ಗುರುವಾರ , ಆಗಸ್ಟ್ 11, 2022
23 °C
ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಲ್ಲಿ ತೊಡಗಿದ ಶ್ರಮಿಕರು

ವಿಜಯಪುರ: ಚೇತರಿಕೆ ಕಂಡ ಕಾರ್ಮಿಕರ ಬದುಕು

ಎಂ. ಮುನಿನಾರಾಯಣ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕೊರೊನಾ, ಲಾಕ್ ಡೌನ್ ಪರಿಣಾಮವಾಗಿ ಕಾರ್ಮಿಕ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿಸಿತ್ತು. ಇದೀಗ ಅನ್‌ಲಾಕ್‌ ಆರಂಭ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಿದ್ದು, ಕಟ್ಟಡ ಕಾರ್ಮಿಕರು ಸೇರಿದಂತೆ ಶ್ರಮಿಕ ವರ್ಗದಲ್ಲಿ ಮಂದಹಾಸ ಮೂಡಿದೆ.

ಕೇಂದ್ರ ಸರ್ಕಾರವು ‘ಅನ್‌ಲಾಕ್‌’ ಮಾರ್ಗಸೂಚಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಪಟ್ಟಣಗಳಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಯ ಚುರುಕುಗೊಂಡಿದೆ. ಕಟ್ಟಡ ನಿರ್ಮಾಣ, ರಸ್ತೆಗಳ ದುರಸ್ತಿ, ಕೊಳವೆ ಮಾರ್ಗಗಳ ನಿರ್ಮಾಣ, ಕೇಬಲ್ ಅಳವಡಿಕೆ, ಪೀಠೋಪಕರಣಗಳ ತಯಾರಿ, ವೈರಿಂಗ್, ಮಳೆ ನೀರು ಚರಂಡಿ ಕಾಮಗಾರಿ, ಕಲ್ಲುಗಣಿಗಾರಿಕೆ, ಪ್ಲೋರಿಂಗ್, ಭೂಮಿ ಸಮತಟ್ಟು, ಯುಜಿಡಿ ನಿರ್ಮಾಣ ವಿವಿಧ ಕಾಮಗಾರಿಗಳಿಗೆ ಚಾಲನೆ ಸಿಕ್ಕಿದೆ.

ತಾಲ್ಲೂಕಿನಲ್ಲಿ ಒಟ್ಟು 11,263 ಮಂದಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರು  ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ಕಟ್ಟಡ ನಿರ್ಮಾಣ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಉಳಿದಂತೆ ಹೊಟೇಲ್ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವವರು ಸೇರಿದಂತೆ ಸಾಕಷ್ಟು ಮಂದಿ ಕಾರ್ಮಿಕರು ಇಲಾಖೆಯಲ್ಲಿ ನೋಂದಾಯಿಸಿಕೊಂಡಿಲ್ಲ. ಇವರೂ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಕಾರ್ಮಿಕ ಇಲಾಖೆಯ ನಿರೀಕ್ಷಕಿ ಅಂಬಿಕಾ ಮಾತನಾಡಿ, ಕೊರೊನಾ ಲಾಕ್ ಡೌನ್ ವೇಳೆ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿದ್ದವು. ಅನ್ ಲಾಕ್ ಮಾರ್ಗಸೂಚಿ ಪ್ರಕಟವಾದ ನಂತರ ಗ್ರಾಮೀಣ ಭಾಗದಿಂದ ಪಟ್ಟಣದಲ್ಲಿ ಕಟ್ಟಡ ಹಾಗೂ ಇತರೇ ನಿರ್ಮಾಣ ಕಾರ್ಮಿಕರು ನೂರಾರು ಸಂಖ್ಯೆಯಲ್ಲಿ ಬಂದಿದ್ದಾರೆ. ಈಗಲೂ ಬರುತ್ತಿದ್ದಾರೆ. ಕಟ್ಟಡ ನಿರ್ಮಾಣದ ಸ್ಥಳಕ್ಕೆ ತೆರಳಿ  ಅಂತರ ಕಾಪಾಡಿಕೊಳ್ಳುವಂತೆ, ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಅರಿವು ಮೂಡಿಸುತ್ತಿದ್ದೇವೆ. ಹೊರಗಿನಿಂದ ಬಂದವರನ್ನು ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಹೇಳಿದರು.

ಕಲಬುರ್ಗಿ ಭಾಗದ ಕಟ್ಟಡ ಕಾರ್ಮಿಕ ಬಸಪ್ಪ ಮಾತನಾಡಿ, ಲಾಕ್ ಡೌನ್ ಸಮಯದಲ್ಲಿ ಸ್ವಂತ ಊರಿಗೆ ಹೋಗಿದ್ದೆವು. ಇಲ್ಲಿ ಹೊಂದಿಕೊಂಡಿದ್ದರಿಂದ ಅಲ್ಲಿಗೆ ಹೋಗಿ ಬದುಕು ಕಟ್ಟಿಕೊಳ್ಳುವುದು ತುಂಬಾ ಕಷ್ಟವೆನಿಸಿತು. ಹಾಗಾಗಿ ಪುನಃ ವಾಪಸ್‌ ಬಂದು ಕೆಲಸ ಮಾಡುತ್ತಿದ್ದೇವೆ. ಈಗ ಪುನಃ ಮೊದಲಿನಂತೆ ಜೀವನ ರೂಪಿಸಿಕೊಳ್ಳುವುದು ಸವಾಲಿನ ಕೆಲಸವಾಗಿದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು