ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷಾತ್‌ ಸಮೀಕ್ಷೆ – ಬೆಂಗಳೂರು ಗ್ರಾಮಾಂತರ: ಕೋಟಿ ಕುಳಗಳ ಕಾಳಗದಿಂದ ರಂಗೇರಿದ ಅಖಾಡ!

ಬೆಂಗಳೂರು ಗ್ರಾಮಾಂತರ: ಅಭಿವೃದ್ಧಿ ಗೌಣ; ಕುಟುಂಬ ಪ್ರತಿಷ್ಠೆ ರಾಜಕಾರಣದ ಮೇಲಾಟ
Published 6 ಮೇ 2023, 20:33 IST
Last Updated 6 ಮೇ 2023, 20:33 IST
ಅಕ್ಷರ ಗಾತ್ರ

ಸುಬ್ರಮಣ್ಯ ಎಚ್‌.ಎಂ.

ಬೆಂಗಳೂರು ಗ್ರಾಮಾಂತರ ಜಿಲ್ಲೆ: ದೇವನಹಳ್ಳಿಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚಿತ್ರಣವೇ ಬದಲಾಗಿದೆ. ಪಾಳು ಬಿದ್ದಿದ್ದ ಭೂಮಿಗೂ ಚಿನ್ನದ ಬೆಲೆ ಕುದುರಿದ ಕಾರಣ ರಿಯಲ್ ಎಸ್ಟೇಟ್‌ ಉದ್ಯಮ ರಾಜಧಾನಿ ಬೆಂಗಳೂರು ನಗರದಿಂದ ಗ್ರಾಮಾಂತರ ಜಿಲ್ಲೆಗೂ ಕಾಲಿಟ್ಟಿತು.  

ರಾಜಧಾನಿ ಸೆರಗಿನಲ್ಲಿದ್ದರೂ ಗ್ರಾಮೀಣ ಸೊಗಡು ಉಳಿಸಿಕೊಂಡಿದ್ದ ಜಿಲ್ಲೆ ಎರಡು, ಮೂರು ದಶಕಗಳಿಂದ ಈಚೆಗೆ ಸಂಪೂರ್ಣವಾಗಿ ಬದಲಾಗಿದೆ. ಗಗನಚುಂಬಿ ಕಟ್ಟಡ, ವಿಲಾಸಿ ಅಪಾರ್ಟ್‌ಮೆಂಟ್‌, ಪ್ರತಿಷ್ಠಿತ ಶಿಕ್ಷಣ ಸಂಸ್ಥೆ, ಬಹುರಾಷ್ಟ್ರೀಯ ಮತ್ತು ಸಾಫ್ಟವೇರ್‌ ಕಂಪನಿ, ತಾರಾ ಹೋಟೆಲ್‌ ತಲೆ ಎತ್ತಿವೆ.

ಜೀವನ ವಿಧಾನದ ಮೇಲೆ ಮಾತ್ರವಲ್ಲ, ಜಿಲ್ಲೆಯ ರಾಜಕಾರಣದ ಮೇಲೂ ರಿಯಲ್‌ ಎಸ್ಟೇಟ್‌ ಉದ್ಯಮದ ಹಣ ದಟ್ಟ ಪ್ರಭಾವ ಬೀರಿದೆ. ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಕ್ಷೇತ್ರಗಳ ಜೊತೆ ರಾಜಕಾರಣದ ಮೇಲೆಯೂ ರಿಯಲ್‌ ಎಸ್ಟೇಟ್‌ ಕುಳಗಳು ಹಿಡಿತ ಸಾಧಿಸಿದ್ದಾರೆ.

ಇದರೊಂದಿಗೆ ಸಭ್ಯ ರಾಜಕಾರಣ ನೇಪಥ್ಯಕ್ಕೆ ಸರಿದು ಕೋಟಿ ಕುಳಗಳ ಅಬ್ಬರದ ರಾಜಕಾರಣ ಶುರುವಾಗಿದೆ. ಭೂಮಿಯನ್ನು ಖರೀದಿಸಿದಂತೆ ರಾಜಕಾರಣವನ್ನೂ ಖರೀದಿಸುವ ವಿಶ್ವಾಸದೊಂದಿಗೆ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ರಾಜಕಾರಣ ಪ್ರವೇಶಿಸಿದ್ದಾರೆ. ಚುನಾವಣೆಗೂ ಮೊದಲೇ ಸಮಾಜ ಸೇವೆ, ಮಕ್ಕಳಿಗೆ ಸಮವಸ್ತ್ರ, ನೋಟ್‌ಬುಕ್‌, ಮಹಿಳೆಯರಿಗೆ ಕುಕ್ಕರ್‌ ವಿತರಣೆ, ಯುವಕರಿಗೆ ಕ್ರೀಡಾ ಪಂದ್ಯಾವಳಿ, ಆಸ್ತಿಕರಿಗೆ ಪುಣ್ಯಕ್ಷೇತ್ರಗಳ ಪ್ರವಾಸ ಆಯೋಜಿಸಿದ್ದಾರೆ.

ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಗೆ, ಆನೇಕಲ್‌ ಕ್ಷೇತ್ರ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಗೆ ಸೇರುತ್ತದೆ. ಬಹುತೇಕ ಕ್ಷೇತ್ರಗಳಲ್ಲಿ ರಿಯಲ್‌ ಎಸ್ಟೇಟ್‌ ಹಣ ಮತ್ತು ಕುಟುಂಬ ರಾಜಕಾರಣದ ಸದ್ದು ಜೋರಾಗಿದೆ. ಇಲ್ಲಿ ಅಭಿವೃದ್ಧಿ ಚರ್ಚೆ ಗೌಣ. ಜಾತಿ ಸಮೀಕರಣ, ಹಣಬಲ, ತೋಳ್ಬಲ ಮತ್ತು ಕುಟುಂಬ ಪ್ರತಿಷ್ಠೆಯೇ ಇಲ್ಲಿಯ ರಾಜಕಾರಣದ ಹೂರಣ!

ರಾಜ್ಯದಲ್ಲಿಯೇ ಅತ್ಯಂತ ಶ್ರೀಮಂತ ಅಭ್ಯರ್ಥಿ ಎಂಬ ಹೆಗ್ಗಳಿಕೆ ಹೊಂದಿರುವ ಸಾವಿರಾರು ಕೋಟಿಗಳ ಒಡೆಯ ಎಂಟಿಬಿ ನಾಗರಾಜ್‌  ಹೊಸಕೋಟೆ ಅಖಾಡದಲ್ಲಿದ್ದಾರೆ. ಸಾಂಪ್ರದಾಯಿಕ ಎದುರಾಳಿಗಳಾದ ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಿ.ಎನ್‌. ಬಚ್ಚೇಗೌಡ ಮತ್ತು ಎಂಟಿಬಿ ನಾಗರಾಜ್‌ ಕುಟುಂಬಗಳ ನಡುವಿನ ಜಿದ್ದಾಜಿದ್ದಿನಿಂದಾಗಿ ಹೊಸಕೋಟೆ ರಾಜ್ಯದ ಗಮನ ಸೆಳೆದಿದೆ.

ಬಚ್ಚೇಗೌಡ ಕುಟುಂಬದ ಕುಡಿ, ಶಾಸಕ ಶರತ್‌ ಬಚ್ಚೇಗೌಡ ಮತ್ತು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ಮತ್ತೆ ಮುಖಾಮುಖಿಯಾಗಿದ್ದಾರೆ. 2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಂಟಿಬಿ ನಾಗರಾಜ್‌ ಈ ಬಾರಿ ಬಿಜೆಪಿಯಿಂದಲೂ ಮತ್ತು ಬಿಜೆಪಿಯಿಂದ ಸ್ಪರ್ಧಿಸಿದ್ದ ಶರತ್‌ ಬಚ್ಚೇಗೌಡ ಕಾಂಗ್ರೆಸ್‌ನಿಂದಲೂ ಸ್ಪರ್ಧಿಸುತ್ತಿದ್ದಾರೆ. ಇಲ್ಲಿ ಪಕ್ಷಕ್ಕಿಂತ ವ್ಯಕ್ತಿ ಮತ್ತು ಕುಟುಂಬ ಪ್ರತಿಷ್ಠೆ ಮುಖ್ಯವಾಗಿದೆ.         

ಆರನೇ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಎಂಟಿಬಿ ನಾಗರಾಜ್ ಇದು ತಮ್ಮ ಕೊನೆಯ ಚುನಾವಣೆ ಎಂದು ಘೋಷಿಸಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ನಾಗರಾಜ್‌ 2019 ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸ್ವತಂತ್ರ ಅಭ್ಯರ್ಥಿ ಶರತ್‌ ಬಚ್ಚೇಗೌಡ ಎದುರು ಸೋತಿದ್ದರು. ಶರತ್‌ ಕಾಂಗ್ರೆಸ್ ಸೇರಿದರೆ, ವಿಧಾನ ಪರಿಷತ್‌ಗೆ ಆಯ್ಕೆಯಾಗುವ ಮೂಲಕ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಎಂಟಿಬಿ ಸಮಾಧಾನಪಟ್ಟುಕೊಂಡಿದ್ದರು.

ಉಪ ಚುನಾವಣೆಯಲ್ಲಿ ಎಂಟಿಬಿ ಮತದಾರರ ಕೋಪ ಎದುರಿಸಬೇಕಾಯಿತು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಭೈರತಿ ಸುರೇಶ್‌ ಪತ್ನಿ ಪದ್ಮಾವತಿ ಹಾಗೂ ಎಂಟಿಬಿ ನಡುವೆ ಕುರುಬ ಸಮುದಾಯದ ಮತಗಳು ಚದುರಿ ಹೋಗಿ ಶರತ್‌ ಗೆಲುವು ಸುಲಭವಾಗಿತ್ತು. ಈ ಬಾರಿ ಆ ವಾತಾವರಣ ಇಲ್ಲ. ಶರತ್‌ ಮತ್ತು ಎಂಟಿಬಿ ನಡುವೆ ನೇರ ಹಣಾಹಣಿ ಇದೆ.

ಶರತ್‌ ಹಾಗೂ ಪತ್ನಿ ಪ‍್ರತಿಭಾ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದವರು. ಯುವ ಸಮೂಹವನ್ನು ಸೆಳೆಯುವಲ್ಲಿ ದಂಪತಿ ಯಶ ಕಂಡಿದ್ದಾರೆ. ಯುವ ಜನರ ನಿರೀಕ್ಷೆಗೆ ತಕ್ಕಂತೆ ಕ್ಷೇತ್ರದಲ್ಲಿ ಕೆಲಸ ಮಾಡಿರುವುದು ಅವರ ‘ಪ್ಲಸ್‌ ಪಾಯಿಂಟ್‌‘. ಒಕ್ಕಲಿಗ ಸಮುದಾಯದ ಶರತ್‌ ತಮ್ಮ ಸಮುದಾಯದ ಮತಗಳು ಚದುರದಂತೆ ಭದ್ರ ಮಾಡಿಕೊಂಡಿದ್ದಾರೆ.

ನಿರಂತರವಾಗಿ ಒಂದಲ್ಲ ಒಂದು ವಿಷಯದಲ್ಲಿ ಉಭಯ ನಾಯಕರು ಸುದ್ದಿಯಲ್ಲಿದ್ದರು. ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಉಲ್ಲಂಘನೆ,ಶಕ್ತಿ ಪ್ರದರ್ಶನದ ಮೂಲಕ ರಾಜಕೀಯ ಮೇಲಾಟ ನಡೆಸಿದ್ದರು. 

ಬೂತ್ ರಿಗ್ಗಿಂಗ್, ಅಡ್ಡ ಮತದಾನಗಳ ಮೂಲಕ ರಾಜ್ಯ ಮಟ್ಟದಲ್ಲಿ 'ಮಿನಿ ಬಿಹಾರ' ಎಂದು ಕುಖ್ಯಾತಿಗೆ ಒಳಗಾಗಿದ್ದ ಹೊಸಕೋಟೆ ಕ್ಷೇತ್ರದಲ್ಲಿ ಈಗ ಕೊಂಚ ಬದಲಾವಣೆ ಗಾಳಿ ಬೀಸಿ ತೊಡಗಿದೆ.

ಕಾಂಗ್ರೆಸ್‌ ಹಿರಿಯ ನಾಯಕ, ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಸ್ಪರ್ಧೆಯಿಂದ ದೇವನಹಳ್ಳಿ ಮೀಸಲು ಕ್ಷೇತ್ರ ಗಮನ ಸೆಳೆದಿದೆ. ಇಷ್ಟು ವರ್ಷ ರಾಷ್ಟ್ರ ರಾಜಕಾರಣಕ್ಕೆ ಸೀಮಿತವಾಗಿದ್ದ ಅವರು ಕೋಲಾರದಿಂದ ದೇವನಹಳ್ಳಿಗೆ ವಲಸೆ ಬಂದಿದ್ದಾರೆ.

ಅಪಾರ ರಾಜಕೀಯ ಅನುಭವ ಅವರ ಬೆನ್ನಿಗಿದೆ. ಗೆಲುವಿನ ತಂತ್ರ ರೂಪಿಸುವಲ್ಲಿ ಅವರು ರಾಜಕೀಯ ನಿಪುಣರು. ಪರಿಶಿಷ್ಟ ಜಾತಿಯ ಎಡಗೈ ಸಮುದಾಯ ಹಾಗೂ ಕಾಂಗ್ರೆಸ್‌ ಸಾಂಪ್ರದಾಯಿಕ ಮತಗಳನ್ನು ನೆಚ್ಚಿಕೊಂಡಿದ್ದಾರೆ.

ಜೆಡಿಎಸ್ ಅಭ್ಯರ್ಥಿ ನಿಸರ್ಗ ನಾರಾಯಣಸ್ವಾಮಿ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಗ್ರಾಮಗಳಿಗೆ  ಸಿ.ಸಿ ರಸ್ತೆ, ಚರಂಡಿ, ಕುಡಿಯುವ ನೀರಿನಂತಹ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಜೆಡಿಎಸ್‌ ಸಾಂಪ್ರದಾಯಿಕ ಮತ (ಒಕ್ಕಲಿಗ) ಹಾಗೂ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಮತ ನೆಚ್ಚಿಕೊಂಡಿದ್ದಾರೆ.

2018ರ ಚುನಾವಣೆಯಲ್ಲಿ ಜೆಡಿಎಸ್‌ ‘ಬಿ’ ಫಾರಂ ಪಡೆದಿದ್ದರೂ ಅಂತಿಮ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದ ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಈಗ ಬಿಜೆಪಿ ಅಭ್ಯರ್ಥಿ. ಸ್ಥಳೀಯವಾಗಿ ಬಿಜೆಪಿಗೆ ಕಾರ್ಯಕರ್ತರ ಪಡೆ ಇಲ್ಲದಿರುವುದು ಅವರಿಗೆ ‘ಮೈನಸ್‌ ಪಾಯಿಂಟ್‌’. ಎಡಗೈ ಸಮುದಾಯದ ಪಿಳ್ಳಮುನಿಶಾಮಪ್ಪ ಮತ್ತು ಅದೇ ಸಮುದಾಯದ ಕಾಂಗ್ರೆಸ್‌ನ ಕೆ.ಎಚ್‌ ಮುನಿಯಪ್ಪ ನಡುವೆ ಮತಗಳು ಹಂಚಿ ಹೋಗುವ ಸಾಧ್ಯತೆ ಇದೆ. ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ತ್ರಿಕೋನ ಸ್ಪ‍ರ್ಧೆ ರೀತಿಯಂತೆ ಕಂಡರೂ ನೇರಾ ಹಣಾಹಣಿ ಇರುವುದು ನಿಸರ್ಗ ನಾರಾಯಣಸ್ವಾಮಿ ಹಾಗೂ ಕೆ.ಎಚ್‌ ಮುನಿಯಪ್ಪ ನಡುವೆ.

ದೊಡ್ಡಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ವೆಂಕಟರಮಣಯ್ಯ ಹ್ಯಾಟ್ರಿಕ್ ಗೆಲುವು ಸಾಧಿಸುವ ತವಕದಲ್ಲಿದ್ದಾರೆ. ಬಿಜೆಪಿಯ ಯುವ ಅಭ್ಯರ್ಥಿ ಧೀರಜ್‌ ಮುನಿರಾಜು, ಜೆಡಿಎಸ್‌ನ ಮುನೇಗೌಡ ಪ್ರಬಲ ಸ್ಪರ್ಧೆಯಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ವೆಂಕಟರಮಣಯ್ಯ ಅವರಿಗೆ ಈ ಬಾರಿ ಟಿಕೆಟ್‌ ನೀಡಬಾರದು ಎಂದು ಪಕ್ಷದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಡಿಕೆಶಿ ಸಹೋದರರು ಖುದ್ದು ಭಿನ್ನಮತ ಶಮನಕ್ಕೆ ಮುಂದಾದರೂ ಯಶ ಕಾಣಲಿಲ್ಲ. ಅಂತಿಮವಾಗಿ ಕಾಂಗ್ರೆಸ್‌ ಭಿನ್ನಮತೀಯರು ಬಿಜೆಪಿ ಸೇರುವ ಮೂಲಕ ಸಮಸ್ಯೆ ಬಗೆಹರಿಯಿತು. ಇದನ್ನೇ ಸವಾಲಾಗಿ ಸ್ವೀಕರಿಸಿದ ಶಾಸಕರು, ಬಿಜೆಪಿ ನಗರ ಘಟಕದ ಅಧ್ಯಕ್ಷ, ಕೆಲ ನಗರಸಭೆ ಸದಸ್ಯರನ್ನು ತಮ್ಮತ್ತ ಸೆಳೆದು ತಿರುಗೇಟು ನೀಡಿದರು.

ಮೂರು ಬಾರಿ ಸೋತಿರುವ ಬಿ.ಮುನೇಗೌಡ ಅನುಕಂಪದ ಆಧಾರದ ಮೇಲೆ ಮತ ಕೇಳುತ್ತಿದ್ದಾರೆ. ಕೋವಿಡ್‌ ಸಮಯದಲ್ಲಿ ಕಿಟ್‌ ಹಂಚಿಕೆ ಮೂಲಕ ರಾಜಕೀಯ ಪ್ರವೇಶ ಮಾಡಿದ ಧೀರಜ್‌ ಮುನಿರಾಜು ನಂತರದಲ್ಲಿ ಹಲವು ಸಮಾಜ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಿಜೆಪಿ ಟಿಕೆಟ್‌ ಪಡೆಯುವಲ್ಲಿ ಯಶ ಕಂಡಿದ್ದಾರೆ. ಧೀರಜ್‌ಗೆ ಯುವ ಜನರ ಬೆಂಬಲ ಕಾಣುತ್ತಿದೆ. ಆದರೆ, ಅದು ಎಷ್ಟರ ಮಟ್ಟಿಗೆ ಮತಗಳಾಗಿ ಪರಿವರ್ತನೆಯಾಗುತ್ತದೆ ಗೊತ್ತಿಲ್ಲ.

ಕಾಂಗ್ರೆಸ್‌ನ ವೆಂಕಟರಮಣಯ್ಯ, ಜೆಡಿಎಸ್‌ನ ಮುನೇಗೌಡ ಒಕ್ಕಲಿಗ ಸಮುದಾಯಕ್ಕೆ, ಬಿಜೆಪಿಯ ಧೀರಜ್‌ ಮುನಿರಾಜು ಯಾದವ ಸಮುದಾಯಕ್ಕೆ ಸೇರಿದ್ದಾರೆ. ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರು ಬಹು ಸಂಖ್ಯೆಯಲ್ಲಿ ಇದ್ದಾರೆ.

ಎಸ್‌.ಸಿ ಮೀಸಲು ಕ್ಷೇತ್ರವಾಗಿರುವ ನೆಲಮಂಗಲದಲ್ಲಿ ಎರಡು ಬಾರಿ ಜೆಡಿಎಸ್‌ನಿಂದ ಆಯ್ಕೆಯಾಗಿರುವ ಡಾ.ಕೆ.ಶ್ರೀನಿವಾಸಮೂರ್ತಿ ಮೂರನೇ ಸಲವೂ ಜೆಡಿಎಸ್ ಹುರಿಯಾಳು. ಒಕ್ಕಲಿಗ ಮತಗಳ ಜೊತೆ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಮತಗಳನ್ನು ನೆಚ್ಚಿಕೊಂಡಿದ್ದಾರೆ. ಹೊಸ ಮುಖಗಳಿಗೆ ಟಕೆಟ್ ನೀಡಿ ಹೊಸ ಪ್ರಯೋಗಕ್ಕೆ ಮುಂದಾಗಿರುವ ಬಿಜೆಪಿಯು ನೆಲಮಂಗಲದಲ್ಲೂ ಇಂತಹ ಪ್ರಯೋಗ ನಡೆಸಿದೆ. ಈ ಬಾರಿ ಬಿಜೆಪಿಯಿಂದ ಲಂಬಾಣಿ ಸಮುದಾಯದ ಸಪ್ತಗಿರಿ ಶಂಕರ್ ನಾಯ್ಕ್‌ ಅಭ್ಯರ್ಥಿ. 

ಕಾಂಗ್ರೆಸ್ ಮಹಿಳಾ ಕಾರ್ಮಿಕ ಘಟಕದ ಅಧ್ಯಕ್ಷೆಯಾಗಿದ್ದ ಉಮಾದೇವಿ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದರು. ಅವರಿಗೆ ಟಿಕೆಟ್ ಗ್ಯಾರಂಟಿ ಎಂಬ ವಾತಾವರಣ ಇತ್ತು. ಆದರೆ, ಏಕಾಏಕಿ ಎನ್. ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಿದ್ದು ಸಹಜವಾಗಿ ಬಣ ರಾಜಕೀಯಕ್ಕೆ ನಾಂದಿ ಹಾಡಿದಂತಾಗಿದೆ.

ನೆಲಮಂಗಲ ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಒಕ್ಕಲಿಗ ಮತದಾರರೇ ನಿರ್ಣಾಯಕರಾಗಿದ್ದಾರೆ. ನಗರ ಪ್ರದೇಶದಲ್ಲಿ ಬಿಜೆಪಿ ಹಿಡಿತವಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸರಿಸಮನಾದ ಮತ ಬ್ಯಾಂಕ್ ಹೊಂದಿವೆ.

ಹ್ಯಾಟ್ರಿಕ್ ಕನಸಿಗೆ ಬಿಜೆಪಿ ತೊಡರುಗಾಲು

ದೊಡ್ಡಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ವೆಂಕಟರಮಣಯ್ಯ ಹ್ಯಾಟ್ರಿಕ್ ಗೆಲುವು ಸಾಧಿಸುವ ತವಕದಲ್ಲಿ ಇದ್ದಾರೆ. ಬಿಜೆಪಿಯ ಯುವ ಅಭ್ಯರ್ಥಿ ಧೀರಜ್‌ ಮುನಿರಾಜು, ಜೆಡಿಎಸ್‌ನ ಮುನೇಗೌಡ ಪ್ರಬಲ ಸ್ಪರ್ಧೆಯಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ವೆಂಕಟರಮಣಯ್ಯ ಅವರಿಗೆ ಈ ಬಾರಿ ಟಿಕೆಟ್‌ ನೀಡಬಾರದು ಎಂದು ಪಕ್ಷದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಡಿಕೆಶಿ ಸಹೋದರರು ಖುದ್ದು ಭಿನ್ನಮತ ಶಮನಕ್ಕೆ ಮುಂದಾದರೂ ಯಶ ಕಾಣಲಿಲ್ಲ. ಅಂತಿಮವಾಗಿ ಕಾಂಗ್ರೆಸ್‌ ಭಿನ್ನಮತೀಯರು ಬಿಜೆಪಿ ಸೇರುವ ಮೂಲಕ ಸಮಸ್ಯೆ ಬಗೆಹರಿಯಿತು. ಇದನ್ನೇ ಸವಾಲಾಗಿ ಸ್ವೀಕರಿಸಿದ ಶಾಸಕರು, ಬಿಜೆಪಿ ನಗರ ಘಟಕದ ಅಧ್ಯಕ್ಷ, ಕೆಲ ನಗರಸಭೆ ಸದಸ್ಯರನ್ನು ತಮ್ಮತ್ತ ಸೆಳೆದು ತಿರುಗೇಟು ನೀಡಿದರು.

ಮೂರು ಬಾರಿ ಸೋತಿರುವ ಬಿ.ಮುನೇಗೌಡ ಅನುಕಂಪದ ಆಧಾರದ ಮೇಲೆ ಮತ ಕೇಳುತ್ತಿದ್ದಾರೆ. ಕೋವಿಡ್‌ ಸಮಯದಲ್ಲಿ ಕಿಟ್‌ ಹಂಚಿಕೆ ಮೂಲಕ ರಾಜಕೀಯ ಪ್ರವೇಶ ಮಾಡಿದ ಧೀರಜ್‌ ಮುನಿರಾಜು ನಂತರದಲ್ಲಿ ಹಲವು ಸಮಾಜ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಿಜೆಪಿ ಟಿಕೆಟ್‌ ಪಡೆಯುವಲ್ಲಿ ಯಶ ಕಂಡಿದ್ದಾರೆ. ಧೀರಜ್‌ಗೆ ಯುವ ಜನರ ಬೆಂಬಲ ಕಾಣುತ್ತಿದೆ. ಆದರೆ, ಅದು ಎಷ್ಟರ ಮಟ್ಟಿಗೆ ಮತಗಳಾಗಿ ಪರಿವರ್ತನೆಯಾಗುತ್ತದೆ ಗೊತ್ತಿಲ್ಲ.

ಕಾಂಗ್ರೆಸ್‌ನ ವೆಂಕಟರಮಣಯ್ಯ, ಜೆಡಿಎಸ್‌ನ ಮುನೇಗೌಡ ಒಕ್ಕಲಿಗ ಸಮುದಾ ಯಕ್ಕೆ, ಬಿಜೆಪಿಯ ಧೀರಜ್‌ ಮುನಿರಾಜು ಯಾದವ ಸಮುದಾಯಕ್ಕೆ ಸೇರಿದ್ದಾರೆ. ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರು ಬಹು ಸಂಖ್ಯೆಯಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT