ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ: ಸಚಿವ ಎಂ.ಟಿ.ಬಿ ನಾಗರಾಜ್‌

ಮೇಲುಸೇತುವೆ ಕಾಮಗಾರಿ
Last Updated 15 ಜುಲೈ 2021, 3:51 IST
ಅಕ್ಷರ ಗಾತ್ರ

ಹೊಸಕೋಟೆ: ‘ಕಳೆದ 40 ವರ್ಷಗಳಿಂದ ತಾಲ್ಲೂಕಿನಲ್ಲಿ ಆಗದಷ್ಟು ಅಭಿವೃದ್ಧಿ ಕಾರ್ಯಗಳು ಈಗ ಆಗುತ್ತಿವೆ. ಅಭಿವೃದ್ಧಿ ವಿಚಾರದಲ್ಲಿ ಯಾರೊಬ್ಬರೂ ರಾಜಕೀಯ ಬೆರೆಸಬಾರದು’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ ನಾಗರಾಜ್ ಹೇಳಿದರು.

ತಾಲ್ಲೂಕಿನ ಮುತ್ಸಂದ್ರ ಗ್ರಾಮ ಪಂಚಾಯಿತಿಯ ಹಾರೋಹಳ್ಳಿ ಮೇಲುಸೇತುವೆ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು.

ವರ್ತೂರಿನಿಂದ ಹೊಸೂರಿಗೆ ಹೋಗುವ ಬೆಂಗಳೂರಿನ ನೀರಿನ ಕಾಲುವೆಗೆ ಮೇಲುಸೇತುವೆ ನಿರ್ಮಿಸಲಾಗುತ್ತಿದೆ. ಇದರಿಂದ ಈ ಭಾಗದ ಜನತೆಯು ಬೆಂಗಳೂರಿನ ವೈಟ್‌ಫೀಲ್ಡ್ ಸೇರಿದಂತೆ ಇತರೇ ಪ್ರದೇಶಗಳಿಗೆ ಹೋಗಲು ಅನುಕೂಲವಾಗುತ್ತದೆ. ಸುಮಾರು ಆರು ಕಿಲೋಮೀಟರ್‌ನಷ್ಟು ದೂರ ಕಡಿಮೆಯಾಗುತ್ತದೆ ಎಂದು ಹೇಳಿದರು.

ಸಂಸದ ಬಚ್ಚೇಗೌಡ ಅವರು ಶಾಸಕರಾಗಿದ್ದಾಗ ಈ ಸೇತುವೆ ನಿರ್ಮಾಣಕ್ಕೆ ಮೂರು ಬಾರಿ ಗುದ್ದಲಿಪೂಜೆ ಮಾಡಿದ್ದರೂ ಕಾಮಗಾರಿ ಪ್ರಾರಂಭಿಸಿರಲಿಲ್ಲ. ತಾವು 2015ರಲ್ಲಿ ಶಾಸಕರಾದಾಗ ಸರ್ಕಾರದಿಂದ ₹ 4 ಕೋಟಿ ಅನುದಾನ ತಂದು ಕಾಮಗಾರಿ ಪ್ರಾರಂಭಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಯಾಗುತ್ತದೆ. ಇದರಿಂದ ಈ ಭಾಗದ ರೈತರಿಗೂ ಹೆಚ್ಚಿನ ಅನುಕೂಲವಾಗಲಿದೆ ಎಂದು
ಹೇಳಿದರು.

ಸೇತುವೆ ಪಕ್ಕದಲ್ಲಿರುವ ಜಮೀನಿನ ಮಾಲೀಕರು ರಸ್ತೆ ಮಾಡಲು ರಾಜಕೀಯವಾಗಿ ಅಡ್ಡಿಪಡಿಸುತ್ತಿದ್ದಾರೆ. ಈ ಸಮಸ್ಯೆ ಶೀಘ್ರವೇ ಪರಿಹಾರವಾಗಲಿದೆ. ಜನರಿಗೆ ಅವಶ್ಯವಾಗಿರುವ ಕೆಲಸ ಮಾಡುವಾಗ ವಿರೋಧ ಪಕ್ಷದವರು ರಾಜಕೀಯ ಕಾರಣಗಳಿಗಾಗಿ ಅಡ್ಡಿಪಡಿಸುವುದು ಸರಿಯಲ್ಲ ಎಂದುಹೇಳಿದರು.

ತಾಲ್ಲೂಕಿನಲ್ಲಿ ಎಲ್ಲಾ ಅಭಿವೃದ್ಧಿ ಕಾಮಗಾರಿಗಳು ತಮ್ಮ ಅವಧಿಯಲ್ಲಿಯೇ ನಡೆದಿದೆ ಎಂಬಂತೆ ಬಿಂಬಿಸುವ ವಿರೋಧ ಪಕ್ಷದವರು ಇಂತಹ ಜನೋಪಕಾರಿ ಕಾಮಗಾರಿಗಳನ್ನು ಏಕೆ ಮಾಡಿಸಲಿಲ್ಲ ಎಂದು ಪ್ರಶ್ನಿಸಿದರು.

ಈ ಮೇಲುಸೇತುವೆ ನಿರ್ಮಾಣವಾದರೆ ಚಿಕ್ಕತಿರುಪತಿ ಮತ್ತು ಹೊಸೂರಿಗೆ ಹೋಗಲು ಹಾಗೂ ತಮ್ಮ ಗ್ರಾಮದೇವತೆ ಹೊನ್ನಮ್ಮ ಚೆನ್ನಮ್ಮ ದೇವರಿಗೆ ಪೂಜೆ ಸಲ್ಲಿಸಲು ಅನುಕೂಲವಾಗುತ್ತದೆ ಎಂದು ಸ್ಥಳೀಯರು ಹರ್ಷ ವ್ಯಕ್ತಪಡಿಸಿದರು.

ಮುಖಂಡರಾದ ಬಾಬುರೆಡ್ಡಿ, ಶಂಕರೇಗೌಡ, ವಿನೋದ್ ರೆಡ್ಡಿ, ಕುಮಾರ ಕಂಠೀರವ, ಮುರಳಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT