ಬುಧವಾರ, ಜನವರಿ 29, 2020
24 °C

ಸ್ವಾಯತ್ತ ಸಂಸ್ಥೆಗಳ ಖಾಸಗೀಕರಣ ಹುನ್ನಾರ: ಮುನಿಆಂಜಿನಪ್ಪ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ : ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸ್ವಾಯತ್ತ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಪ್ರಧಾನಿ ನರೇಂದ್ರ ಮೋದಿ ಹುನ್ನಾರ ನಡೆಸುತ್ತಿದ್ದಾರೆ ಎಂದು ಪ್ರಜಾ ವಿಮೋಚನಾ ಚಳವಳಿ (ಸ್ವಾಭಿಮಾನ) ರಾಜ್ಯ ಸಂಸ್ಥಾಪಕ ಅಧ್ಯಕ್ಷ ಮುನಿಆಂಜಿನಪ್ಪ ಆರೋಪಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪ್ರಜಾ ವಿಮೋಚನಾ ಚಳುವಳಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಸ್ವಾಯತ್ತ ಸಂಸ್ಥೆಗಳ ಜತೆಗೆ ತನ್ನ ಅಧೀನದಲ್ಲಿರುವ ಬೆಮೆಲ್, ಬಿ.ಎಸ್.ಎನ್.ಎಲ್, ಎಚ್.ಎ.ಎಲ್. ಮತ್ತು ದೇಶಕ್ಕೆ ಅತಿ ಆದಾಯದ ಮೂಲವಾಗಿರುವ ರೈಲ್ವೆಯನ್ನು ಖಾಸಗಿ ಬಂಡವಾಳ ಹೂಡಿಕೆದಾರರಿಗೆ ರತ್ನಗಂಬಳಿ ಹಾಸಿ ನೀಡಲು ಮುಂದಾಗಿದೆ. ಇದಕ್ಕೆ ದಿವಾಳಿತನವೇ ಕಾರಣವೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರದ ಅವೈಜ್ಞಾನಿಕ ನಿರ್ಧಾರಗಳಾದ ನೋಟು ರದ್ದತಿ, ಜಿ.ಎಸ್.ಟಿ. ಜಾರಿ, ಆದಾಯ ತೆರಿಗೆ ಪ್ರಮಾಣ ಹೆಚ್ಚಳದಿಂದ ದೇಶದ ಜಿ.ಡಿ.ಪಿ ದರ ಪಾತಾಳಕ್ಕೆ ಕುಸಿಯುತ್ತಿದೆ. ಜಮೀನು, ಚಿನ್ನಾಭರಣ ಅಡಮಾನವಿಟ್ಟರೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಸಿಗುತ್ತಿಲ್ಲ. ಮೊದಲ ಬಾರಿಗೆ ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ ನರೇಂದ್ರ ಮೋದಿ ಐದು ವರ್ಷದಲ್ಲಿ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ವರ್ಷಕ್ಕೆ ಕನಿಷ್ಠ ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗಿಲ್ಲ ಎಂದು ಟೀಕಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಸೋಲೂರು ನಾಗರಾಜ್ ಮಾತನಾಡಿ, ‘ಭಾರತ್ ಬಂದ್ ಗೆ ನಾವು ಬೆಂಬಲ ಘೋಷಿಸಿದ್ದೇವೆ, ಅವೈಜ್ಞಾನಿಕ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಬಂದ್ ನಡೆಯುತ್ತಿದೆ. ಕೇಂದ್ರ ಸರ್ಕಾರದ ದುರಾಡಳಿತದಿಂದ ಈರುಳ್ಳಿ ಸೇರಿದಂತೆ ದೈನಂದಿನ ಬಳಕೆ ವಸ್ತುಗಳು ಗಗನಕ್ಕೇರುತ್ತಿವೆ’ ಎಂದು ಆಕ್ಷೇಪಿಸಿದರು.

ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಸಿಲಿಂಡರ್‌ ಬೆಲೆ ಏರುಮುಖವಾಗಿದೆ. ಸಾಮಾನ್ಯರ ಜನಜೀವನ ಸಂಕಷ್ಟಕ್ಕೀಡಾಗುತ್ತಿದೆ. ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸಚಿವರು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸುವುದರಲ್ಲಿ ತಲ್ಲೀನರಾಗಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ದೂರಿದರು.

ಪಿ.ವಿ.ಸಿ. ಜಿಲ್ಲಾ ಘಟಕದ ಅಧ್ಯಕ್ಷ ಹನುಮಣ್ಣ ಗುಳ್ಯ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಸಂಘಟನಾ ಕಾರ್ಯದರ್ಶಿಗಳಾದ ಚನ್ನಮರಿಯಪ್ಪ, ಬೈರಪ್ಪ, ತಾಲ್ಲೂಕು ಘಟಕ ಉಪಾಧ್ಯಕ್ಷ ದೇವರಾಜ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಆಚಾರ್, ಕುಂದಾಣ ಹೋಬಳಿ ಘಟಕದ ಅಧ್ಯಕ್ಷ ಸುಬ್ರಮಣಿ, ಉಪಾಧ್ಯಕ್ಷ ಎಂ. ಮೂರ್ತಿ, ಕಸಬಾ ಹೋಬಳಿ ಘಟಕ ಅಧ್ಯಕ್ಷ ಎನ್. ಮೂರ್ತಿ, ತಾಲ್ಲೂಕು ಯುವಘಟಕಅಧ್ಯಕ್ಷ ಮುನಿರಾಜ್, ಉಪಾಧ್ಯಕ್ಷ ರಾಜೇಶ್, ಟೌನ್ ಘಟಕ ಗೌರವಾಧ್ಯಕ್ಷ ಮುನಿರಾಜು, ಉಪಾಧ್ಯಕ್ಷ ಆನಂದ್ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು