ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ‘ಜೈವಿಕ ಅನಿಲ ಸ್ಥಾವರಕ್ಕೆ ನರೇಗಾ ಹಣ’

ಹಾರೋಹಳ್ಳಿಯಲ್ಲಿ ಮಾದರಿ ಘಟಕ ಉದ್ಘಾಟನೆ
Last Updated 14 ಸೆಪ್ಟೆಂಬರ್ 2020, 8:07 IST
ಅಕ್ಷರ ಗಾತ್ರ

ವಿಜಯಪುರ: ‘ಅಡುಗೆ ಮನೆ ತ್ಯಾಜ್ಯವನ್ನು ಉಪಯೋಗ ಮಾಡಿಕೊಂಡು ನಿರ್ಮಿಸುವ ಜೈವಿಕ ಅನಿಲ ಸ್ಥಾವರ ನಿರ್ಮಾಣಕ್ಕೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಹಣ ಸಿಗಲಿದೆ’ ಎಂದು ಬೆಂಗಳೂರು ಕೃಷಿವಿಶ್ವವಿದ್ಯಾಲಯ (ಜಿಕೆವಿಕೆ), ಡೀನ್ ಡಾ.ಸಾವಿತ್ರಮ್ಮ ಹೇಳಿದರು.

ಹೋಬಳಿಯ ಹಾರೋಹಳ್ಳಿಯ ಗ್ರಾಮ ಪಂಚಾಯಿತಿ ಸದಸ್ಯ ಮುನಿರಾಜು ಅವರ ಮನೆಯ ಬಳಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಭಾರತ ಸರ್ಕಾರದ ನವೀಕರಿಸುವ ಇಂಧನ ಸಚಿವಾಲಯದ ಸಹಯೋಗದಲ್ಲಿ ನಿರ್ಮಾಣ ಮಾಡಿರುವ ಜೈವಿಕ ಅನಿಲಸ್ಥಾವರ ಉದ್ಘಾಟಿಸಿ ಅವರು ಮಾತನಾಡಿದರು.

‘ಜೈವಿಕ ಅನಿಲ ಸ್ಥಾವರಗಳಿಗೆ ನರೇಗಾ ಸಾಥ್‌ ನೀಡುವ ಮೂಲಕ ಜನರಿಗೆ ಇದರತ್ತ ಆಸಕ್ತಿ ಬೆಳೆಸಿ ಹೆಚ್ಚು ನಿರ್ಮಾಣಕ್ಕೆ ಪ್ರೋತ್ಸಾಹ ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಮುಂದಾಗಿದೆ. ಅಡುಗೆ ಮನೆಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯ, ಬೇಯಿಸಿದ ಅಥವಾ ಬೆಂದಿರದ ಹಳಸಿದ ಪದಾರ್ಥ, ಸಾರ ತೆಗೆದ ಟೀ ಪುಡಿ, ಹಾಳಾಗಿರುವ ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ಜೈವಿಕ ಅನಿಲ ಉತ್ಪಾದಿಸಬಹುದಾಗಿದೆ. ಇದೊಂದು ಪರಿಸರಸ್ನೇಹಿ ಅನಿಲ ಉತ್ಪಾದನೆ ವಿಧಾನವಾಗಿದೆ’ ಎಂದರು.

‘ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಇಂಧನ ಕೊರತೆಯನ್ನು ನೀಗಿಸಲು ಸರ್ಕಾರ ಬಯೋಗ್ಯಾಸ್‌, ಜೈವಿಕ ಅನಿಲ ಸ್ಥಾವರ ಯೋಜನೆಗಳತ್ತ ಜನರನ್ನು ಆಕರ್ಷಣೆ ಮಾಡಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ನರೇಗಾ ಯೋಜನೆಯಲ್ಲಿ ಇದರ ನಿರ್ಮಾಣಕ್ಕೆ ಹಣಕಾಸು ಸಹಾಯ ನೀಡುವ ಮೂಲಕ ಜನರನ್ನು ಇದರತ್ತ ಸೆಳೆಯುತ್ತಿದೆ’ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಮುನಿರಾಜು ಮಾತನಾಡಿ, ‘ನೀರು, ಇಂಧನ ಕೊರತೆ ಜಗತ್ತಿನಲ್ಲಿ ಪ್ರಮುಖವಾಗಿ ಕಾಡುತ್ತಿರುವ ಸಮಸ್ಯೆಯಾಗಿದೆ. ಇವು ಮಾನವರೇ ಸೃಷ್ಟಿಸಿಕೊಂಡ ಸಮಸ್ಯೆಗಳು. ಪ್ರಸ್ತುತ, ತ್ಯಾಜ್ಯ ನಿರ್ವಹಣೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಆದರೆ, ಅದನ್ನು ಸಮರ್ಪಕವಾಗಿ ವಿಲೇವಾರಿ ಮೂಡುವ ಮೂಲಕ ಸಂಪನ್ಮೂಲವನ್ನಾಗಿ ಬಳಕೆ ಮಾಡಬಹುದಾಗಿದೆ. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಇರುವ ಒಂದೇ ದಾರಿ ಜೈವಿಕ ಅನಿಲ ಸ್ಥಾವರ ಅಳವಡಿಸಿಕೊಳ್ಳುವುದು. ಇದರ ನಿರ್ಮಾಣಕ್ಕೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ ಜಾಗೃತಿ ಮೂಡಿಸುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರೋತ್ಸಾಹಧನ ನೀಡುತ್ತಿದೆ’ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ವಿಜ್ಞಾನಿಗಳಾದ ಡಾ.ಮಂಜುನಾಥ್ ಗೌಡ, ಡಾ.ವೆಂಕಟೇಶಮೂರ್ತಿ, ಡಾ.ವಿ.ಕುಮಾರಗೌಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೌಮ್ಯ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಮಾಲಾ, ವರಲಕ್ಷ್ಮಮ್ಮ, ಮುಖಂಡರಾದ ಭೈರೇಗೌಡ, ಚನ್ನರಾಯಪ್ಪ, ಶ್ರೀರಾಮರೆಡ್ಡಿ, ವೆಂಕಟೇಶ್, ಪವನ್ ಕುಮಾರ್, ಧರ್ಮಪಾಲಪ್ಪ, ವೈ.ನಾರಾಯಣಪ್ಪ, ಮಂಜಣ್ಣ,ರಾಜು.ಎಚ್.ಎಂ, ಕರವಸೂಲಿಗಾರ ಕೃಷ್ಣಪ್ಪ, ಕಂಪ್ಯೂಟರ್ ಆಪರೇಟರ್ ನಿರ್ಮಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT