ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್.ಕೆ.ಜಿ. ತರಗತಿಗೆ 40 ಮಕ್ಕಳು

ವಿಶ್ವನಾಥಪುರ ಕರ್ನಾಟಕ ಪಬ್ಲಿಕ್ ಶಾಲೆ ಜೂ 10ರಿಂದ ಆರಂಭ
Last Updated 25 ಮೇ 2019, 13:19 IST
ಅಕ್ಷರ ಗಾತ್ರ

ದೇವನಹಳ್ಳಿ: ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 2019–20ನೇ ಸಾಲಿನಲ್ಲಿ ಈಗಾಗಲೇ ಎಲ್.ಕೆ.ಜಿ. ಆಂಗ್ಲ ಮಾಧ್ಯಮ ಶೈಕ್ಷಣಿಕ ಪ್ರಕ್ರಿಯೆ ಜೂ 10 ರಿಂದ ಆರಂಭವಾಗಲಿದೆ ಎಂದು ಪ್ರಾಂಶುಪಾಲೆ ವಾಣಿಶ್ರೀ ಹೇಳಿದರು.

ಇಲ್ಲಿಯ ವಿಶ್ವನಾಥಪುರ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಎಲ್.ಕೆ.ಜಿ. ಯು.ಕೆ.ಜಿ. ಮತ್ತು ಒಂದನೇ ತರಗತಿ ಆಂಗ್ಲ ಮಾಧ್ಯಮದಲ್ಲಿ ಆರಂಭಿಸಲಾಗುತ್ತಿದೆ. ಎಲ್.ಕೆ.ಜಿ ಗೆ ಈಗಾಗಲೇ 40 ಮಕ್ಕಳನ್ನು ದಾಖಲು ಮಾಡಿಕೊಳ್ಳಲಾಗಿದೆ, ಎಲ್.ಕೆ.ಜಿಗೆ ದಾಖಲಾಗಿರುವ ಮಕ್ಕಳಿಗೆ ವಿಶೇಷ ವಿನ್ಯಾಸಭರಿತ ಕೊಠಡಿ ಸಜ್ಜುಗೊಳಿಸಲಾಗಿದೆ ಎಂದರು.

ರಾಷ್ಟ್ರ ನಾಯಕರು, ರಾಷ್ಟ್ರ ಲಾಂಛನ, ರಾಷ್ಟ್ರ ಪಕ್ಷಿ, ರಾಷ್ಟ್ರ ಪ್ರಾಣಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಕನ್ನಡ ಮತ್ತು ಆಂಗ್ಲ ವರ್ಣಮಾಲೆ ಮಕ್ಕಳಿಗೆ ಆಕರ್ಷಣಿಯವಾದ ಎಲ್ಲ ರೀತಿಯ ದೃಶ್ಯಗಳನ್ನು ಕೊಠಡಿಯ ಒಳ ಮತ್ತು ಹೊರ ಆವರಣದ ಗೋಡೆಗಳ ಮೇಲೆ ಬರಹದ ಮೂಲಕ ಚಿತ್ರಿಸಲಾಗಿದೆ ಎಂದು ಹೇಳಿದರು.

ಎಲ್.ಕೆ.ಜಿ.ಯಿಂದ ದ್ವಿತೀಯ ಪಿ.ಯು.ಸಿ.ವರೆಗೆ ಒಂದೇ ಕಡೆ ವ್ಯಾಸಂಗದ ವ್ಯವಸ್ಥೆ ಇದೆ, ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶೌಚಾಲಯಗಳಿದ್ದು ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ವ್ಯವಸ್ಥೆ ಇದೆ. ಕುಡಿಯುವ ನೀರಿನ ವ್ಯವಸ್ಥೆಗೆ ಒಂದು ಕೊಳವೆ ಬಾವಿ ಇದೆ ಸದ್ಯಕ್ಕೆ ತೊಂದರೆ ಇಲ್ಲ ಎಂದು ಹೇಳಿದರು.

ಪ್ರಸ್ತುತ 35 ಕೊಠಡಿಗಳಿವೆ ಎರಡು ಹೆಚ್ಚುವರಿ ಕೊಠಡಿ ಕಾಮಗಾರಿ ನಡೆಯುತ್ತಿದೆ. ಕೇಂದ್ರಿಯ ವಿದ್ಯಾಲಯ ಮಾದರಿಯಲ್ಲಿ ಉತ್ತಮ ಗುಣಮಟ್ಟದ ಶೈಕ್ಷಣಿಕ ವ್ಯಾಸಂಗ ನೀಡಲು ಸರ್ಕಾರ ಮೊದಲ ಬಾರಿಗೆ ರಾಜ್ಯದಲ್ಲಿ ಪ್ರತಿ ತಾಲ್ಲೂಕಿಗೊಂದು ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಿದೆ, ಪೋಷಕರು ತಮ್ಮ ಮಕ್ಕಳನ್ನು ದಾಖಲಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಜಗದೀಶ್ ಮಾತನಾಡಿ, ಪಬ್ಲಿಕ್ ಶಾಲೆಯ ಒಟ್ಟು ಆವರಣದ ವಿಸ್ತೀರ್ಣ ಹತ್ತು ಎಕರೆ ಇದೆ, ಈ ಪೈಕಿ ಎರಡುವರೆ ಎಕರೆಗಿಂತ ಹೆಚ್ಚು ಜಾಗದಲ್ಲಿ ನೀಲಗಿರಿ ಮರಗಳಿವೆ, ಕಟಾವು ಮಾಡಲು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿ ಅಲೆದಲೆದು ಬೇಸರವಾಗಿದೆ ಅಧಿಕಾರಿಗಳು ಇತ್ತ ಮುಖಮಾಡುತ್ತಿಲ್ಲ ಎಂದರು.

ಕಳೆದ ಆರೇಳು ವರ್ಷಗಳಿಂದ ವಿದ್ಯಾರ್ಥಿಗಳು ವಿವಿಧ ಆಟಗಳಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಿ ಉತ್ತಮ ಸಾಧನೆ ಮಾಡಿದ್ದಾರೆ, ಮೈದಾನ ಸಿದ್ಧಪಡಿಸಲು ನೀಲಗಿರಿ ಮರಗಳ ಕಟಾವು ಅನಿವಾರ್ಯ ಎಂದು ಹೇಳಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಣ್ಣ ಮಾತನಾಡಿ, ಶಾಲೆಯ ಸುತ್ತ ತಡೆಗೋಡೆ ನಿರ್ಮಾಣ ಮಾಡಿದರೆ ರಾತ್ರಿ ನಡೆಯುವ ಅನೈತಿಕ ಕಾರ್ಯಕ್ಕೆ ಕಡಿವಾಣ ಹಾಕಬಹುದು, ವಿಶ್ವನಾಥಪುರ ಗ್ರಾಮದಿಂದ ಒಂದು ಕಿ.ಮೀ. ದೂರವಿರುವುದರಿಂದ ಶಾಲೆಗೆ ಬರುವ ಸಿಬ್ಬಂದಿಗೆ ಸರ್ಕಾರಿ ಬಸ್ ಗಳು ನಿಲುಗಡೆಯಾಗಬೇಕು, ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ನಾರಾಯಣಸ್ವಾಮಿ, ಶ್ರೀನಿವಾಸ್, ಎಸ್.ಡಿ.ಎಂ.ಸಿ. ಸದಸ್ಯರಾದ ಡಿ.ಮೂರ್ತಿ, ಎಸ್.ಬಿ. ಶಿವಕುಮಾರ್, ಮುಖ್ಯ ಶಿಕ್ಷಕರಾದ ರುದ್ರಪ್ಪ, ದೈಹಿಕ ಶಿಕ್ಷಣ ಶಿಕ್ಷಕ ಸುಬಾನ್ ಸಾಬ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT