ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುಬಾಯಿ ಜ್ವರ, ಹಾಲು ಉತ್ಪಾದನೆ ಕುಸಿತ

ವಿವಿಧ ಹಳ್ಳಿಗಳಲ್ಲಿ ಬಳಲುತ್ತಿರುವ ರಾಸುಗಳು, ಆತಂಕದಲ್ಲೆ ಕಾಲ ಕಳೆಯುತ್ತಿರುವ ರೈತರು
Last Updated 3 ಡಿಸೆಂಬರ್ 2018, 13:21 IST
ಅಕ್ಷರ ಗಾತ್ರ

ವಿಜಯಪುರ: ತಾಲ್ಲೂಕಿನ ತಿಮ್ಮನಹಳ್ಳಿ ಗ್ರಾಮದಲ್ಲಿ ಕಾಲುಬಾಯಿ ಜ್ವರವು ತೀವ್ರಗೊಂಡಿದ್ದು 12ಕ್ಕೂ ಹೆಚ್ಚು ರಾಸುಗಳು ಜ್ವರದಿಂದ ಬಳಲುತ್ತಿವೆ.

ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ರೈತರು ಒಂದು ಕಡೆ, ಇನ್ನೊಂದು ಕಡೆ ಜ್ವರದಿಂದ ಬಳಲುತ್ತಿರುವ ರಾಸುಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇದು ಆತಂಕ ಮೂಡಿಸಿದೆ.

ರೋಗ ತಡೆಗಟ್ಟಲು ವರ್ಷದಲ್ಲಿ ಎರಡು ಬಾರಿ ಲಸಿಕೆ ಹಾಕಿಸಲಾಗಿದೆ. ಹಾಗಿದ್ದರೂ ರಾಸುಗಳು ರೋಗಕ್ಕೆ ತುತ್ತಾಗುತ್ತಿರುವುದು ಲಸಿಕೆಯ ಗುಣಮಟ್ಟದ ಮೇಲೆಯೇ ಅನುಮಾನ ಮೂಡುವಂತೆ ಮಾಡಿದೆ. ಇದರ ಜೊತೆಗೆ ಹೊಸ ಪ್ರಬೇಧದ ವೈರಸ್‌ಗಳಿಂದ ಕಾಲುಬಾಯಿ ಜ್ವರ ಬರುತ್ತಿದೆಯಾ ಎನ್ನುವ ಅನುಮಾನಗಳು ಹೈನುಗಾರರನ್ನು ಕಾಡಲಾರಂಭಿಸಿದೆ.

ಕಟ್ಟಿದ ಜಾಗದಲ್ಲೇ ರಾಸುಗಳು ನಿತ್ರಾಣಗೊಂಡು ನಿಂತಿವೆ. ಬಾಯಿ, ಗೊರಸುಗಳಲ್ಲಿ ಗಾಯಗಳಾಗಿರುವ ಕಾರಣ ಏನನ್ನೂ ತಿನ್ನಲಾಗದೆ, ನೀರೂ ಕುಡಿಯಲಾಗದೆ ಪರದಾಡುತ್ತಿವೆ.

ಮಂಡಿಬೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮನಹಳ್ಳಿ ಗ್ರಾಮದಲ್ಲಿ 75 ಕುಟುಂಬಗಳಿವೆ. 500ಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮದಲ್ಲಿ ಹೆಚ್ಚಿನ ಮಂದಿ ಹೈನುಗಾರಿಕೆಯನ್ನು ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಗ್ರಾಮದಲ್ಲಿ 180 ರಾಸುಗಳಿವೆ. ದಿನನಿತ್ಯ ಇಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 600 ಲೀಟರ್ ಹಾಲು ಪೂರೈಕೆಯಾಗುತ್ತಿದೆ. ಪ್ರತಿಯೊಂದು ರಾಸುವಿಗೂ ಕಾಲುಬಾಯಿ ರೋಗ ಬಾರದಂತೆ ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕಿಸಲಾಗಿದೆ.

ರಾಸುಗಳು ರೋಗದಿಂದ ಬಳಲುತ್ತಿರವುದರಿಂದ ಹಾಲಿನ ಉತ್ಪಾದನೆಯ ಪ್ರಮಾಣವೂ ಕುಂಟಿತವಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಹೆಚ್ಚಿನ ಕಾಳಜಿ ವಹಿಸಬೇಕು ಎನ್ನುವುದು ಗ್ರಾಮಸ್ಥರು ಅಭಿಪ್ರಾಯ.

ರೋಗದ ಲಕ್ಷಣಗಳು: ಸಾಮಾನ್ಯವಾಗಿ ಆಪ್ತೋ ವೈರಸ್ ಜೀನ್ಸ್ ಗುಂಪಿನ ಪಿಕಾರನ್ ಎಂಬ ವೈರಸ್‌ನಿಂದ ಹರಡುವ ಕಾಲುಬಾಯಿ ಜ್ವರ ಕಾಣಿಸಿಕೊಂಡ ರಾಸುಗಳಲ್ಲಿ ಮೊದಲಿಗೆ ಜ್ವರ ಕಾಣಿಸಿಕೊಳ್ಳುತ್ತದೆ. ಜ್ವರ ಬಂದ ನಂತರ ರಾಸುಗಳು ಮೇವು, ಆಹಾರ ಸೇವಿಸುವುದನ್ನು ಕಡಿಮೆ ಮಾಡುತ್ತದೆ. ಇದರಿಂದ ರಾಸುಗಳು ನಿತ್ರಾಣಗೊಳ್ಳುತ್ತವೆ. ಇದರೊಂದಿಗೆ ರಾಸುಗಳ ಬಾಯಲ್ಲಿ ನೀರು ಗುಳ್ಳೆಗಳು, ಕೆಚ್ಚಲ ಬಳಿ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಕ್ರಮೇಣ ಈ ಗುಳ್ಳೆಗಳು ಕೆಂಪು ಬಣ್ಣಕ್ಕೆ ತಿರುಗಿ ರಕ್ತ ಸೋರತೊಡಗುತ್ತದೆ. ಬಾಯಲ್ಲಿ ಜೊಲ್ಲು ಸುರಿಯಲಾರಂಭಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT