ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾನೊ ಯೂರಿಯಾ: ದೇವನಹಳ್ಳಿಯಲ್ಲಿ ಇಫ್ಕೊದಿಂದ ಸ್ಥಾವರ ಸ್ಥಾಪನೆ

Last Updated 14 ಜುಲೈ 2022, 4:14 IST
ಅಕ್ಷರ ಗಾತ್ರ

ಬೆಂಗಳೂರು: ಇಫ್ಕೊ ಸಂಸ್ಥೆಯು ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಇಫ್ಕೊ ನ್ಯಾನೊ ಯೂರಿಯಾ (ದ್ರವ) ಸ್ಥಾವರವನ್ನು ಸ್ಥಾಪಿಸಲಿದೆ.

ದೇವನಹಳ್ಳಿ ತಾಲ್ಲೂಕಿನ ನಾಗನಾಯಕನಹಳ್ಳಿಯ ‘ಏರೋಸ್ಪೇಸ್‌ ಪಾರ್ಕ್’ನಲ್ಲಿ ಸ್ಥಾವರ ನಿರ್ಮಿಸಲು ಉದ್ದೇಶಿಸಲಾಗಿದೆ.ಒಟ್ಟು ₹550 ಕೋಟಿ ಯೋಜನೆ ಇದಾಗಿದ್ದು, ಸ್ಥಾವರ ನಿರ್ಮಾಣವನ್ನು 15 ತಿಂಗಳಲ್ಲಿ ಮುಕ್ತಾಯಗೊಳಿಸುವ ಕಾಲಮಿತಿ ಹಾಕಿಕೊಳ್ಳಲಾಗಿದೆ.

‘ಈ ಸ್ಥಾವರವು ವಾರ್ಷಿಕ 5 ಕೋಟಿ ಬಾಟಲಿಗಳ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು 5 ಕೋಟಿ ಚೀಲ (22.5 ಲಕ್ಷ ಮೆಟ್ರಿಕ್‌ ಟನ್‌) ಸಾಮಾನ್ಯ ಯೂರಿಯಾಕ್ಕೆ ಸಮನಾಗಿರುತ್ತದೆ. ರಾಜ್ಯ ಸರ್ಕಾರವು ದೇವನಹಳ್ಳಿ ಬಳಿ 12 ಎಕರೆ ಕೆಐಎಡಿಬಿ ಜಮೀನನ್ನು ಘಟಕ ಸ್ಥಾಪಿಸಲು ಮಂಜೂರು ಮಾಡಿದೆ’ ಎಂದು ಇಫ್ಕೊ ರಾಜ್ಯ ಮಾರುಕಟ್ಟೆ ವ್ಯವಸ್ಥಾಪಕ ಡಾ. ಸಿ. ನಾರಾಯಣಸ್ವಾಮಿ ಬುಧವಾರ ತಿಳಿಸಿದರು.

‘ಇಫ್ಕೊ ಈಗ 36 ಸಾವಿರ ಸದಸ್ಯ ಸಹಕಾರ ಸಂಘಗಳನ್ನು ಹೊಂದಿದ್ದು, ವಾರ್ಷಿಕ ₹33 ಸಾವಿರ ಕೋಟಿಗೂ ಹೆಚ್ಚು ವಹಿವಾಟು ನಡೆಸುತ್ತಿದೆ. ಇಫ್ಕೊ ತಯಾರಿಸುತ್ತಿರುವ ನ್ಯಾನೊ ಯೂರಿಯಾಗೆ ದೇಶ ಮತ್ತು ವಿದೇಶಗಳಲ್ಲಿ ಬೇಡಿಕೆ ಇದೆ. ಗುಜರಾತ್‌ನ ಕಲೋಲ್‌ನಲ್ಲಿ ಆರಂಭಿಸಿದ ವಿಶ್ವದ ಮೊದಲ ನ್ಯಾನೊ ಯೂರಿಯಾ ಸ್ಥಾವರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು.ಕಲೋಲ್‌ ಸ್ಥಾವರದಲ್ಲಿ ಇದುವರೆಗೆ 4.5 ಕೋಟಿ ನ್ಯಾನೊ ಯೂರಿಯಾ ಬಾಟಲಿಗಳನ್ನು ಉತ್ಪಾದಿಸಲಾಗಿದೆ’ಎಂದು ವಿವರಿಸಿದರು.

‘500 ಮಿಲಿ ಲೀಟರ್‌ ಬಾಟಲ್‌ ನ್ಯಾನೊ ಯೂರಿಯಾ 45 ಕೆ.ಜಿ. ಯೂರಿಯಾಗೆ ಸಮನಾಗಿದೆ. ಇದರ ಬೆಲೆಯು ಒಂದು ಯೂರಿಯಾ ಚೀಲಕ್ಕಿಂತ ಶೇ 10ರಷ್ಟು ಕಡಿಮೆಯಾಗಿದೆ. ನ್ಯಾನೊ ಯೂರಿಯಾ ಬಳಕೆಯಿಂದ ಬೆಳೆಗಳ ಉತ್ಪಾದನೆ ಹೆಚ್ಚಲಿದ್ದು, ಮಣ್ಣಿನ ಆರೋಗ್ಯದ ಗುಣಮಟ್ಟ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ’ ಎಂದು ತಿಳಿಸಿದರು.

’ನಾಗನಾಯಕನಹಳ್ಳಿಯಲ್ಲಿಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೂತನ ಸ್ಥಾವರಕ್ಕೆ ಜುಲೈ 14ರಂದು ಭೂಮಿ ಪೂಜೆ ನೆರವೇರಿಸಲಿದ್ದಾರೆ. ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್‌, ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಮಾನ್ಸುಖ್‌ ಮಾಂಡವೀಯ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ಸಿ.ಎಂ ಭೇಟಿ ಅವಕಾಶ: ರೈತರ ಮನವಿ
ಚನ್ನರಾಯಪಟ್ಟಣ (ವಿಜಯಪುರ):ಚನ್ನರಾಯಪಟ್ಟಣ ಹೋಬಳಿ ನಾಗನಾಯಕನಹಳ್ಳಿಗೆ ಬರುತ್ತಿರುವ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲು ಅವಕಾಶ ನೀಡಬೇಕು ಎಂದು ಕೋರಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದರು.

ಇಪ್ಕೋ ಕಂಪನಿಯ ಯೂರಿಯಾ ಕಾರ್ಖಾನೆ ಸ್ಥಾಪನೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ನಾಗನಾಯಕನಹಳ್ಳಿಗೆ ಬರಲಿದ್ದಾರೆ.

ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮುಖ್ಯಮಂತ್ರಿ ಶಿಷ್ಟಾಚಾರದ ಭದ್ರತಾ ಅಧಿಕಾರಿಗಳು ರೈತ ಮುಖಂಡರ ಜೊತೆ ಚರ್ಚೆ ನಡೆಸಿದ್ದಾರೆ.

ಮುಖ್ಯಮಂತ್ರಿ ಅವರ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಅಗೌರವ ಅಥವಾ ಪ್ರಚಾರಕ್ಕಾಗಿ ಕಾರ್ಯಕ್ರಮಕ್ಕೆ ತೊಂದರೆ ಮಾಡುವ ಘಟನೆ ನಡೆಯದಂತೆ ರಕ್ಷಣೆ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಹೀಗಾಗಿ ಭೂಸ್ವಾಧೀನ ವಿರೋಧ ಹೋರಾಟ ಸಮಿತಿಯ ಐವರು ಸದಸ್ಯರು ಮುಖ್ಯಮಂತ್ರಿಗೆ ಮನವಿ ಕೊಡಲು ಅವಕಾಶ ನೀಡುತ್ತೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ ಎನ್ನಲಾಗಿದೆ.

ಅಲ್ಲದೆ, ವಿವಿಧ ಕಡೆಗಳಿಂದ ಗಣ್ಯರು ಬರುವ ಕಾರಣ, ಮುಖ್ಯಮಂತ್ರಿಗಳು ರೈತರ ಜೊತೆ ಮಾತುಕತೆ ನಡೆಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ರೈತರಿಗೆ ಮನವರಿಕೆ ಮಾಡಿಕೊಟ್ಟರು.

ಡಿವೈಎಸ್ಪಿ. ನಾಗರಾಜ್, ಸರ್ಕಲ್ ಇನ್ ಸ್ಪೆಕ್ಟರ್ ವೀರೇಂದ್ರ ಪ್ರಸಾದ್, ಸಬ್ ಇನ್ ಸ್ಪೆಕ್ಟರ್ ಶರಣಪ್ಪ, ರೈತ ಹೋರಾಟಗಾರರಾದ ಕಾರಹಳ್ಳಿ ಶ್ರೀನಿವಾಸ್, ವೆಂಕಟರಮಣಪ್ಪ, ಮುಕುಂದ್, ನಲ್ಲಪ್ಪನಹಳ್ಳಿ ನಂಜಪ್ಪ, ಸುರೇಶ್, ಮುಂತಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT