ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ನ್ಯಾಯಾಲಯಕ್ಕೆ ಮೊರೆ; ಉಚ್ಛಾಟನೆಗೆ ಒತ್ತಾಯ

ಪುರಸಭೆ ಚುನಾವಣೆ ತಡೆಗೆ ಕಾರಣಕರ್ತರನ್ನು ಪಕ್ಷದಿಂದ ಹೊರಗೆ ಹಾಕಲು ಆಗ್ರಹ
Last Updated 2 ಏಪ್ರಿಲ್ 2021, 6:29 IST
ಅಕ್ಷರ ಗಾತ್ರ

ವಿಜಯಪುರ: ಪುರಸಭೆ ಚುನಾವಣೆ ನಿಗದಿಯಾದ ನಂತರ ಕ್ಯಾಟಗರಿ ವಿಚಾರದಲ್ಲಿ ಪುನಃ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ನೀಡುವಂತೆ ಅರ್ಜಿ ಸಲ್ಲಿಸಿರುವವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಸ್ಥಳೀಯವಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ಶತಮಾನ ಕಂಡ ಪುರಸಭೆಗೆ ಸತತವಾಗಿ 8 ವರ್ಷಗಳಿಂದ ಚುನಾವಣೆ ನಡೆಯದೇ ಜನರು ಹೈರಾಣಾಗಿದ್ದಾರೆ. ಪಟ್ಟಣ ಅಭಿವೃದ್ಧಿಯಿಂದ ಹಿಂದುಳಿದಿದೆ. ಈಗ ಚುನಾವಣಾ ಆಯೋಗ ಏ.27 ಕ್ಕೆ ಚುನಾವಣೆ ನಿಗದಿಪಡಿಸಿದೆ. ಆದರೆ ನ್ಯಾಯಾಲಯದಿಂದ ತಡೆಯಾಜ್ಞೆ ತರಲು ಸಾಕಷ್ಟು ಮಂದಿ ಹೋಗುತ್ತಿದ್ದಾರೆ. ಇವರು ನಮಗೆ ಬೇಡ’ ಎಂದು ಪಕ್ಷಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖಂಡ ನಾರಾಯಣಸ್ವಾಮಿ ಮಾತನಾಡಿ, ‘ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗುತ್ತಿದೆ. ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿವೆ. ಹಿಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಜನಪ್ರತಿನಿಧಿಗಳು, ಅಭಿವೃದ್ಧಿಯ ಕಡೆಗೆ ಗಮನಹರಿಸುವುದನ್ನು ಬಿಟ್ಟು ತಮ್ಮ ಸ್ವಾರ್ಥಕ್ಕಾಗಿ ಕ್ಯಾಟಗರಿ ವಿಚಾರವಾಗಿ ನ್ಯಾಯಾಲಯದಲ್ಲಿ ಕೇಸು ದಾಖಲಿಸಿ, ಪುರಸಭೆಯ ಪೂರ್ಣ ಅವಧಿಯನ್ನು ಸದುಪಯೋಗ ಮಾಡಿಕೊಳ್ಳದ ಕಾರಣ ಪಟ್ಟಣ ಅಭಿವೃದ್ಧಿಯಿಂದ ಹಿಂದುಳಿದಿದೆ. ಪುನಃ ಈಗ ಚುನಾವಣೆ ನಡೆದು ಜನಪ್ರತಿನಿಧಿಗಳು ಆಯ್ಕೆಯಾದರೆ, ಸರ್ಕಾರದಿಂದ ಒಂದಷ್ಟು ಅನುದಾನಗಳನ್ನು ತಂದು ಅಭಿವೃದ್ಧಿಗೆ ಶ್ರಮಿಸುತ್ತಾರೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದ ಜನರಿಗೆ ಮತ್ತೊಮ್ಮೆ ನಿರಾಸೆಯಾಗುತ್ತಿದೆ. ಈಚೆಗೆ ಬಿಡುಗಡೆ
ಯಾಗಿರುವ ಮೀಸಲಾತಿ ಪಟ್ಟಿಯಲ್ಲಿ ಕೆಲವು ವಾರ್ಡುಗಳಲ್ಲಿ ಮೀಸಲಾತಿ ಬದಲಾವಣೆ ಮಾಡಬೇಕು ಎಂದು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿರುವುದನ್ನು ಜನರು ವಿರೋಧಿಸುತ್ತಿದ್ದಾರೆ’ ಎಂದರು.

ಮುಖಂಡ ಮಂಜುನಾಥ್ ಮಾತನಾಡಿ, ‘ಯಾರೇ ಮುಖಂಡರಾಗಲಿ ತಮ್ಮ ಸ್ವಾರ್ಥಕ್ಕಾಗಿ ಪಟ್ಟಣದ ಜನರು ಹಿತ ಬಲಿಕೊಡುವಂತಹ ಕೆಲಸವಾಗಬಾರದು. ಮೊದಲು ಊರಿನ ಜನರ ಹಿತ ಹಾಗೂ ಅಭಿವೃದ್ಧಿ ಮುಖ್ಯವೇ ಹೊರತು, ವೈಯಕ್ತಿಕ ವಿಚಾರಗಳಲ್ಲ, ಕೆಲವು ಮುಖಂಡರ ಮೇಲಿನ ವೈಯಕ್ತಿಕ ದ್ವೇಷಕ್ಕಾಗಿ ಚುನಾವಣೆ ನಡೆಯಬಾರದು ಎಂದು ಈ ರೀತಿಯಾಗಿ ನಡೆದುಕೊಳ್ಳುವುದನ್ನು ನಾವು ಖಂಡಿಸುತ್ತೇವೆ. ಜನರೂ ಇಂತಹ ವ್ಯಕ್ತಿಗಳನ್ನು ಚುನಾವಣೆಯಲ್ಲಿ ಆಯ್ಕೆ ಮಾಡಬಾರದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ರಾಮಚಂದ್ರಪ್ಪ ಮಾತನಾಡಿ, ‘ಈಗಾಗಲೇ ಪುರಸಭೆಯಲ್ಲಿ ಜನಪ್ರತಿನಿಧಿಗಳಿಲ್ಲದೆ ಸಾಕಷ್ಟು ಅಭಿವೃದ್ಧಿಯಿಂದ ಹಿಂದುಳಿದಿದೆ. ಪುನಃ ಕ್ಯಾಟಗರಿ ವಿಚಾರದಲ್ಲಿ ನ್ಯಾಯಾಲಯಕ್ಕೆ ಹೋಗಿ
ರುವುದು ಸರಿಯಲ್ಲ, ಈ ಪಕ್ಷಕ್ಕೂ ಹಿನ್ನಡೆಯಾಗಲಿದೆ ಎನ್ನುವ ವಿಚಾರ ಪಕ್ಷದ ನಾಯಕರ ಗಮನಕ್ಕೆ ತರುವಂತಹ ಕೆಲಸ ಮಾಡುತ್ತೇವೆ’ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಬಿ.ಚೇತನ್ ಗೌಡ ಮಾತನಾಡಿ, ‘ಅಭಿವೃದ್ಧಿ ಕಡೆಗೆ ಗಮನಹರಿಸಬೇಕಾದ ಮುಖಂಡರು, ಪದೇ ಪದೇ ಈ ರೀತಿ ನ್ಯಾಯಾಲಯದ ಮೊರೆ ಹೋಗುತ್ತಿರುವುದು ಸರಿಯಲ್ಲ, ಅವರು ನ್ಯಾಯಾಲಯಕ್ಕೆ ಹೋಗಿರುವ ವಿಚಾರಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ, ಪಕ್ಷಕ್ಕೆ ಸಂಬಂಧಪಟ್ಟಿದ್ದಾಗಿದ್ದರೆ ಪಕ್ಷದ ಮುಖಂಡರೊಂದಿಗೆ ಚರ್ಚೆ ನಡೆಸಬೇಕಾಗಿತ್ತು. ಅವರು ಹಾಗೇ ಮಾಡಿಲ್ಲ. ಪಕ್ಷಕ್ಕೂ ಅವರಿಗೂ ಸಂಬಂಧವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT