೆಚ್ಚಿದಂತೆ ಸಾಮಾಜಿಕ ನಾಟಕಗಳತ್ತ ಜನರ ಒಲವು ಕಡಿಮೆಯಾಗಿದೆ. ಈ ಕಲೆಯನ್ನು ನಂಬಿದ ಕಲಾವಿದರ ಬದುಕು ಮೂರಾಬಟ್ಟೆಯಾಗಿದೆ. ಸರ್ಕಾರ ರಂಗಭೂಮಿ ಕಲಾವಿದರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವ ಮೂಲಕ ಕಲಾವಿದರ ನೆರವಿಗೆ ಮುಂದಾಗಬೇಕು’ ಎಂದು ಕನ್ನಡ ಕಲಾವಿದರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮೋಹನ್ ಬಾಬು ಒತ್ತಾಯಿಸಿದರು.

ಇಲ್ಲಿನ 6ನೇ ವಾರ್ಡ್‌ನ ಬಿಜೆಪಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ದೀಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಧುನಿಕತೆಯ ಭರಾಟೆಯಿಂದ ಮಾಧ್ಯಮ ತನ್ನ ಇರುವಿಕೆಯನ್ನು ಅಂಗೈಯಲ್ಲೇ ತೋರಿಸುತ್ತಿದೆ. ರಂಗಭೂಮಿ ಕಲಾವಿದರು ಯಾವುದೇ ಪ್ರದೇಶಗಳಿಗೆ ಹೋಗಿ ಕಲೆ ಪ್ರದರ್ಶಿಸಲು ಮುಂದಾದರೂ ವೀಕ್ಷಣೆಗೆ ಜನರು ಬರುವುದಿಲ್ಲ. ಜನರಲ್ಲಿ ಮೊದಲಿದ್ದ ಉತ್ಸಾಹ ಈಗ ಕುಗ್ಗಿದೆ. ಕಲೆಗೆ ಪ್ರೋತ್ಸಾಹ ಎಂಬುದು ನಾಪತ್ತೆಯಾಗಿದೆ. ಕುಡುಕರ ಕಾಟ ಕೂಡ ಹೆಚ್ಚಾಗಿದೆ. ಇದರಿಂದ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಲು ಕಾರಣವಾಗುತ್ತಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ನ ತಾಲ್ಲೂಕು ಘಟಕದ ಅಧ್ಯಕ್ಷ ನಂಜೇಗೌಡ ಮಾತನಾಡಿ, ಬೇರೆ ಕಲೆಗಳಿಂತ ರಂಗಭೂಮಿ ಕಲೆಯಲ್ಲಿ ಹೆಚ್ಚು ಸಂವೇದನಾಶೀಲ ಗುಣವಿದೆ. ಸಮುದಾಯದ ಕಷ್ಟ-ಸುಖಕ್ಕೆ ಸ್ಪಂದಿಸುತ್ತಾ ಈ ಪರಂಪರೆ ಮುಂದುವರಿದಿದೆ. ಚಲನಶೀಲ ಸ್ವಭಾವದ ರಂಗಭೂಮಿಯು ಸ್ವಾತಂತ್ರ್ಯ ಚಳವಳಿ, ಕರ್ನಾಟಕ ಏಕೀಕರಣ ಮೊದಲಾದ ಐತಿಹಾಸಿಕ ಪ್ರಸಂಗ
ಗಳಲ್ಲಿ, ನಾಡು ಕಟ್ಟುವಲ್ಲೂ ಮಹತ್ತರ ಪಾತ್ರ ನಿರ್ವಹಿಸಿದೆ. ಆದರೆ, ಕಲಾವಿದರು ಈಗ ಬದುಕು ಕಟ್ಟಿಕೊಳ್ಳಲು
ಹೆಣಗುತ್ತಿರುವುದು ವಿಪರ್ಯಾಸ ಎಂದು ಹೇಳಿದರು.

ಸಾಹಿತಿ ವಿ.ಎನ್. ರಮೇಶ್ ಮಾತನಾಡಿ, ಕೌಟುಂಬಿಕ ಜವಾಬ್ದಾರಿ ನಿರ್ವಹಿಸಲಿಕ್ಕಾಗಿ ಹೆಂಡತಿ, ಮಕ್ಕಳನ್ನು ಬಿಟ್ಟು ಹೊರಡುವ ಕಲಾವಿದರ ಬಣ್ಣದ ಬದುಕಿನ ಹಿಂದಿರುವ ದುರಂತ ಕಥೆ ಪರದೆಯನ್ನೇ ಕಿರಿದಾಗಿಸುತ್ತದೆ. ಆಯಾಕಾಲದ ಪ್ರೇಕ್ಷಕರ ಅಭಿರುಚಿ, ಆಸಕ್ತಿಗಳಿಗೆ ತಕ್ಕಂತೆ ಕಲಾತ್ಮಕ ರೂಪ ಕೊಡುವ ಪ್ರಯತ್ನದಲ್ಲಿ ರಂಗಭೂಮಿಯ ಭಾಷೆ ಮತ್ತು ಶೈಲಿ ಬದಲಾಗಿದೆ ಎಂದರು.

ರಂಗಭೂಮಿಯಲ್ಲಿ ಮೊದಲಿದ್ದ ಮಡಿವಂತಿಕೆ ಮಾಯವಾಗುತ್ತಿದೆ. ಕಲೆಯ ಬಗೆಗಿನ ಶ್ರದ್ಧೆ ಸಾಯುತ್ತಿದೆ. ಕಲಾವಿದರಲ್ಲಿ ಶಿಸ್ತು ಕಡಿಮೆಯಾಗುತ್ತಿದೆ. ಈ ಕ್ಷೇತ್ರದಲ್ಲಿ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯವಾಗದು ಎಂಬ ಭಾವನೆ ಬೇರೂರಿದ್ದು, ಕಲಾವಿದರ ಕೊರತೆಯೂ ಕಾಡುತ್ತಿದೆ ಎಂದರು.

ಕಸಾಪ ನಗರ ಘಟಕದ ಅಧ್ಯಕ್ಷ ಜೆ.ಆರ್. ಮುನಿವೀರಣ್ಣ ಮಾತನಾಡಿ, ರಂಗಭೂಮಿ ಕಲಾವಿದರಿಗೆ ಆದ್ಯತೆ ಮೇರೆಗೆ ಮಾಸಾಶನ ನೀಡುತ್ತಿಲ್ಲ. ಅವರನ್ನು ಸಮಾಜದ ಕಟ್ಟಕಡೆಯ ಪ್ರಜೆಯಂತೆ ನೋಡಿಕೊಳ್ಳಲಾಗುತ್ತಿದೆ. ಸಂಸಾರ ಸಮೇತ ಊರೂರು ಅಲೆಯುವ ಬಹಳಷ್ಟು ಕಲಾವಿದರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ ಎಂದರು.

ಕಲಾವಿದರಾದ ಸುಬ್ರಮಣಿ, ಭೈರೇಗೌಡ, ವೆಂಕಟೇಶ್, ಗೋವಿಂದರಾಜು, ಸೀತಾರಾಮಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT