ಸೋಮವಾರ, ನವೆಂಬರ್ 28, 2022
20 °C
1996ರಿಂದಲೂ ಸಮಾಜ ಸೇವೆ: 19 ಸಾವಿರ ನೇತ್ರ ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಂಡ ಹಿರಿಮೆ

ಕಣ್ಣಿನ ಚಿಕಿತ್ಸಕನಿಗೆ ಒಲಿದ ರಾಜ್ಯೋತ್ಸವ ಗರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಸೋಂಪುರ ಹೋಬಳಿಯ ನರಸೀಪುರದ ಬುಗಡೀಹಳ್ಳಿಯ ಸಿ. ಕರಿಯಪ್ಪ ಅವರಿಗೆ ಸಮಾಜ ಸೇವೆ ವಿಭಾಗದಲ್ಲಿ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ನೇತ್ರ ಪರೀಕ್ಷಕರಾದ ಕರಿಯಪ್ಪ 1996ರಿಂದಲೂ ಕಣ್ಣಿನ ತಪಾಸಣಾ ಶಿಬಿರ ನಡೆಸಿಕೊಂಡು ಬರುತ್ತಿದ್ದಾರೆ. ಜತೆಗೆ, ಕಣ್ಣಿನ ಪೊರೆ ಸಮಸ್ಯೆ ಇರುವ ಅನೇಕರಿಗೆ ಉಚಿತವಾಗಿ ಆಪರೇಷನ್ ಮಾಡಿಸಿದ್ದಾರೆ. ದೃಷ್ಟಿ ಸಮಸ್ಯೆ ಇರುವವರಿಗೆ ಕನ್ನಡಕ ವಿತರಿಸಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ಕೊಟ್ಟಿದ್ದಾರೆ.

ಬುಡಕಟ್ಟು ಸಮುದಾಯಕ್ಕೆ ಸೇರಿದ ಇರುವ ಹಲವು ಏಳುಬೀಳು ಕಂಡವರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿಯೂ ಗುರುತಿಸಿಕೊಂಡಿದ್ದ ಅವರು, ಸಾಮಾಜಿಕ ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ವ್ಯಕ್ತಿಯೊಬ್ಬರು ಕಣ್ಣಿನ ಪೊರೆ ಬಂದು ನಡೆದಾಡಲು ಸಾಧ್ಯವಾಗದೆ ಪರಿತಪಿಸುತ್ತಿದ್ದ ವೇಳೆ ಸ್ವಯಂ ಪ್ರೇರಣೆಯಿಂದ ಅವರನ್ನು ಕರೆದೊಯ್ದು ಶಸ್ತ್ರಚಿಕಿತ್ಸೆ ಮಾಡಿಸುವ ಮೂಲಕ ಸೇವಾ ಕ್ಷೇತ್ರಕ್ಕೆ ತೆರೆದುಕೊಂಡವರು.

ಅವರು ಜನಿಸಿದ್ದು 1962ರಲ್ಲಿ. 1986ರಲ್ಲಿ ಕಣ್ಣಿನ ಪರೀಕ್ಷೆ ವಿಭಾಗದಲ್ಲಿ ಡಿಪ್ಲೊಮಾ ಕೋರ್ಸ್ ಅಧ್ಯಯನ ಮಾಡಿದರು. ಚಾಮರಾಜನಗರದ ಬಿಳಿಗಿರಿರಂಗನ ಬೆಟ್ಟದ ಗಿರಿಜನ ಕಲ್ಯಾಣ ಸಂಸ್ಥೆಯಲ್ಲಿ ಸೇವಾ ಕಾರ್ಯ ಆರಂಭಿಸಿದರು. 1991ರಲ್ಲಿ ನೇತ್ರ ಪರೀಕ್ಷಕರಾಗಿ ಆರೋಗ್ಯ ಇಲಾಖೆಗೆ ಸೇರ್ಪಡೆಗೊಂಡರು. ಸುದೀರ್ಘ ಸೇವೆಯ ಬಳಿಕ ಕಳೆದ ಜೂನ್‌ನಲ್ಲಿ ನಿವೃತ್ತಿ ಹೊಂದಿದ್ದಾರೆ.

ಸ್ವಗ್ರಾಮವಾದ ನರಸೀಪುರ ಗ್ರಾಮ ವಿಕಾಸ ಸ್ವಯಂ ಸೇವಾ ಸಂಸ್ಥೆಯೊಂದಿಗೆ 1989ರಿಂದಲೂ ನಿರಂತರವಾಗಿ ವರ್ಷಕ್ಕೆ 2 ರಿಂದ 3 ಬಾರಿ ಉಚಿತ ಕಣ್ಣಿನ ತಪಾಸಣೆ ಮತ್ತು ಆರೋಗ್ಯ ಶಿಬಿರ ನಡೆಸುತ್ತಾ ಬರುತ್ತಿದ್ದಾರೆ. ಕೋಣನಕುಂಟೆ, ತಾವರೆಕೆರೆ, ನಾಗದೇವನಹಳ್ಳಿ ಸೇರಿದಂತೆ ಹಲವೆಡೆ ವಾರಕ್ಕೆ ಒಮ್ಮೆ ನೇತ್ರ ತಪಾಸಣೆ ಶಿಬಿರಗಳನ್ನು ವಿಠಲ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ನಡೆಸುತ್ತಿದ್ದಾರೆ. ಹಲವರಿಗೆ ಲೇಸರ್‌ ಥೆರಪಿ ಕೂಡ ಮಾಡಿಸಿದ್ದಾರೆ.

ಈವರೆಗೆ 15 ಸಾವಿರ ಕನ್ನಡಕಗಳ ವಿತರಣೆ, 19 ಸಾವಿರ ಕಣ್ಣಿನ ಶಸ್ತ್ರಚಿಕಿತ್ಸೆಗಳಲ್ಲಿ ಪಾಲ್ಗೊಂಡಿರುವುದಾಗಿ ಹೇಳುವ ಕರಿಯಪ್ಪ, ನಿರಂತರವಾಗಿ ಸೇವಾ ಕಾರ್ಯದಲ್ಲಿ ತೊಡಗಿದ್ದಾರೆ.

‘ಪ್ರಶಸ್ತಿಯ ನಿರೀಕ್ಷೆ ಇರಲಿಲ್ಲ. ಯಾವುದೇ ಅರ್ಜಿ ಕೂಡ ಸಲ್ಲಿಕೆ ಮಾಡಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕೆಲಸ ಮಾಡುವವರನ್ನು ಹುಡುಕಿ ಪ್ರಶಸ್ತಿ ನೀಡುತ್ತಿರುವುದು ಸಂತಸ ತಂದಿದೆ’ ಎನ್ನುತ್ತಾರೆ ಅವರು.

ಕರಿಯಲ್ಲ ಅವರ ಸಾಧನೆಗೆ ಹಲವು ಸಂಘ–ಸಂಸ್ಥೆಗಳು ಮೆಚ್ಚುಗೆ ವ್ಯಕ್ತಪಡಿಸಿ, ಪುರಸ್ಕಾರಗಳನ್ನು ನೀಡಿರುವುದು ವಿಶೇಷ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು