ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಪಾರದಲ್ಲಿ ತೊಡಗಿದ ಶಾಲಾ ಮಕ್ಕಳು

ಓಂಕಾರ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಮಕ್ಕಳ ಸಂತೆ
Last Updated 10 ಫೆಬ್ರುವರಿ 2020, 12:28 IST
ಅಕ್ಷರ ಗಾತ್ರ

ವಿಜಯಪುರ: ಬನ್ನಿ ಅಣ್ಣಾ, ಅಕ್ಕ, ಬನ್ನಿ ಸಾರ್ ಬನ್ನೀ... ಎಂದು ಕೂಗುತ್ತಾ ವಿದ್ಯಾರ್ಥಿಗಳು ತಂದಿರುವ ತರಕಾರಿ, ವಿವಿಧ ಬಗೆಯ ತಿಂಡಿಗಳನ್ನು ಪ್ರದರ್ಶಿಸಿ ಆಕರ್ಷಿಸಿ, ಮಾರಾಟ ಮಾಡಿದರು.

ಹೋಬಳಿಯ ನಾರಾಯಣಪುರ ಓಂಕಾರ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಕಂಡ ನೋಟವಿದು.

ತಾಜಾ ತರಕಾರಿ ಇದೆ ಬನ್ನಿ, ಟೊಮೆಟೊ ಇದೆ. ಮೂಲಂಗಿ, ಕ್ಯಾರೆಟ್, ಅವರೆಕಾಯಿ, ಕೊತ್ತಂಬರಿಸೊಪ್ಪು, ಮೆಂತ್ಯ ಸೊಪ್ಪು, ದಂಟಿನಸೊಪ್ಪು ತಗೊಳ್ಳಿ ಎಂದು ಕೂಗು ಹಾಕಿ ಪೈಪೋಟಿಯ ಮೇಲೆ ಗ್ರಾಹಕರನ್ನು ಕರೆದು ಭರ್ಜರಿ ವ್ಯಾಪಾರ ಮಾಡಿದರು. ಇದರ ಜತೆಗೆ ಬೇಲ್‌ಪುರಿ, ಬೋಂಡಾ, ಬಜ್ಜಿ, ಕಡ್ಲೆ ಹುಸ್ಲಿ ಮಾರಾಟ ಜೋರಾಗಿಯೆ ನಡೆಯಿತು.

ಹಲವು ವಿಧದ ತರಕಾರಿ, ಕುರುಕಲು ತಿಂಡಿ ತಿನಿಸುಗಳ ಭರ್ಜರಿ ವ್ಯಾಪಾರ, ವ್ಯಾಪಾರಿಗಳೊಂದಿಗೆ ಗ್ರಾಹಕರು ಚೌಕಾಸಿಗಿಳಿದರು. ವ್ಯಾಪಾರಿಗಳಂತೆಯೇ ಮಕ್ಕಳು ಸಹ ಟೊಮೆಟೊ, ಕ್ಯಾರೆಟ್, ಅವರೆಕಾಯಿ ಸೇರಿ ಹಲವು ತರಕಾರಿ ರಾಶಿ ಹಾಕಿಕೊಂಡು ಪೈಪೋಟಿಗೆ ಬಿದ್ದವರಂತೆ ಕೂಗುತ್ತಾ ಗ್ರಾಹಕರನ್ನು ತಮ್ಮ ಕಡೆಗೆ ಸೆಳೆದರು.

ಶಾಲೆಯ ಮುಖ್ಯಶಿಕ್ಷಕಿ ಲಾವಣ್ಯ ಮಾತನಾಡಿ, ‘ವ್ಯಾಪಾರ ವಹಿವಾಟಿನಿಂದ ಮಕ್ಕಳಲ್ಲಿ ನಿತ್ಯ ಜೀವನದ ಅನುಭವವಾಗುತ್ತದೆ. ತಂದೆ, ತಾಯಿ ಅಂಗಡಿಗೆ ಹೋಗಿ ತರಕಾರಿ ತರಲು ತಿಳಿಸಿದರೆ ಯಾವ ರೀತಿ ವ್ಯಾಪಾರ ಮಾಡಬೇಕೆಂಬ ಅರಿವು ಸಿಕ್ಕಂತಾಗಿದೆ. ಮಕ್ಕಳು ಕೇವಲ ಆಟ ಪಾಠಕ್ಕೆ ಸೀಮಿತವಾಗದೆ ಲೋಕ ಜ್ಞಾನ, ವ್ಯಾವಹಾರಿಕ ಜ್ಞಾನ ತಿಳಿದುಕೊಳ್ಳಬೇಕು. ಸಂತೆಯು ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಬೆಳೆಸುತ್ತದೆ’ ಎಂದರು.

‘ಸಾಮಾಜಿಕ ಬದುಕು, ಪ್ರಪಂಚ ಜ್ಞಾನ, ಜೀವನದ ಮೌಲ್ಯಗಳನ್ನು ಕಲಿಯದ ಹೊರತು ಶಿಕ್ಷಣ ಪರಿಪೂರ್ಣವಾಗುವುದಿಲ್ಲ. ಮಕ್ಕಳಿಗೆ ಬರೀ ಪಠ್ಯದ ವಿಷಯಗಳನ್ನು ಕಲಿಸಿದರೆ ಸಾಲದು, ಜೊತೆಯಲ್ಲಿ ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಜೀವನದ ಮೌಲ್ಯಗಳನ್ನು ಕಲಿಸಬೇಕು’ ಎಂದರು.

ಕಾರ್ಯದರ್ಶಿ ಎಚ್.ಎನ್.ಮುನಿರಾಜು ಮಾತನಾಡಿ, ‘ತಮ್ಮ ಪೋಷಕರ ಕಷ್ಟ ಸುಖಗಳು ಮಕ್ಕಳಿಗೆ ತಿಳಿಯಬೇಕು. ಹೊರಗಿನ ಜಗತ್ತಿನಲ್ಲಿ ಜೀವನ ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನು ತಿಳಿಸುವ ಉದ್ದೇಶದಿಂದ ಮಕ್ಕಳ ಸಂತೆ ಆಯೋಜಿಸಿದ್ದೇವೆ. ಪುಟಾಣಿ ಮಕ್ಕಳ ಈ ಸಂತೆಯಲ್ಲಿ ಭಾಗವಹಿಸಿರುವ ಪೋಷಕರೂ ಹಾಗೂ ಶಾಲಾ ಸಿಬ್ಬಂದಿ ಸಂತೆಯಲ್ಲಿರುವ ಎಲ್ಲ ವಸ್ತುಗಳನ್ನು ಖರೀದಿಸುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸುತ್ತಿದ್ದಾರೆ’ ಎಂದರು.
ಶಾಲೆಯ ಲೆಕ್ಕಪತ್ರ ನಿರ್ವಾಹಕ ಶ್ರೀನಿವಾಸಮೂರ್ತಿ ಮಾತನಾಡಿ, ‘ಮಕ್ಕಳಲ್ಲಿ ವ್ಯಾಪಾರ ಮನೋಭಾವ ಬೆಳೆಸುವುದು, ವಾಣಿಜ್ಯ ದೃಷ್ಟಿಕೋನ ಹಾಗೂ ವಸ್ತುಗಳನ್ನು ಖರೀದಿಸುವಾಗ ಕಲಿಯಬೇಕಾದ ಮಾಪನಗಳನ್ನು ಪ್ರಾಯೋಗಿಕವಾಗಿ ಮಕ್ಕಳಲ್ಲಿ ಕಲಿಸಲು ಮಕ್ಕಳ ಸಂತೆ ಸಹಕಾರಿ’ ಎಂದರು.

‘ಪರಸ್ಪರ ಸ್ಪರ್ಧಾ ಮನೋಭಾವದಿಂದ ಮಕ್ಕಳು ನಾವೇ ಹೆಚ್ಚು ವ್ಯಾಪಾರ ಮಾಡಬೇಕು. ಎಂಬ ಛಲದಿಂದ ಪೋಷಕರನ್ನು ಕರೆದು ತಮ್ಮ ಅಂಗಡಿಯ ಸಾಮಗ್ರಿ ಖರೀದಿಸಲು ಒತ್ತಾಯಿಸುತ್ತಿದ್ದರು’ ಎಂದರು.

ಶಿಕ್ಷಕಿ ಸುಮಯ್ಯ ಮಾತನಾಡಿ, ‘ಮಕ್ಕಳನ್ನು ಪಠ್ಯಕ್ಕೆ ಸೀಮಿತ ಮಾಡುವುದು ಸರಿಯಲ್ಲ. ಸಮಗ್ರ ಶಿಕ್ಷಣದ ಭಾಗವಾಗಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿರುತ್ತವೆ ಎಂದರು. ಶಿಕ್ಷಕರಾದ ಫರ್ಹಾನಾ, ರುಕ್ಸಾನಾ, ಪವಿತ್ರ, ಜಮುನಾ, ಸುಜಾತ, ಪದ್ಮಾ, ದೀಪಾ, ಭಾನುಮತಿ, ರಾಮಚಂದ್ರಮೂರ್ತಿ, ಸಹಾಯಕಿ ಸುಜಾತಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT