ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS POLLS | ಪ್ರಜಾವಾಣಿ ಸಂದರ್ಶನ – ಕೆ.ಎಚ್.ಮುನಿಯಪ್ಪ

ಸುಬ್ರಮಣ್ಯ ಎಚ್‌.ಎಂ.
Published 21 ಏಪ್ರಿಲ್ 2024, 5:51 IST
Last Updated 21 ಏಪ್ರಿಲ್ 2024, 5:51 IST
ಅಕ್ಷರ ಗಾತ್ರ

ಕೋಲಾರ ರಾಜಕಾರಣದಲ್ಲಿ ಸಚಿವ ಕೆ.ಎಚ್‌.ಮುನಿಯಪ್ಪ ಅವರಿಗೆ ಯಾರೂ ಸರಿಸಾಟಿ ಇರಲಿಲ್ಲ. ಏಳು ಸಲ ಸಂಸದರಾದ ಹೆಗ್ಗಳಿಕೆ ಅವರದ್ದು. ಬಣಗಳ ಕಿತ್ತಾಟದಿಂದ ಕೋಲಾರ ಲೋಕಸಭಾ ಟಿಕೆಟ್‌ ಹಂಚಿಕೆ ವಿಷಯ ರಾಜಕೀಯ ಸಂಚಲನಕ್ಕೂ ಕಾರಣವಾಗಿತ್ತು. ಇದು ಅವರು ವಿರೋಧಿಗಳನ್ನು ಮಣಿಸುತ್ತಿದ್ದ ರಾಜಕೀಯ ನೈಪುಣ್ಯ, ರಾಜಕೀಯ ತಂತ್ರಗಾರಿಕೆ ಇತ್ತೀಚಿನ ವರ್ಷಗಳಲ್ಲಿ ಮಾಸುತ್ತಿದೆಯೇ? ಸ್ವಪಕ್ಷೀಯರೇ ಅವರಿಗೆ ಮಗ್ಗಲು ಮುಳ್ಳಾಗಿದ್ದಾರೆಯೇ? ಮುಂತಾದ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಈ ಕುರಿತು ಅವರು ಮುಕ್ತವಾಗಿ ಮಾತನಾಡಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ. 

* ಸ್ವಪಕ್ಷೀಯರ ಮೇಲಿನ ನಿಮ್ಮ ಮುನಿಸು ಇನ್ನೂ ಶಮನ ಆಗಿಲ್ಲವೇ? ಕೋಲಾರ ಪ್ರಚಾರದಲ್ಲಿ ಇದುವರೆಗೂ ಕಾಣಿಸಿಕೊಂಡಿಲ್ಲವಲ್ಲ?

– ಮುನಿಸು ಇಲ್ಲ; ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ಜವಾಬ್ದಾರಿಯನ್ನು ಪಕ್ಷ ನೀಡಿದೆ. ಹಾಗಾಗಿ ಕೋಲಾರ ಕ್ಷೇತ್ರದ ಪ್ರಚಾರಕ್ಕೆ ಹೋಗಲು ಆಗಿಲ್ಲ. ಅಲ್ಲೂ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಬೇಕಾಗಿದೆ. ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ಸಮಯದ ಅಭಾವ ಇದೆ. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರೊಂದಿಗೂ ಮಾತುಕತೆ ನಡೆಸಿದ್ದೇನೆ. ಅಲ್ಲೂ ಪ್ರಚಾರಕ್ಕೆ ಹೋಗುತ್ತೇನೆ.

* ನೀವು ಪ್ರಚಾರದಿಂದ ದೂರ ಉಳಿದಿರುವುದರಿಂದ ಜೆಡಿಎಸ್‌–ಬಿಜೆಪಿಗೆ ಅನುಕೂಲ ಆಗಲಿದೆಯೇ?

– ಕೋಲಾರ ಕಾಂಗ್ರೆಸ್ ಭದ್ರಕೋಟೆ. ಭಿನ್ನಾಪ್ರಾಯದಿಂದ ಕಳೆದ ಸಲ ಕ್ಷೇತ್ರ ಕೈತಪ್ಪಿದೆ. ವೈಮನಸ್ಸಿನಿಂದ ದೂರ ಉಳಿದಿಲ್ಲ. ಕಾರ್ಯ ಒತ್ತಡದಿಂದಾಗಿ ದೂರ ಉಳಿದಿದ್ದೇನೆ. ಇದರಿಂದ ಬಿಜೆಪಿ–ಜೆಡಿಎಸ್‌ಗೆ ಅನುಕೂಲಕರ ವಾತಾವರಣವೂ ಇಲ್ಲ. ಒಳ ಏಟಿನ ಭೀತಿಯೂ ಇಲ್ಲ.  

* ಕೋಲಾರದಲ್ಲಿ ನಿಮಗೆ ಸರಿಸಾಟಿನೇ ಇರಲಿಲ್ಲ. ಈಗ ಒಡುಕು ಧ್ವನಿ ಮೂಡಲು ಕಾರಣ ಏನು?

– 30 ವರ್ಷ ಕೋಲಾರ ಕ್ಷೇತ್ರದ ಸಂಸದನಾಗಿದ್ದೆ. ನೀವು ಹೇಳಿದಂತೆ ನನಗೆ ಯಾರೂ ಸರಿಸಾಟಿ ಇರಲಿಲ್ಲ. ಈಗ ಇರುವುದು ಕೇವಲ ರಾಜಕೀಯ ಭಿನ್ನಾಪ್ರಾಯ ಅಷ್ಟೇ. ಅದು ಅಸಮಾಧಾನ ಅಲ್ಲ. ರಾಜಕೀಯದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದೇನೆ. ಕಳೆದ ಲೋಕಭೆಸಭೆ ಚುನಾವಣೆಯಲ್ಲಿ ಸ್ವಪಕ್ಷೀಯರೇ ತಂತ್ರಗಾರಿಕೆ ಮಾಡಿ ಸೋಲಿಸಿದರು. ಆದರೂ, ವಿಧಾನಸಭೆ ಚುನಾವಣೆಯಲ್ಲಿ ವಿರೋಧಿ ಬಣದವರ ಗೆಲುವಿಗಾಗಿ ಶ್ರಮಿಸಿದ್ದೇನೆ. 

* ಶಾಸಕರು ನಿಮ್ಮ ಮಾತು ಕೇಳುತ್ತಿಲ್ಲವೇ?

– ಮಾಜಿ ಶಾಸಕ ರಮೇಶ್ ಕುಮಾರ್, ಶಾಸಕರಾದ ಡಾ.ಎಂ.ಸಿ.ಸುಧಾಕರ್, ಎಸ್‌.ಎನ್‌. ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ ಅವರನ್ನು ರಾಜಕೀಯವಾಗಿ ಬೆಳೆಸಿದ್ದೇನೆ. ಅವರ ಗೆಲುವಿನಲ್ಲಿ ನನ್ನ ಪಾತ್ರವೂ ಇದೆ. ಆದರೂ, ನನ್ನ ವಿರುದ್ಧವೇ ಅವರು ಕತ್ತಿ ಮಸೆಯುತ್ತಿದ್ದಾರೆ. ರಾಜಕೀಯವಾಗಿ ಒಟ್ಟಿಗೆ ಸಾಗೋಣ ಎಂದೂ ಹೇಳಿದರೂ ಅವರೇ ಹಟ ಸಾಧಿಸುತ್ತಿದ್ದಾರೆ.   

*ಕೋಲಾರ ರಾಜಕಾರಣದಲ್ಲಿ ನಿಮ್ಮ ಹಿಡಿತ ಕೈ ತಪ್ಪುವ ಆತಂಕ ನಿಮ್ಮನ್ನು ಕಾಡುತ್ತಿದೆಯಾ?

– ಕ್ಷೇತ್ರದ ಜನರು ಸದಾ ರಾಜಕೀಯವಾಗಿ ನನ್ನ ಬೆನ್ನಿಗೆ ನಿಂತಿದ್ದಾರೆ. ಯಾವುದೇ ಆತಂಕ ಇಲ್ಲ. ಏಳು ಭಾರಿ ಸಂಸದನಾಗಿ ಆಯ್ಕೆಯಾಗಿ ದಾಖಲೆ ಸೃಷ್ಟಿಸಲು ಕೋಲಾರದ ಜನರೇ ಕಾರಣ. ಅವರಿಗೆ ಚಿರಋಣಿ ಆಗಿರುತ್ತೇನೆ. ಟಿಕೆಟ್‌ ಹಂಚಿಕೆಯಲ್ಲಿ ವ್ಯತ್ಯಾಸ ಆಗಿರಬಹುದು. ಧೃತಿಗೆಡಬೇಕಾದ ಅಗತ್ಯವೇನು ಇಲ್ಲ.

* ಕೋಲಾರದ ಘಟಬಂಧನ್‌ ಮೇಲುಗೈ ಸಾಧಿಸಿದೆ ಎನ್ನುವ ಮಾತಿದೆ...

– ಇಲ್ಲಿ ಪಕ್ಷ ಮುಖ್ಯವೇ ಹೊರತು;ವ್ಯಕ್ತಿ ಅಲ್ಲ. ನನ್ನ ವಿರುದ್ಧ ಮೇಲುಗೈ ಸಾಧಿಸಿದವರ ವಿರುದ್ಧ ಟೀಕೆ ಮಾಡುವುದಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ವಿರೋಧಿಸಿದವರಿಗೆ ಟಿಕೆಟ್‌ ನೀಡುವಂತೆ ಹೈಕಮಾಂಡ್‌ಗೆ ಮನವಿ ಮಾಡಿದ್ದೆ. ಪಕ್ಷ ಉಳಿಯಬೇಕಾದರೆ ಕೆಲವು ಸಂದರ್ಭದಲ್ಲಿ ತ್ಯಾಗ ಅನಿವಾರ್ಯವಾಗುತ್ತದೆ.

*ಕೊನೆ ಕ್ಷಣದಲ್ಲಿ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ಸಿಗದಿದ್ದಕ್ಕೆ ಬೇಸರ ಆಗಿದೆಯಾ? ಇದಕ್ಕೆ ಕಾರಣ ಏನು?

– ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್‌ ನಿಕ್ಕಿ ಆಗಿತ್ತು. ವಿರೋಧಿ ಬಣದಿಂದ ಅಸಮಾಧಾನ ವ್ಯಕ್ತವಾದ್ದರಿಂದ ಕೊನೆ ಕ್ಷಣದಲ್ಲಿ ಕೈತಪ್ಪಿದೆ. ರಾಷ್ಟ್ರ ಮತ್ತು ರಾಜ್ಯ ನಾಯಕರು ಇದನ್ನು ಬಗೆಹರಿಸಬಹುದಿತ್ತು. ಪಕ್ಷ ಯಾರಿಗೆ ಟಿಕೆಟ್‌ ಕೊಟ್ಟರೂ ಕೆಲಸ ಮಾಡುವುದಾಗಿ ಹೇಳಿದ್ದೇನೆ. ಇದನ್ನೇ ವಿರೋಧ ಬಣದವರಿಗೂ ಹೇಳಿದ್ದೇನೆ. 

* ನೀವು ಸಚಿವರು, ಮಗಳು ಶಾಸಕಿ. ಇಷ್ಟಾದ ಮೇಲೂ ಕೋಲಾರ ಲೋಕಸಭಾ ಕ್ಷೇತ್ರದಿಂದ ಅಳಿಯನಿಗೆ ಕಾಂಗ್ರೆಸ್‌ ಟಿಕೆಟ್‌. ಇಡೀ ಅಧಿಕಾರ ಒಂದು ಕುಟುಂಬದ ಬಳಿ ಕೇಂದ್ರೀಕೃತವಾದರೆ, ಕಾರ್ಯಕರ್ತರಿಗೆ ಅವಕಾಶ, ಅಧಿಕಾರ ಸಿಗುವುದು ಯಾವಾಗ ಎನ್ನುವುದು ವಿರೋಧಿಗಳ ಪ್ರಶ್ನೆ.

– ಕುಟುಂಬ ರಾಜಕಾರಣ ಎಲ್ಲ ಪಕ್ಷಗಳಲ್ಲೂ ಇದೆ. ನಮ್ಮ ಪಕ್ಷದಲ್ಲಿ ಮಕ್ಕಳು, ಅಳಿಯನಿಗೆ ಟಿಕೆಟ್‌ ಕೊಟ್ಟಿಲ್ಲವೇ? ಕುಟುಂಬದವರಿಗೆ ಟಿಕೆಟ್‌ ಇಲ್ಲ ಎಂದು ನಿಯಮ ರೂಪಿಸಲಿ. ಪಕ್ಷಕ್ಕೆ ನಾನು ಸೇವೆ ಮಾಡಿದ್ದೇನೆ. ಹಾಗಾಗಿ ಕುಟುಂಬ ಸದಸ್ಯರಿಗೆ ಟಿಕೆಟ್‌ ಕೇಳುವುದರಲ್ಲಿ ತಪ್ಪೇನಿದೆ?

*ಸುದೀರ್ಘ ರಾಜಕಾರಣದಲ್ಲಿ ಎಲ್ಲ ಅಧಿಕಾರವೂ ಸಿಕ್ಕಿದೆ. ಇದಕ್ಕೆ ಏನಂತೀರಾ

ಸಾಕಷ್ಟು ತೃಪ್ತಿ ಇದೆ. ಸಂಸತ್‌ ಸದಸ್ಯನಾಗಿ, ಕೇಂದ್ರ ಸಚಿವನಾಗಿ ಕೆಲಸ ಮಾಡಿದ್ದೇನೆ. ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸದಸ್ಯನಾಗಿಯೂ ರಾಜಕೀಯ ಅನುಭವಿದೆ. ರಾಜ್ಯದಲ್ಲಿ ಸಚಿವನಾಗಿ ಜನರ ಸೇವೆ ಮಾಡುತ್ತಿದ್ದೇನೆ.

* ದಲಿತ ಉಪ ಮುಖ್ಯಮಂತ್ರಿ ಕೂಗು ಎದ್ದಿದೆ. ನೀವು ಆಕಾಂಕ್ಷಿಯೇ?

– ಸದ್ಯಕ್ಕೆ ಸಂದರ್ಭ ಪಕ್ವ ಆಗಿಲ್ಲ. ಮುಂದೆ ನೋಡೋಣ. ಚಿತ್ರದುರ್ಗದಲ್ಲಿ ನಡೆದ ಕಾಂಗ್ರೆಸ್‌ ಐಕ್ಯತಾ ಸಮಾವೇಶದ ನಂತರ ಪಕ್ಷಕ್ಕೂ ದಲಿತ ಉಪಮುಖ್ಯಮಂತ್ರಿ ಮಾಡುವ ಬಗ್ಗೆ ಆಲೋಚನೆ ಇತ್ತು. ಈಗ ಕಾಂಗ್ರೆಸ್ ಹೆಚ್ಚು ಸೀಟು ಗೆಲ್ಲುವ ಕಡೆ ನಾಯಕರ ಗುರಿ ನೆಟ್ಟಿದೆ. ಚುನಾವಣೆ ಮುಗಿದ ಬಳಿಕ ಇದರ ಚರ್ಚೆ ಮಾಡೋಣ.

"ಕುಟುಂಬ ರಾಜಕಾರಣ ಎಲ್ಲ ಪಕ್ಷಗಳಲ್ಲೂ ಇದೆ. ನಮ್ಮ ಪಕ್ಷದಲ್ಲಿ ಮಕ್ಕಳು, ಅಳಿಯನಿಗೆ ಟಿಕೆಟ್‌ ಕೊಟ್ಟಿಲ್ಲವೇ? ಕುಟುಂಬದವರಿಗೆ ಟಿಕೆಟ್‌ ಇಲ್ಲ ಎಂದು ನಿಯಮ ರೂಪಿಸಲಿ. ಪಕ್ಷಕ್ಕೆ ನಾನು ಸೇವೆ ಮಾಡಿದ್ದೇನೆ. ಹಾಗಾಗಿ ಕುಟುಂಬ ಸದಸ್ಯರಿಗೆ ಟಿಕೆಟ್‌ ಕೇಳುವುದರಲ್ಲಿ ತಪ್ಪೇನಿದೆ?"

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT