ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಬದುಕಿನ ಉಸಿರಾಗಲಿ: ಗಂಗೂಬಾಯಿ ಹಾನಗಲ್ ವಿ.ವಿ ಕುಲಪತಿ ನಾಗೇಶ್ ಬೆಟ್ಟಕೋಟೆ

ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ನಾಗೇಶ್‌ ವಿ. ಬೆಟ್ಟಕೋಟೆ
Last Updated 20 ಮಾರ್ಚ್ 2023, 7:19 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಕನ್ನಡ ಕೇವಲ ಉತ್ಸವವಾಗದೆ ನಮ್ಮ ನಾಡಿ ಮಿಡಿತವಾಗಬೇಕು. ಬದುಕಿನ ಉಸಿರಾಗಬೇಕು. ಅನ್ನದ ಭಾಷೆಯಾಗಬೇಕು’ ಎಂದು 25ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ, ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಕುಲಪತಿ ಡಾ.ನಾಗೇಶ್‌ ವಿ. ಬೆಟ್ಟಕೋಟೆ ತಿಳಿಸಿದರು.

ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಹಮ್ಮಿಕೊಂಡಿದ್ದ 25ನೇ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಕನ್ನಡವನ್ನು ಬಲಪಡಿಸಲು ಯುವ ಪೀಳಿಗೆಯಿಂದ ಮಾತ್ರ ಸಾಧ್ಯ. ತಲಾ ತಲಾಂತರದಿಂದ ಬಂದಿರುವ ಭಾಷೆಯನ್ನ ಮುಂದಿನ ಪೀಳಿಗೆಗೆ ದಾಟಿಸಬೇಕಾದ ಮಹತ್ವದ ಜವಾಬ್ದಾರಿ ಯುವ ಪೀಳಿಗೆಯ ಮೇಲಿದೆ. ಆದರೆ ಇಂದಿನ ಯುವಕರು ಪಾಶ್ಚಿಮಾತ್ಯ ಉಡುಗೆ ತೊಡುಗೆ ಮತ್ತು ಸಂಸ್ಕೃತಿಗೆ ಆಕರ್ಷಿತರಾಗಿದ್ದಾರೆ. ಇಂಗ್ಲಿಷ್‌ ವ್ಯಾಮೋಹದಿಂದ ಕನ್ನಡದಲ್ಲಿ ಮಾತನಾಡುವುದು ಕೂಡ ಅವಮಾನ ಎಂದು ಭಾವಿಸುವ ಸ್ಥಿತಿಗೆ ತಲುಪಿದ್ದಾರೆ’ ಎಂದು ತಿಳಿಸಿದರು.

ಶಾಸಕ ಎಲ್‌.ಎನ್‌.ನಾರಾಯಣಸ್ವಾಮಿ ಮಾತನಾಡಿ, ವ್ಯವಹರಿಸುವ ಭಾಷೆ ಕನ್ನಡ, ನಾವು ಉಸಿರಾಡುವ ಗಾಳಿ ಕನ್ನಡ, ನಮ್ಮ ನೆಲ ಕನ್ನಡ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮವಾಗಿದೆ. ಕನ್ನಡ ಭಾಷಾಭಿಮಾನವನ್ನು ಪ್ರತಿಯೊಬ್ಬರು ಹೊಂದಬೇಕು. ಭಾಷೆ, ನಾಡು, ನುಡಿ, ಜಲ ರಕ್ಷಣೆಗೆ ಸದಾ ಸಿದ್ಧರಿರಬೇಕು ಎಂದು ಹೇಳಿದರು ಎಂದು ಹೇಳಿದರು.

ತಹಶೀಲ್ದಾರ್‌ ಶಿವರಾಜ್‌, ಅನ್ಯ ಭಾಷಿಗರ ಜತೆಗೂ ಕನ್ನಡದಲ್ಲಿ ವ್ಯವಹರಿಸಬೇಕು. ಹೊರ ರಾಜ್ಯಗಳಿಂದ ಬರುವ ಜನರಿಗೆ ಕನ್ನಡ ಕಲಿಸುವ ಕೆಲಸವಾಗಬೇಕು ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ.ಎನ್‌.ಕೃಷ್ಣಪ್ಪ ಮಾತನಾಡಿದರು.

ನಿಕಟ ಪೂರ್ವ ಸಮ್ಮೇಳನ ಅದ್ಯಕ್ಷ ರಾಂ.ಕೆ. ಹನುಮಂತಯ್ಯ, ಕಸಾಪ ಜಿಲಾ ನಿಕಟಪೂರ್ವ ಅಧ್ಯಕ್ಷ ಚಿ.ಮಾ ಸುದಾಕರ್, ಪುರಸಭೆ ಉಪಾಧ್ಯಕ್ಷೆ ಗೀತಾಶ್ರೀಧರ್‌ ಮೂರ್ತಿ, ತಾ.ಪಂ. ಇಒ ವಸಂತ್‌ಕುಮಾರ್, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ರವಿಕಿರಣ್, ಅಶ್ವಥ್‌ಗೌಡ, ಕೋಶಾಧ್ಯಕ್ಷ ಮುನಿರಾಜು(ಅಪ್ಪಯಣ್ಣ), ಸಂಘಟನಾ ಕಾರ್ಯದರ್ಶಿ ಬೂದಿಗೆರೆ ಶ್ರೀನಿವಾಸಗೌಡ, ಸಹ ಕಾರ್ಯದರ್ಶಿ ಹಿತ್ತರಹಳ್ಳಿ ರಮೇಶ್, ಎಸ್‌.ರಮೇಶ್‌ ಕುಮಾರ್, ಮಹಾಪೋಷಕ ಕೆ.ಎಂ.ಕೃಷ್ಣಮೂರ್ತಿ, ದೇವನಹಳ್ಳಿ ತಾಲ್ಲೂಕು ಅಧ್ಯಕ್ಷ ಆರ್‌.ಕೆ.ನಂಜೇಗೌಡ, ನೆಲಮಂಗಲ ತಾಲ್ಲೂಕು ಅಧ್ಯಕ್ಷ ಪ್ರದೀಪ್‌ ಕುಮಾರ್, ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷ ಪಿ.ಗೋವಿಂದರಾಜು, ಹೊಸಕೋಟೆ ತಾಲ್ಲೂಕು ಅಧ್ಯಕ್ಷ ಎಚ್‌.ಎಂ.ಮುನಿರಾಜು, ತಾಲ್ಲೂಕು ಗೌರವ ಕಾರ್ಯದರ್ಶಿಗಳಾದ ಪರಮೇಶಯ್ಯ, ದೇವರಾಜ್, ನಿವೃತ್ತ ಶಿಕ್ಷಕ ಶ್ರೀರಾಮಯ್ಯ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಪುಟ್ಟಸ್ವಾಮಿ ಇದ್ದರು.

ಮೆರವಣಿಗೆ: ಪಟ್ಟಣದ ಕೋಟೆಯಲ್ಲಿರುವ ವೇಣುಗೋಪಾಲಸ್ವಾಮಿ ದೇವಾಲಯದಿಂದ ಸಮ್ಮೇಳನ ಅಧ್ಯಕ್ಷರನ್ನು ಮೆರವಣಿಗೆಯಲ್ಲಿ ಕರೆ ತರಲಾಯಿತು. ವೀರಗಾಸೆ, ಡೊಳ್ಳುಕುಣಿತ, ವಾದ್ಯವೃಂದ ಹಾಗೂ ಪೂರ್ಣ ಕುಂಭ ಕಳಸದೊಂದಿಗೆ ಪಟ್ಟಣದ ರಾಜಬೀದಿಗಳ ಮೂಲಕ ಅಂಬೇಡ್ಕರ್‌ ಭವನದವರೆಗೆ ಮೆರವಣಿಗೆ ನಡೆಯಿತು. ವಿವಿಧ ವೇಷ ಭೂಷಣದಲ್ಲಿ ಶಾಲಾಮಕ್ಕಳು, ಎನ್‌.ಸಿ.ಸಿ , ಸ್ಕೌಟ್ಸ್‌, ಸೇವಾದಳ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದರು.

ಎನ್‌ಇಪಿ ಸ್ವಾಗತಾರ್ಹ:

‘ಹೊಸದಾಗಿ ಜಾರಿಗೆ ಬಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯು ಭಾಷೆಯ ದೃಷ್ಟಿ, ಕೌಶಲ್ಯ, ಉದ್ಯೋಗಾವಕಾಶಗಳ ದೃಷ್ಟಿಯಿಂದ ಸ್ವಾಗತಾರ್ಹ ಬೆಳವಣಿಗೆ ಅನ್ನಬಹುದು’ ಎಂದು ಸಮ್ಮೇಳನಾಧ್ಯಕ್ಷ ಡಾ.ನಾಗೇಶ್‌ ವಿ. ಬೆಟ್ಟಕೋಟೆ ಹೇಳಿದರು.

ಹೊಸ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಯ ಆಯ್ಕೆ ಕಡ್ಡಾಯವಾಗಿರುತ್ತದೆ. ಅಲ್ಲದೆ ಸ್ಥಳೀಯ ಸಾಹಿತ್ಯ, ನೃತ್ಯ, ನಾಟಕ ಪ್ರದರ್ಶನ ಕಲೆಗಳು ಕೂಡ ಪಠ್ಯವಾಗಿ ಮಾನ್ಯತೆ ಪಡೆದುಕೊಳ್ಳುತ್ತವೆ ಎಂದರು.ಷರತ್ತು ವಿಧಿಸಲಿ

ಸರ್ಕಾರ ಕನ್ನಡದ ನೆಲ, ಜಲ, ಮಾನವ ಶಕ್ತಿ ಇವುಗಳನ್ನು ಕಂಪನಿಗಳಿಗೆ ಕೊಡುವಾಗ ಕನಿಷ್ಠ ಪಕ್ಷ ಸರ್ಕಾರದೊಂದಿಗೆ ಕಂಪನಿಯ ಎಲ್ಲಾ ವ್ಯವಹಾರವನ್ನು ಕನ್ನಡದಲ್ಲಿ ಮಾಡಬೇಕು ಎಂಬ ಷರತ್ತು ವಿಧಿಸಿ ಅದನ್ನು ಕಡ್ಡಾಯಗೊಳಿಸಬೇಕು ಡಾ.ನಾಗೇಶ್‌ ವಿ. ಬೆಟ್ಟಕೋಟೆ ಹೇಳಿದರು.

ಆಗ ಕನ್ನಡ ಬಲ್ಲ ಯುವಕರಿಗೆ ಉದ್ಯೋಗ ಅವಕಾಶ ಸಿಗುತ್ತದೆ. ಉದ್ಯಮಗಳು ಕನ್ನಡ ಕಲಿಕೆಯನ್ನು ಪ್ರೋತ್ಸಾಹಿಸುತ್ತವೆ. ಉದ್ಯೋಗ ಅರಸಿ ರಾಜ್ಯಕ್ಕೆ ಬರುವವರು ಕನ್ನಡ ಕಲಿಯುತ್ತಾರೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT