ಮಂಗಳವಾರ, ಮಾರ್ಚ್ 9, 2021
28 °C
ರಾಷ್ಟ್ರೀಯ ಏಕತಾ ಸಪ್ತಾಹದ ಸಮಾರೋಪದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಲಹೆ

‘ದೇಶದ ಸಮಗ್ರತೆ ಕಾಪಾಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಜಾಗತೀಕರಣ, ಖಾಸಗೀಕರಣದ ಈ ದಿನಗಳಲ್ಲಿ ದೇಶದ ಏಕತೆ, ಸಮಗ್ರತೆ ಕಾಪಾಡಿಕೊಂಡು ದೇಶವನ್ನು ಮುನ್ನಡೆಸುವ ಗುರುತರ ಹೊಣೆಗಾರಿಕೆ ಇದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ. ನಾಯಕ್ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಪೌರಾಡಳಿತ ಇಲಾಖೆ, ಜಿಲ್ಲಾಡಳಿತ ಹಾಗೂ ನಗರಸಭೆ ಸಹಯೋಗದೊಂದಿಗೆ ನಗರಸಭೆ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಏಕತಾ ಸಪ್ತಾಹದ ಸಮಾರೋಪದ ಅಂಗವಾಗಿ ಪರಿಸರ ಸ್ವಚ್ಛತಾ ಕಾರ್ಯಕ್ರಮ ಹಾಗೂ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಂವಿಧಾನದಲ್ಲಿ ನಂಬಿಕೆ ಇಟ್ಟು ಗೌರವ ನೀಡುವುದರೊಂದಿಗೆ ನಮ್ಮ ಕರ್ತವ್ಯ ನಿಭಾಯಿಸಬೇಕಿದೆ. ಏಕತೆ ಹಾಗೂ ಸಮಗ್ರತೆಯಿಂದ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕಿದೆ. ಭಾಷೆ, ನೆಲ, ಸಂಸ್ಕೃತಿ ವಿಷಯದಲ್ಲಿ ಭಾರತೀಯರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಶಕ್ತಿ ಇದೆ. ನಮ್ಮ ಕಲೆ, ಸಂಸ್ಕೃತಿ, ಪರಂಪರೆಗಳನ್ನು ವಿಶ್ವ ಮಟ್ಟದಲ್ಲಿ ಸಾರುವುದು ಹಾಗೂ ನಮ್ಮ ಪರಿಸರವನ್ನು ಸಂರಕ್ಷಣೆ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದರು.

ರಾಷ್ಟ್ರೀಯ ಏಕತಾ ಸಪ್ತಾಹದ ಕಾರ್ಯಕ್ರಮ ಈ ಧ್ಯೇಯಗಳಿಗೆ ಇಂಬು ನೀಡುತ್ತಿದೆ. ಜಿಲ್ಲೆಯಾದ್ಯಂತ ಕಾನೂನು ಸೇವೆಗಳ ಮಾರ್ಗದರ್ಶನದಂತೆ ರಾಷ್ಟ್ರೀಯ ಏಕತಾ ಸಪ್ತಾಹ ಆಚರಿಸಲಾಗಿದೆ. ವಿವಿಧ ಇಲಾಖೆಗಳು ಇದರಲ್ಲಿ ತೊಡಗಿಸಿಕೊಂಡಿವೆ. ಪರಿಸರ ಸಂರಕ್ಷಣೆ, ಪ್ರತಿಜ್ಞಾ ವಿಧಿ ಬೋಧನೆ, ಕವಿಗೋಷ್ಠಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಸಪ್ತಾಹದಲ್ಲಿ ಹಮ್ಮಿಕೊಳ್ಳಲಾಗಿತ್ತು ಎಂದರು.

ಕಾರ್ಯಕ್ರಮದ ಅಂಗವಾಗಿ ನಾಗರಕೆರೆ ಅಂಗಳದಲ್ಲಿ ಸಸಿಗಳನ್ನು ನೆಡಲಾಯಿತು ಹಾಗೂ ಗಗನಾರ್ಯ ಮಠದಲ್ಲಿನ ಐತಿಹಾಸಿಕ ಕಲ್ಯಾಣಿ ಸ್ವಚ್ಛಗೊಳಿಸಲಾಯಿತು.

ಪೌರಾಡಳಿತ ಇಲಾಖೆ ಜಿಲ್ಲಾ ಯೋಜನಾ ನಿರ್ದೇಶಕಿ ಬಿ.ಎಸ್. ಸುಮಾ, ನಗರಸಭೆ ಪೌರಾಯುಕ್ತ ರಮೇಶ್ ಎಸ್.ಸುಣಗಾರ್, ಪರಿಸರ ಎಂಜಿನಿಯರ್‌ ಈರಣ್ಣ, ಹಿರಿಯ ಆರೋಗ್ಯ ನಿರೀಕ್ಷಕಿ ರೂಪಾ ಹಾಗೂ ನಗರಸಭೆ ಸಿಬ್ಬಂದಿ, ಪೌರಕಾರ್ಮಿಕರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು