ಶುಕ್ರವಾರ, ನವೆಂಬರ್ 27, 2020
18 °C

ಬಿಜೆಪಿ ಅಭ್ಯರ್ಥಿ ಪರ ಸಂಸದ ಮುನಿಸ್ವಾಮಿ ಪ್ರಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಲೂರು: ‘ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯನ್ನು ಕಾರ್ಯಕರ್ತರು ಗಂಭೀರವಾಗಿ ತೆಗೆದುಕೊಂಡು ಪದವೀಧರರ ಮನೆಗೆ ಭೇಟಿ ನೀಡಿ ಮತ ಕೇಳಿದಾಗ ಮಾತ್ರ ಪಕ್ಷದ ಅಭ್ಯರ್ಥಿ ಗೆಲ್ಲಲು ಸಾಧ್ಯ’ ಎಂದು ಸಂಸದ ಎಸ್. ಮುನಿಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಗುರುವಾರ ತಾಲ್ಲೂಕು ಬಿಜೆಪಿ ಘಟಕದಿಂದ ಹಮ್ಮಿಕೊಂಡಿದ್ದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಬಿಜೆಪಿ ಆಭ್ಯರ್ಥಿ ಚಿದಾನಂದ ಎಂ. ಗೌಡ ಅವರ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇದು ಕಾರ್ಯಕರ್ತರ ಶಕ್ತಿ ಮತ್ತು ಸಾಮರ್ಥ್ಯ ತೋರಿಸುವ ಚುನಾವಣೆಯಾಗಿದೆ. ಹಾಗಾಗಿ, ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿರುವ ಪದವೀಧರ ಮತದಾರರ ಮನೆಗಳಿಗೆ ಭೇಟಿ ನೀಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಪದವೀಧರರು, ಶಿಕ್ಷಕರು ಮತ್ತು ನಿರುದ್ಯೋಗಿ ಪದವೀಧರರಿಗೆ ನೀಡಿರುವ ಕೊಡುಗೆಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಡಬೇಕು’ ಎಂದು ಸಲಹೆ ನೀಡಿದರು.

ಒತ್ತಡದಲ್ಲಿ ಪಕ್ಷದ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಲು ಆಗುವುದಿಲ್ಲ. ಅದಕ್ಕಾಗಿ ಇಂದಿನಿಂದಲೇ ಪದವೀಧರರನ್ನು ಸಂಪರ್ಕಿಸಿ ಚಿದಾನಂದ ಗೌಡ ಅವರ ಗೆಲುವಿಗೆ ಶ್ರಮಿಸಲು ಮುಂದಾಗಬೇಕು ಎಂದರು.

ಇಡೀ ದೇಶವೇ ಕೊರೊನಾದಿಂದ ತತ್ತರಿಸಿ ಹೋಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊರೊನಾ ಸೋಂಕು ತಡೆಗೆ ಪಣತೊಟ್ಟಿದೆ. ಪದವೀಧರ ನಿರುದ್ಯೋಗಿಗಳು ಮತ್ತು ಶಿಕ್ಷಕರಿಗಾಗಿ ಪ್ರಧಾನಿ ನರೇಂದ್ರ ಮೋದಿ ₹ 72 ಸಾವಿರ ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿದ್ದಾರೆ. ನಿರುದ್ಯೋಗಿ ಪದವೀಧರರು ಸ್ವಾವಲಂಬಿಯಾಗಿ ಬದುಕಲು ಬ್ಯಾಂಕ್‌ಗಳಿಂದ ಸೌಲಭ್ಯ ಕಲ್ಪಿಸಲಾಗಿದೆ. ಈ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.

ಕಳೆದ ಆರು ವರ್ಷಗಳ ಅವಧಿಯಲ್ಲಿ ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯ ತೋಪಲ್ಲಿ ನಾರಾಯಣಸ್ವಾಮಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಈ ಕುರಿತು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

ಸಭೆಯಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಪುರ ನಾರಾಯಣಸ್ವಾಮಿ, ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಹನುಮಂತಪ್ಪ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಂ. ರಾಮಮೂರ್ತಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಅಮುದ, ಮುಖಂಡರಾದ ಪಿ. ನಾರಾಯಣಸ್ವಾಮಿ, ಗುರುನಾಥ್ ರೆಡ್ಡಿ, ನಗರ ಪ್ರಾಧಿಕಾರದ ಅಧ್ಯಕ್ಷ ಸತೀಶ್ ಆರಾಧ್ಯ, ಪುರಸಭೆ ಸದಸ್ಯ ಎಂ.ವಿ. ವೇಮನ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು