ಗುರುವಾರ , ಮೇ 6, 2021
23 °C

ಆಕ್ಸಿಜನ್ ಸಮಸ್ಯೆಯಿಲ್ಲ: ಡಿಎಚ್ಓ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ತಾಲ್ಲೂಕಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಕೊರತೆಯಿದೆ ಎಂದು ಖಾಸಗಿ ಆಸ್ಪತ್ರೆಗಳು ಆರೋಪ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಶ್ರೀನಿವಾಸ್‌ ತಾಲ್ಲೂಕಿನ ಚಂದಾಪುರದ ಅತ್ರೇಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಡಾ.ಶ್ರೀನಿವಾಸ್‌ ಮಾತನಾಡಿ, ಜಿಲ್ಲೆಯಲ್ಲಿ ಕೊರೊನಾ ಸೋಂಕನ್ನು ಸಮರ್ಥವಾಗಿ ನಿಭಾಯಿಸಲು ಆರೋಗ್ಯ ಇಲಾಖೆ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ರೋಗಿಗಳಿಗೆ ಆಕ್ಸಿಜನ್ ಅತ್ಯಂತ ಅವಶ್ಯಕ. ಹಾಗಾಗಿ ಆಕ್ಸಿಜನ್‌ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಚಂದಾಪುರ ಸುತ್ತಮುತ್ತಲ ಕೆಲವು ಖಾಸಗಿ ಆಸ್ಪತ್ರೆಗಳು ಆಕ್ಸಿಜನ್‌ಗಾಗಿ ತಮಿಳುನಾಡಿನ ಹೊಸೂರನ್ನು ಅವಲಂಬಿಸಿದ್ದರು. ಅಲ್ಲಿ ಕೊರತೆ ಉಂಟಾಗಿರುಬಹುದು. ಆದರೆ ಪೀಣ್ಯದಿಂದ ಅವಶ್ಯಕವಿರುವ ಪ್ರಮಾಣಕ್ಕಿಂತ ಹೆಚ್ಚು ಆಕ್ಸಿಜನ್‌ ಪೂರೈಕೆ ಮಾಡಲು ಕಂಪನಿ ಸಿದ್ಧವಾಗಿದೆ ಎಂದರು.

‘ಖಾಸಗಿ ಆಸ್ಪತ್ರೆಗಳು ಕೊರೊನಾ ಸೋಂಕಿನ ಸಂದರ್ಭದಲ್ಲಿ ಆಕ್ಸಿಜನ್‌ ಕೃತಕ ಅಭಾವ ಸೃಷ್ಟಿ ಮಾಡಿ ಜನರನ್ನು ಆತಂಕಕ್ಕೆ ದೂಡಬಾರದು. ಸರ್ಕಾರ ಆಕ್ಸಿಜನ್‌ ಪೂರೈಕೆಗಾಗಿ ವಾರ್‌ರೂಮ್‌ ಸ್ಥಾಪಿಸಿದೆ. ಯಾವುದೇ ಸಮಸ್ಯೆಯಿಲ್ಲದೇ ಪೂರೈಕೆ ಮಾಡಲು ಎಲ್ಲಾ ವ್ಯವಸ್ಥೆಯಿದೆ. ಜಿಗಣಿ ಕೈಗಾರಿಕ ಪ್ರದೇಶದಿಂದ ಆಕ್ಸಿಜನ್‌ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಕೊರತೆಯಾಗದಂತೆ ಆಕ್ಸಿಜನ್‌ ಪೂರೈಸಲಾಗುವುದು’ ಎಂದರು.

ಆನೇಕಲ್‌ ತಾಲ್ಲೂಕಿನಲ್ಲಿ ರೋಗಿಗಳಿಗೆ ಹಾಸಿಗೆಗಳ ಸಮಸ್ಯೆ ಉಂಟಾಗದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಾರಾಯಣ ಹೃದಯಾಲಯ ಮಂಗಳವಾರ 50 ಬೆಡ್‌ ನೀಡಿದೆ. ಬುಧವಾರದಿಂದ 200 ಬೆಡ್‌ ಮೀಸಲಿಡಲು ಒಪ್ಪಿಕೊಂಡಿದೆ. ಅತ್ತಿಬೆಲೆ ಆಕ್ಸ್‌ಫರ್ಡ್‌ ಮೆಡಿಕಲ್ ಕಾಲೇಜಿನಲ್ಲಿ 100 ಹಾಸಿಗಳು ಲಭ್ಯವಿದೆ. ಇತರೆ ಖಾಸಗಿ ಆಸ್ಪತ್ರೆಗಳಲ್ಲಿ 150 ಬೆಡ್‌ಗಳು ಲಭ್ಯವಿದೆ. ಹಾಗಾಗಿ ಅಗತ್ಯವಿರುವವರಿಗೆ ಹಾಸಿಗೆಗಳ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು. ಸೌಲಭ್ಯವಿರುವವರನ್ನು ಹೋಮ್‌ ಐಸೋಲೇಷನ್‌ಗೆ ಒಳಪಡಿಸಿ ಸೂಕ್ತ ಚಿಕಿತ್ಸೆ ಮತ್ತು ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಸಂಕಷ್ಟದ ಸಮಯದಲ್ಲಿ ಸರ್ಕಾರದೊಂದಿಗೆ ಸಾರ್ವಜನಿಕರು ಸಹಕರಿಸಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

ಡಿಎಸ್‌ಪಿ ಡಾ.ಮನೋಹರ್‌, ತಾಲ್ಲೂಕು ವೈದ್ಯಾಧಿಕಾರಿ ಡಾ.ವಿನಯ್‌ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು