ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕು ಮರುಸ್ಥಾಪನೆ ಹೋರಾಟಕ್ಕೆ ಪ್ರೇರಣೆಯಗಲಿ

ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ತಾಲ್ಲೂಕು ಸಮಿತಿ ವತಿಯಿಂದ ಕಾರ್ಮಿಕರ ದಿನಾಚರಣೆ
Last Updated 1 ಮೇ 2019, 13:30 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ಹಾಗೂ ಕಾರ್ಮಿಕರ ಹಕ್ಕುಗಳನ್ನು ಮರು ಸ್ಥಾಪಿಸಲು ಕಾರ್ಮಿಕರ ದಿನಾಚರಣೆ ಪ್ರೇರಣೆಯಾಗಬೇಕು ಎಂದು ಎಐಯುಟಿಯುಸಿ ಸಂಘಟನೆ ಜಿಲ್ಲಾ ಉಪಾಧ್ಯಕ್ಷೆ ಟಿ.ಸಿ.ರಮಾ ಹೇಳಿದರು.

ನಗರದ ಹಲೇ ಬಸ್ ನಿಲ್ದಾಣದಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ತಾಲ್ಲೂಕು ಸಮಿತಿ ವತಿಯಿಂದ ನಡೆದ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದರು.

ಆದರೆ, ಕಾರ್ಮಿಕರಿಗೆ ಕೆಲಸದ ಅವಧಿ ಹಾಗೂ ವಿವಿಧ ಸೌಲಭ್ಯಗಳು ಇನ್ನೂ ಮರೀಚಿಕೆಯಾಗಿವೆ. ಅಮೇರಿಕಾದಲ್ಲಿ ನಡೆದ ಕಾರ್ಮಿಕರ ಐತಿಹಾಸಿಕ ಹೋರಾಟಗಳು ಮತ್ತೆ ನಡೆಯಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಅವರು ತಿಳಿಸಿದರು.

ದೇಶದಲ್ಲಿ ಬಹುಪಾಲು ಕಾರ್ಮಿಕರಿಗೆ ಪಿಂಚಣಿ, ಉದ್ಯೋಗ ಮತ್ತು ಸಾಮಾಜಿಕ ಭದ್ರತೆ ಇಲ್ಲದಾಗಿದೆ. ಸರ್ಕಾರಗಳು ಬಂಡವಾಳಶಾಹಿಗಳಿಗೆ ಹಿತವಾದ ಕಾನೂನುಗಳನ್ನು ಮಾತ್ರ ರೂಪಿಸುತ್ತಿವೆ. ದುಡಿಮೆ ಅವಧಿ ಹೆಚ್ಚಳದೊಂದಿಗೆ ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ ನೀಡುವಲ್ಲಿ ಮಾಲೀಕರಿಗೆ ಭಾರಿ ವಿನಾಯಿತಿ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಕಾರ್ಪೊರೆಟ್‌ ಮನೆತನಗಳಿಗೆ ಕೇಂದ್ರ ಸರ್ಕಾರ ₹60 ಲಕ್ಷ ಕೋಟಿ ರೂ ತೆರಿಗೆ ವಿನಾಯಿತಿ ನೀಡಿದೆ. ಆದರೆ ಸರ್ಕಾರಕ್ಕೆ ಸುಸಜ್ಜಿತ ಶಾಲಾ ಕಾಲೇಜುಗಳು,ಉದ್ಯೋಗ ಸೃಷ್ಟಿಸುವ ಸಾರ್ವಜನಿಕ ಉದ್ದಿಮೆಗಳನ್ನು ತೆರೆಯಲು ಹಣದ ಕೊರತೆಯ ನೆಪ ಹೇಳಲಾಗುತ್ತಿದೆ. ಹಿಂದಿನ ಯುಪಿಎ ಹಾಗೂ ಈಗಿನ ಬಿಜೆಪಿ ಸರ್ಕಾರದ ಆರ್ಥಿಕ ನೀತಿಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂಬ ಸತ್ಯ ಕಾರ್ಮಿಕರಿಗೆ ಅರಿವಾಗಿದೆ ಎಂದರು.

ಎಐಯುಟಿಯುಸಿ ಸಂಘಟನೆ ಜಿಲ್ಲಾ ಪದಾಧಿಕಾರಿ ಗೋವಿಂದರಾಜನ್ ಮಾತನಾಡಿ, ಯಾವುದೇ ದೇಶ ಮುಂದುವರೆಯಬೇಕಾದರೆ ಅಲ್ಲಿನ ಕೂಲಿ ಕಾರ್ಮಿಕರ ಪಾತ್ರ ಮಹತ್ವವಾಗಿದೆ. ದಿನಕ್ಕೆ 8 ಗಂಟೆಗೆ ಸೀಮಿತವಾಗಿದ್ದ ಕಾರ್ಮಿಕರ ದುಡಿಮೆ ಈಗ 12 ರಿಂದ 14 ಗಂಟೆಗಳಿಗೆ ಏರಿದೆ ಎಂದು ಟೀಕಿಸಿದರು.

ಸೇವಾವಲಯಕ್ಕೆ ಕಾರ್ಮಿಕರ ಅಗತ್ಯ ಇಲ್ಲ ಎನ್ನುವಂತಾಗಿದೆ. ಗುತ್ತಿಗೆ ಪದ್ಧತಿಯಿಂದ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಕಾರ್ಖಾನೆಗಳಲ್ಲಿ ಕಾರ್ಮಿಕ ಸಂಘಗಳನ್ನು ಸ್ಥಾಪಿಸಲು ಶೇ10 ಅಥವಾ ಕನಿಷ್ಟ 300 ಜನ ಕಾರ್ಮಿಕರಿರಬೇಕು ಎಂದು ಕಾರ್ಮಿಕ ಸಂಘಟನೆ ರಚನೆ ನಿಯಮಕ್ಕೆ ತಿದ್ದುಪಡಿ ತರಲು ಹೊರಟಿರುವುದು ಖಂಡನೀಯ. 1886ರಲ್ಲಿ ಕಾರ್ಮಿಕರ ಹಕ್ಕುಗಳಿಗಾಗಿ ಅಮೇರಿಕಾದಲ್ಲಿ ನಡೆದ ಐತಿಹಾಸಿಕ ಹೋರಾಟ ಮತ್ತೆ ಮರುಕಳಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ತಾಲ್ಲೂಕು ಸಮಿತಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಕಾರ್ಯದರ್ಶಿ ಮಂಜುಳಾ ಸೇರಿದಂತೆ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT