ಭಾನುವಾರ, ಮೇ 16, 2021
24 °C
ತುರ್ತು ಸೇವೆಗಳಿಗೆ ಸರ್ಕಾರದ ವಿನಾಯಿತಿ l ಅನಾವಶ್ಯಕ ಸಂಚಾರಕ್ಕೆ ಕಡಿವಾಣ

ರಾತ್ರಿ ಕರ್ಫ್ಯೂ; ರೈತರಿಗೆ ಹೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೂಲಿಬೆಲೆ: ಕೊರೊನಾ ಹರಡುವುದನ್ನು ತಡೆಗಟ್ಟಲು ಮೊದಲ ಹಂತದಲ್ಲಿ ಪ್ರಾರಂಭವಾದ ‘ಲಾಕ್ ಡೌನ್’ ನಿಂದ ಈಗಾಗಲೇ ಕಾರ್ಮಿಕ ಮತ್ತು ರೈತಾಪಿ ವರ್ಗ ಆರ್ಥಿಕ ನಷ್ಟ ಅನುಭವಿಸಿದ್ದಾರೆ. ರಾತ್ರಿ ಕರ್ಫ್ಯೂ ಏರುತ್ತಿರುವುದು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸರಿ ಎನಿಸಿದರೂ ಬಡ ಕಾರ್ಮಿಕ ಹಾಗೂ ರೈತ ವರ್ಗದ ಮೇಲೆ ಆರ್ಥಿಕ ಹೊಡೆತ ಬೀಳಲಿದೆ ಎನ್ನುತ್ತಾರೆ ಸಾರ್ವಜನಿಕರು.

ಹೂವು ಮಾರುಕಟ್ಟೆ ವಹಿವಾಟು ಬೆಳಗಿನ ಜಾವ 3 ರಿಂದ 6 ಗಂಟೆಗೆ ಕೊನೆಗೊಳ್ಳಲಿದೆ. ಹೂವು ಉತ್ಪಾದಿಸುವ ಕೃಷಿಕರು ರಾತ್ರಿ 1ಗಂಟೆಯಿಂದ ಮಾರುಕಟ್ಟೆಗೆ ಹೂವು ಸಾಗಿಸುತ್ತಾರೆ. ಬಣ್ಣದ ಕ್ಯಾಪ್ಸಿಕಂ, ಗುಲಾಬಿ ಹೂವು ಹಾಗೂ ಇನ್ನಿತರ ತರಕಾರಿ ಹೊರ ದೇಶಗಳಿಗೆ ರಫ್ತಾಗುತ್ತದೆ. ರಾತ್ರಿ ಕರ್ಫ್ಯೂ ಏರುವುದರಿಂದ ಕೃಷಿಕನಿಗೆ ಹೆಚ್ಚಿನ ನಷ್ಟವಾಗಲಿದೆ. ಸರ್ಕಾರ ರೈತರ ಉತ್ಪಾನೆಗಳ ಸಾಗಾಟ ಮತ್ತು ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎನ್ನುತ್ತಾರೆ ಬೆಟ್ಟಹಳ್ಳಿ ಗ್ರಾಮದ ಕೃಷಿಕ ಶ್ರೀನಿವಾಸ್ ಹಾಗೂ ನಂದಗುಡಿ ಹೋಬಳಿ ಹಳೇವೂರಿನ ಪ್ರಗತಿಪರ ರೈತ ಉತ್ತನಳ್ಳಪ್ಪ.

ರಾತ್ರಿ ಕರ್ಫ್ಯೂ ನಿಯಮ ಕ್ರಿಸ್‌ ಮಸ್‌ ಹಬ್ಬದ ಮೇಲೆ ಪರಿಣಾಮ ಬೀರುವುದಿಲ್ಲ. ನಗರ ಪ್ರದೇಶದ ಕೆಲವು ಚರ್ಚ್ ಗಳಲ್ಲಿ ಮಾತ್ರ ರಾತ್ರಿ ವೇಳೆ ಹಬ್ಬ ಆಚರಿಸುತ್ತಾರೆ. ಹೊಸ ವರ್ಷಾಚರಣೆ ರಾತ್ರಿ ಮಾಡುವ ಬದಲು ಬೆಳಿಗ್ಗೆ ಆಚರಿಸಕೊಳ್ಳಲಾಗುವುದು. ಅಂತರರಾಷ್ಟ್ರೀಯ ವಿಮಾನಗಳಿಗೆ ನಿರ್ಬಂಧ ವಿಧಿಸಲಾಗಿದೆ. ರಾತ್ರಿ ಕರ್ಫ್ಯೂ ಜಾರಿ ಮಾಡಿದರೆ ಸ್ಥಳೀಯ ಆರ್ಥಿಕ ಮೇಲೆ ವ್ಯತಿರಿಕ್ತ ಪರಿಣಾಮ ಬೀಳಲಿದೆ ಎನ್ನುತ್ತಾರೆ ಮಾರ್ ತೋಮ ಚರ್ಚ್‌ನ ಮಾರ್ಟಿನ್.

ಸರ್ಕಾರ ರಾತ್ರಿ ಕರ್ಫ್ಯೂ ಜಾರಿ ಮಾಡಿರುವುದು ಆರೋಗ್ಯದ ದೃಷ್ಟಿಯಿಂದ ಸರಿ. ಆದರೆ, ಬೇಗ ಕೊಳೆಯುವ ತರಕಾರಿ ಮತ್ತಿತರ ವಸ್ತುಗಳನ್ನು ಸಾಗಿಸಲು ಸರಿಯಾದ ಮಾರ್ಗ ಸೂಚಿಗಳನ್ನು ನೀಡಬೇಕು ಎನ್ನುತ್ತಾರೆ ಬಿತ್ತನೆಬೀಜ ವ್ಯಾಪಾರಿ ಅಂಕೋನಹಳ್ಳಿ ಎ.ಎಂ.ಪ್ರಕಾಶ್.

ಶೇ80ರಷ್ಟು ಜನ ರಾತ್ರಿ 7ಗಂಟೆಗೆ ಕೆಲಸ ಕಾರ್ಯ ಮುಗಿಸಿ ಮನೆಗಳಿಗೆ ತಲುಪುವುದರಿಂದ ರಾತ್ರಿ ಕರ್ಫ್ಯೂ ಜಾರಿಯಿಂದ ಹೆಚ್ಚು ಪ್ರಯೋಜನವಿಲ್ಲ. ಮುಖ್ಯವಾಗಿ ಮದುವೆ ಹಾಗೂ ಹೆಚ್ಚಿನ ಜನ ಸೇರುವಂತಹ ಕಾರ್ಯಕ್ರಮ ರದ್ದುಪಡಿಸಬೇಕು. ಸಾರ್ವಜನಿಕರು ಅನವಶ್ಯಕವಾಗಿ ಸಂಬಂಧಿಕರ ಮನೆಗಳಿಗೆ, ಪ್ರವಾಸಕ್ಕೆ, ವಿಕೇಂಡ್ ಕಾರ್ಯಕ್ರಮಗಳಿಗೆ ಹೋಗುವುದಕ್ಕೆ ಕಡಿವಾಣ ಬೀಳಬೇಕು. ಮಾಸ್ಕ್ ಬಳಕೆ, ಪರಸ್ಪರ ಅಂತರ ಪಾಲನೆ ಮಾಡಿಕೊಂಡು ಕೊರೊನಾ ವೈರಸ್ ಹರಡುವುದನ್ನು ತಡೆಯಬೇಕು ಎನ್ನುತ್ತಾರೆ  ಡಾ.ರಂಗನಾಥ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು