ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS polls 2024: ಅಂದು ಕಲಬುರಗಿ; ಇಂದು ಗ್ರಾಮಾಂತರದಲ್ಲಿ ಚಕ್ರವ್ಯೂಹ

Published 4 ಏಪ್ರಿಲ್ 2024, 19:09 IST
Last Updated 4 ಏಪ್ರಿಲ್ 2024, 19:09 IST
ಅಕ್ಷರ ಗಾತ್ರ

ರಾಮನಗರ: ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದಂತೆ ಈ ಬಾರಿ ಡಿ.ಕೆ.ಸುರೇಶ್ ಅವರನ್ನು ಹಣಿಯುವ ಏಕೈಕ ಉದ್ದೇಶದಿಂದಲೇ ಅಮಿತ್ ಶಾ ಮಂಗಳವಾರ ಬೆಂಗಳೂರು ಗ್ರಾಮಾಂತರದಿಂದಲೇ ರಾಜ್ಯ ಚುನಾವಣಾ ಪ್ರಚಾರದ ರಣಕಹಳೆ ಊದಿದ್ದಾರೆ ಎಂದು ವಿಶ್ಲೇಷಿ ಸಲಾಗುತ್ತಿದೆ.

ಫೆಬ್ರುವರಿಯಲ್ಲಿ ಮಂಡನೆಯಾದ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌ ಕುರಿತು ಡಿ.ಕೆ. ಸುರೇಶ್ ಅವರು ಸಂಸತ್ತಿನ ಹೊರಗಡೆ ಸುದ್ದಿಗಾರರೊಂದಿಗೆ ಆಡಿದ ಮಾತುಗಳಿಂದ ಕೇಂದ್ರ ಸರ್ಕಾರ ಭಾರಿ ಮುಜುಗರಕ್ಕೀಡಾಗಿತ್ತು. ಅಂದೇ ಮೋದಿ ಮತ್ತು ಶಾ ಜೋಡಿಯು ಸುರೇಶ್ ಮೇಲೆ ಕಣ್ಣಿಟ್ಟಿದೆ ಎಂಬ ಮಾತು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ. ‘ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ’ ಎಂದು ಆರೋಪಿಸಿದ್ದ ಸುರೇಶ್, ‘ಇದೇ ಧೋರಣೆ ಮುಂದುವರಿಸಿದರೆ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಮುಂದಿಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದರು. ಈ ಹೇಳಿಕೆ ಸಂಸತ್ತಿನ ಒಳಗೂ ಮತ್ತು ಹೊರಗೂ ಕೋಲಾಹಲಕ್ಕೆ ಕಾರಣವಾಗಿತ್ತು.

ದಕ್ಷಿಣದ ರಾಜ್ಯಗಳು ಬಿಜೆಪಿ ವಿರುದ್ಧ ಒಗ್ಗೂಡಿ ತೆರಿಗೆ ಅನ್ಯಾಯದ ವಿರುದ್ಧ ವಾಗ್ದಾಳಿ ನಡೆಸಲು ಸುರೇಶ್ ಹೇಳಿಕೆಯು ರಾಷ್ಟ್ರಮಟ್ಟದಲ್ಲಿ ವೇದಿಕೆ ಒದಗಿಸಿತ್ತು. ಬಿಜೆಪಿ ತಮ್ಮನ್ನು ‘ದೇಶದ್ರೋಹಿ’ ಎಂದು ಜರಿದರೂ ಸುಮ್ಮನಾಗದ ಸುರೇಶ್, ಉತ್ತರಪ್ರದೇಶ ಮತ್ತು ಗುಜರಾತ್ ಗುರಿಯಾಗಿಸಿಕೊಂಡು ಉತ್ತರ ಭಾರತದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸುತ್ತಿದ್ದಾರೆ. ಹಾಗಾಗಿಯೇ ಬಿಜೆಪಿ ರಾಷ್ಟ್ರೀಯ ನಾಯಕರ ಕಣ್ಣು ಸುರೇಶ್ ಮೇಲೆ ಬಿದ್ದಿದೆ. ಅವರನ್ನು ಮಣಿಸಲು ಚಕ್ರವ್ಯೂಹ ಹೆಣೆದಿದ್ದಾರೆ ಎನ್ನುತ್ತವೆ ಬಿಜೆಪಿ ಮೂಲಗಳು.

ಒಂದೇ ಹಕ್ಕಿಗೆ ಇಬ್ಬರ ಗುರಿ: ಬಿಜೆಪಿ–ಜೆಡಿಎಸ್ ಮೈತ್ರಿಗೆ ಒಮ್ಮತ ಮೂಡುತ್ತಲೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಹೋದರ ಸುರೇಶ್ ವಿರುದ್ಧ ಎರಡೂ ಪಕ್ಷಗಳ ನಾಯಕರು ವ್ಯೂಹ ಹೆಣೆದಿದ್ದಾರೆ.

ರಾಮನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್ ಬಲ ಮೂರರಿಂದ ಒಂದಂಕಿಗೆ ಇಳಿದಿದೆ. ತಮಗೆ ರಾಜಕೀಯ ನೆಲೆ ಕೊಟ್ಟ ರಾಮನಗರದಲ್ಲಿ ತಮ್ಮ ಕುಟುಂಬದ ಕುಡಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಅಲ್ಪಸಂಖ್ಯಾತ ಸಮುದಾಯದ ಇಕ್ಬಾಲ್ ಹುಸೇನ್ ಅವರನ್ನು ಡಿ.ಕೆ ಸಹೋದರರು ಗೆಲ್ಲಿಸಿಕೊಂಡರು. ಇದು ಎಚ್‌.ಡಿ. ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ನಿದ್ದೆಗೆಡಿಸಿದೆ. ಹೇಗಾದರೂ ಮಾಡಿ ಈ ಸೋಲಿನ ಸೇಡು ತೀರಿಸಿಕೊಳ್ಳಬೇಕೆಂದು ಗೌಡರ ಕುಟುಂಬವೂ ಹಾತೊರೆಯುತ್ತಿದೆ.

ರಾಷ್ಟ್ರಮಟ್ಟದಲ್ಲಿ ಸುರೇಶ್ ಅವರಿಂದ ಬಿಜೆಪಿಗಾದ ಇರುಸುಮುರುಸಿನ ಸೇಡು ಮತ್ತು ಜಿಲ್ಲೆಯಲ್ಲಿ ಗೌಡರ ಕುಟುಂಬದೊಳಗೆ ಕುದಿಯುತ್ತಿರುವ ಸೋಲಿನ ಸೇಡು ತೀರಿಸಿಕೊಳ್ಳಲು ಲೋಕಸಭಾ ಚುನಾವಣೆಯಲ್ಲಿ ಕೈಜೋಡಿಸಿವೆ. ಹಾಗಾಗಿಯೇ ಎರಡೂ ಪಕ್ಷಗಳ ಮತಗಳ ಜೊತೆಗೆ ಪಕ್ಷಾತೀತ ಮತಗಳನ್ನೂ ಸೆಳೆಯಬಲ್ಲ ಡಾ. ಸಿ.ಎನ್.ಮಂಜುನಾಥ್ ಅವರನ್ನು ಕ್ಷೇತ್ರದ ಮೈತ್ರಿಕೂಟದ ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ.

ಹೇಗಾದರೂ ಸರಿ ಡಿ.ಕೆ. ಸುರೇಶ್ ಅವರನ್ನು ಈ ಬಾರಿ ಮಣಿಸಲೇಬೇಕು ಎಂಬ ಗುರಿಯನ್ನು ಮೈತ್ರಿ ನಾಯಕರಿಗೆ ಅಮಿತ್ ಶಾ ನೀಡಿದ್ದಾರೆ. ಕ್ಷೇತ್ರದಾದ್ಯಂತ ಆರ್‌ಎಸ್‌ಎಸ್‌ ಸ್ವಯಂಸೇವಕರನ್ನು ಸಹ ಕಣಕ್ಕಿಳಿಸಿ ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ ಎನ್ನುತ್ತಾರೆ ಮೈತ್ರಿ ಪಕ್ಷದ ನಾಯಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT