ಶನಿವಾರ, ಆಗಸ್ಟ್ 13, 2022
26 °C
ಶಾಸಕ ಕೃಷ್ಣಬೈರೇಗೌಡ ಅಭಿಮತ l ಜಿಲ್ಲೆಯ ಅಂತರ್ಜಲ ವೃದ್ಧಿಗೆ ಯೋಜನೆ ಸಾಕಾರ

ಬೆಂಗಳೂರು ಗ್ರಾಮಾಂತರ: ಎಚ್‌.ಎನ್‌ ವ್ಯಾಲಿ, ರೈತರಿಗೆ ಪೂರಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಬರಗಾಲ ಪೀಡಿತ ಪ್ರದೇಶಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರದ ಜಿಲ್ಲೆಗಳಿಗೆ ಕೆ.ಸಿ. ವ್ಯಾಲಿ ಯೋಜನೆ ಹಾಗೂ ಎಚ್.ಎನ್.ವ್ಯಾಲಿ ಯೋಜನೆಯಿಂದ ಅನುಕೂಲವಾಗಿದ್ದು, ಈ ಭಾಗದ ರೈತರ ಉಳಿವಿಗಾಗಿ ಇದು ಅನಿವಾರ್ಯವಾಗಿತ್ತು’ ಎಂದು ಶಾಸಕ ಕೃಷ್ಣಬೈರೇಗೌಡ ತಿಳಿಸಿದರು.

ಹೋಬಳಿಯ ವೆಂಕಟಗಿರಿಕೋಟೆಯ ಕೆರೆಗೆ ಹರಿಯುತ್ತಿರುವ ಎಚ್.ಎನ್.ವ್ಯಾಲಿ ನೀರನ್ನು ವೀಕ್ಷಿಸಿ ಅವರು ಮಾತನಾಡಿದರು.  

‘ಮಳೆಯಾಶ್ರಿತ ಪ್ರದೇಶಗಳ ಕೆರೆಗಳನ್ನು ತುಂಬಿಸಿ ಅಂತರ್ಜಲದ ಪ್ರಮಾಣ ಹೆಚ್ಚಿಸುವ ಈ ಯೋಜನೆಯಿಂದ ಸ್ವಲ್ಪಮಟ್ಟಿಗೆ ಯಶಸ್ಸು ಕಂಡಿದ್ದೇವೆ. ಲಾಕ್‌ಡೌನ್‌ ಕಾರಣದಿಂದಾಗಿ ಕಾರ್ಮಿಕರ ಕೊರತೆ ಉಂಟಾಗಿದೆ. ಹೀಗಾಗಿ ಕಾಮಗಾರಿ ಇನ್ನೂ ನಡೆಯಬೇಕಿದೆ. ಈ ಭಾಗಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹರಿಯಬೇಕಾಗಿದ್ದ ನೀರಿನ ಪ್ರಮಾಣ ಕಡಿಮೆಯಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಈ ಭಾಗಕ್ಕೆ ಹರಿಯುವ ನೀರಿನ ಪ್ರಮಾಣ ಏರಿಕೆಯಾಗಲಿದೆ’ ಎಂದು ಅಭಿಪ್ರಾಯಪಟ್ಟರು. 

‘ಬಯಲುಸೀಮೆಯ ಅಭಿವೃದ್ಧಿಗಾಗಿ ದೇವನಹಳ್ಳಿ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಶಿಡ್ಲಘಟ್ಟ, ಗೌರಿಬಿದನೂರು ತಾಲ್ಲೂಕುಗಳಲ್ಲಿ ಕೆರೆಗಳನ್ನು  ತುಂಬಿಸುವ ಕೆಲಸವಾಗಲಿದೆ. ಶಾಶ್ವತ ಪರಿಹಾರ ನೀಡುವ ಯೋಜನೆ ಅನುಷ್ಠಾನ ಮಾಡಲಾಗಿದೆ. 80 ಕೆರೆಗಳನ್ನು ತುಂಬಿಸಲಾಗುತ್ತದೆ.  ಒಂದು ವರ್ಷದಲ್ಲಿ ಹೊಸಕೋಟೆ ಕೆರೆ ತುಂಬಿಸುತ್ತೇವೆ. ಶಾಶ್ವತ ಪರಿಹಾರ ಕೊಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ’ ಎಂದು ಹೇಳಿದರು. 

‘ಕೆ.ಸಿ.ವ್ಯಾಲಿಗೆ ಯೋಜನೆಗೆ ₹ 1,400 ಕೋಟಿ ಮತ್ತು ಎಚ್.ಎನ್.ವ್ಯಾಲಿ ಯೋಜನೆಗೆ ₹ 1 ಸಾವಿರ ಕೋಟಿ ಅನುದಾನವನ್ನು ಹಿಂದಿನ ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿತ್ತು. ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರದ ಯಾವುದೇ ಯೋಜನೆಗಳನ್ನು ಮೊಟಕುಗೊಳಿಸಬಾರದು ಎಂದೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದ್ದೇವೆ. ಯಾವುದೇ ಯೋಜನೆಗಳನ್ನು ಕೈ ಬಿಡುವುದಿಲ್ಲ ಎಂದು ಸಣ್ಣ ನೀರಾವರಿ ಸಚಿವ ಭರವಸೆ ನೀಡಿದ್ದಾರೆ’ ಎಂದು ಮಾಹಿತಿ ನೀಡಿದರು. 

ಇದರೊಂದಿಗೆ ವೃಷಭಾವತಿ ವ್ಯಾಲಿ ಯೋಜನೆಯಡಿ ದೇವನಹಳ್ಳಿಯ 9 ಕೆರೆ ಹಾಗೂ 15 ತೂಬುಗೆರೆ ಸೇರಿದಂತೆ ದೊಡ್ಡಬಳ್ಳಾಪುರದಲ್ಲಿ 78 ಕೆರೆಗಳಿಗೆ ನೀರು ಹರಿಸಲು ಸಮ್ಮಿಶ್ರ ಸರ್ಕಾರದಲ್ಲಿ ಯೋಜನೆ ರೂಪಿಸಿದ್ದೇವೆ. ಟೆಂಡರ್ ತಡವಾಗಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯೂ ಅನುಷ್ಠಾನಗೊಂಡರೆ ಗ್ರಾಮಾಂತರ ಜಿಲ್ಲೆಯ ಎಲ್ಲಾ ಕೆರೆಗಳಿಗೂ ನೀರು ಸಮೃದ್ಧವಾಗಿ ಹರಿಯಲಿದೆ ಎಂದು ಹೇಳಿದರು. 

ಕಾಂಗ್ರೆಸ್ ನಾಯಕ ಮುನಿನರಸಿಂಹಯ್ಯ,ಮುಖಂಡರಾದ ಕೆಪಿಸಿಸಿ ಸದಸ್ಯ ಚಿನ್ನಪ್ಪ, ಜಿಲ್ಲಾ ಘಟಕದ ಪ್ರಚಾರ ಸಮಿತಿ ಅಧ್ಯಕ್ಷ ಬಿ.ಚೇತನ್ ಗೌಡ, ಜಗನ್ನಾಥ್, ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ರಾಮಚಂದ್ರಪ್ಪ, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯೆ ರಾಧಮ್ಮ ಮುನಿರಾಜು, ತಾಲ್ಲೂಕು ಪಂಚಾಯಿತಿ ಸದಸ್ಯೆ ನಂದಿನಿ, ಮುಖಂಡರಾದ
ಎಂ.ನಾರಾಯಣಸ್ವಾಮಿ, ಶಾಂತಕುಮಾರ್, ಬುಳ್ಳಹಳ್ಳಿ ರಾಜಪ್ಪ, ಯುವ ಘಟಕದ ಅಧ್ಯಕ್ಷ ನಾಗೇಶ್, ಮಂಡಿಬೆಲೆ ದೇವರಾಜಪ್ಪ, ನಟರಾಜ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು