ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7,500 ಹೆಕ್ಟೇರ್ ರಾಗಿ ಬೆಳೆ ನಷ್ಟ

ಬೆಂಬಲ ಬೆಲೆ ಘೋಷಣೆಗೆ ರಾಜ್ಯ ಸರ್ಕಾರಕ್ಕೆ ರೈತರ ಆಗ್ರಹ
Last Updated 8 ಡಿಸೆಂಬರ್ 2021, 21:54 IST
ಅಕ್ಷರ ಗಾತ್ರ

ದೇವನಹಳ್ಳಿ:ಬಯಲುಸೀಮೆ ರೈತರಿಗೆ ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆ ವರದಾನವಾಗಿತ್ತು. ಆದರೆ, ಇತ್ತೀಚೆಗೆ ಸುರಿದ ಜಡಿ ಮಳೆ ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.

ತಾಲ್ಲೂಕಿನಲ್ಲಿ ರಾಗಿ ಪ್ರಧಾನ ಬೆಳೆ. ಸತತ ಮಳೆಯಿಂದಾಗಿ ರೈತರು ರಾಗಿ ಉತ್ತಮ ಇಳುವರಿ ಬರುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದರು. ಸಾಕಷ್ಟು ಬಂಡವಾಳ ಕೂಡ ಹೂಡಿಕೆ ಮಾಡಿದ್ದರು.

ಕಳೆದ ಮೂವತ್ತು ವರ್ಷಗಳಿಂದ ಸರಿಯಾದ ಪ್ರಮಾಣದಲ್ಲಿ ಮಳೆಯಾಗಿರಲಿಲ್ಲ. ಹಾಗಾಗಿ, ಸರ್ಕಾರ ಜಿಲ್ಲೆಯ ನಾಲ್ಕು ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಿತ್ತು. ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಎಲ್ಲ ಕೆರೆಗಳು ತುಂಬಿ ಕೋಡಿ ಹರಿದಿವೆ.

ಸತತ ಮಳೆಯಿಂದಾಗಿ ರಾಗಿ ಬೆಳೆ ನೆಲಕಚ್ಚಿದೆ. ತೆನೆಯಲ್ಲಿನ ರಾಗಿ ಕಾಳು ಕಟಾವಿಗೂ ಮೊದಲೇ ಮೊಳಕೆಯೊಡೆದಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಉತ್ತಮ ಮಳೆಯಾಗಿರುವುದರಿಂದ ಕೆರೆ ಸುತ್ತಮುತ್ತಲಿನಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗುತ್ತಿದ್ದು, ಕೊಳವೆಬಾವಿಗಳಲ್ಲಿ ಈಚೆಗೆ ಬರುತ್ತಿರುವ ನೀರಿನ ಪ್ರಮಾಣವೂ ಏರಿಕೆಯಾಗಿದೆ. ರೈತರು ನಿಧಾನಗತಿಯಲ್ಲಿ ಕೃಷಿ ಚಟುವಟಿಕೆಗಳತ್ತ ಮುಖ ಮಾಡಿದ್ದಾರೆ.

ಕಳೆದ ವರ್ಷ ಹಾಗೂ ಈ ವರ್ಷದಲ್ಲಿ ರಾಗಿ ಫಸಲು ಉತ್ತಮವಾಗಿ ಬಂದಿತ್ತು. ಆದರೆ, ಮಳೆಯಿಂದ ಬಹುತೇಕ ರೈತರು ಬೆಳೆದ ರಾಗಿ ಇಳುವರಿ ಶೇ 60ರಷ್ಟು ಮಾತ್ರ ಕೈಸೇರಿದ್ದು, ಶೇ 40ರಷ್ಟು ಫಸಲು ಭೂಮಿಯ ಪಾಲಾಗಿದೆ. ಉಳಿದ ಅಲ್ಪಸ್ಪಲ್ಪ ರಾಗಿ ಬೆಳೆ ಕಟಾವು ಮಾಡಿಸಿ, ಯಂತ್ರಗಳ ಮೂಲಕ ರಾಗಿ ಮಾಡಿಕೊಂಡು ಬಿಸಿಲಿಗೆ ಒಣ ಹಾಕಿ ಶೇಖರಣೆ ಮಾಡಿಕೊಳ್ಳುತ್ತಿದ್ದಾರೆ.

‘ರಾಗಿ ಬೆಳೆ ಕೆಲವು ಕಡೆ ಸಂಪೂರ್ಣವಾಗಿ ನೆಲ ಕಚ್ಚಿರುವುದರಿಂದ ಸಾಕಷ್ಟು ರೈತರಿಗೆ ಆರ್ಥಿಕ ಪೆಟ್ಟು ಬಿದ್ದಿದೆ. ಸರ್ಕಾರ ರೈತರಿಗೆ ಬೆಂಬಲ ಬೆಲೆ ಹೆಚ್ಚಿಸಿದರೆ ಅನುಕೂಲವಾಗುತ್ತದೆ. ಇದರ ಜತೆಗೆ ನಷ್ಟ ಪರಿಹಾರ ಕೊಡಬೇಕು. ಒಂದು ಕ್ವಿಂಟಲ್ ರಾಗಿ ಬೆಳೆಯಬೇಕಾದರೆ ₹ 5 ಸಾವಿರ ಖರ್ಚು ಬರುತ್ತದೆ’ ಎಂದು ರೈತ ವೆಂಕಟೇಶ್ ಹೇಳುತ್ತಾರೆ.

‘ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗಿರುವುದರಿಂದ ರಾಗಿ ಬೆಳೆ ನೆಲಕಚ್ಚಿದೆ. ರಾಗಿ ಬೆಳೆ ಉತ್ತಮ ಇಳುವರಿ ಬರುವ ನಿರೀಕ್ಷೆಯಲ್ಲಿದ್ದರೂ ಜಿಲ್ಲೆಯಲ್ಲಿ 7,500 ಹೆಕ್ಟೇರ್ ನಷ್ಟವಾಗಿದೆ. ಮುಂದಿನ ವರ್ಷಗಳಲ್ಲಿ ಇದೇ ರೀತಿ ಸನ್ನಿವೇಶ ಮರುಕಳಿಸಬಹುದು. ಅದಕ್ಕಾಗಿ ರೈತರು ಮುಂದಿನ ವರ್ಷಗಳಿಂದ ಬೆಳೆ ವಿಮೆ ಮಾಡಿಸಿಕೊಂಡರೆ ಅನುಕೂಲವಾಗುತ್ತದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಯಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT