ಸೋಮವಾರ, ಜನವರಿ 27, 2020
27 °C
18 ಜೋಡಿ ಹಳ್ಳಿಕಾರ್ ಎತ್ತುಗಳ ಪೋಷಣೆಯಲ್ಲಿ ರೈತ, ಸಂತಸ ಸಂತೃಪ್ತಿಯ ಭಾವ

ಎತ್ತು ಮತ್ತು ರೈತನ ನಂಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಮೂರು ದಶಕಗಳ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಹಳ್ಳಿಕಾರ್ ತಳಿಯ ಎತ್ತುಗಳು ಹೊಂದಿರುವ ರೈತರನ್ನು ಶ್ರೀಮಂತರು ಎಂದೇ  ಗುರುತಿಸಲಾಗುತ್ತಿತ್ತು.

ಎತ್ತುಗಳು ಮನೆಯಲ್ಲಿದ್ದರೆ ಅಂತಹ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ. ಮನೆ ಮುಂದೆ ಕಟ್ಟಿದರೆ ಮನೆಗೆ ಶುಭವಾತ್ತದೆ. ಅದರ ಸಗಣಿಯಿಂದ ಮನೆ ಸಾರಿಸಿದರೆ ಕ್ರಿಮಿಗಳು ನಾಶವಾಗಿ ಸಾಯುತ್ತವೆ. ಅದರ ಗೊಬ್ಬರ ಮತ್ತು ಗಂಜಲ ಭೂ ಫಲವತ್ತತೆ ಹೆಚ್ಚಿಸಿ, ಉತ್ತಮ ಇಳುವರಿಯ ಬೆಳೆ ಬೆಳೆಯುತ್ತವೆ ಎಂಬ ನಂಬಿಕೆ ರೈತರಲ್ಲಿ ಬಲವಾಗಿತ್ತು.

ಇಂದು ಮಾಹಿತಿ ತಂತ್ರಜ್ಞಾನ ಬೆಳೆದು, ಕೃಷಿ ಕ್ಷೇತ್ರಕ್ಕೆ ಯಂತ್ರೋಪಕರಣ ಬಂದು ರೈತನ ಮಿತ್ರನಂತಿದ್ದ ಎತ್ತುಗಳಿಗೆ ಕೆಲಸವಿಲ್ಲದಂತೆ ಆಗಿದೆ. ಆದರೆ ಮೂಲ ನಂಬಿಕೆಯನ್ನು ಉಳಿಸಿಕೊಳ್ಳುವ ಸಲುವಾಗಿ ಕೆಲ ರೈತರು ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಎತ್ತುಗಳನ್ನು ಸಾಕುತ್ತಿರುವುದೂ ಇದೆ.

ಅಂತೆಯೇ ಇಲ್ಲಿನ ಚಿಕ್ಕಬಳ್ಳಾಪುರ ರಸ್ತೆಯಲ್ಲಿನ ಕೆರೆಕೋಡಿ ಬಳಿಯಿರುವ ರೈತ ನಾರಾಯಣಪ್ಪ 18 ಜೋಡಿ ಎತ್ತುಗಳನ್ನು ಸಾಕುವ ಮೂಲಕ ತನ್ನಲ್ಲಿರುವ ಎತ್ತುಗಳ ಪ್ರೀತಿಯನ್ನು ಪ್ರಸ್ತುತಪಡಿಸುತ್ತಿದ್ದಾರೆ.

‘ಎತ್ತು ಇಲ್ಲದವನಿಗೆ ಎದೆ ಇಲ್ಲ ಎಂಬ ಗಾದೆ ಮಾತಿನಂತೆ ಎತ್ತುಗಳ ಜೊತೆಯಲ್ಲೇ ನಮ್ಮ ತಾತ ಮುತ್ತಾಂದಿರ ಕಾಲದಿಂದಲೂ ಜೀವನ ನಡೆದು ಬಂದಿದೆ. ಅದನ್ನು ನಾನು, ನನ್ನ ಮಕ್ಕಳು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ’ ಎಂದು ನಾರಾಯಣಪ್ಪ ಅಭಿಪ್ರಾಯಪಡುತ್ತಾರೆ.

ಎತ್ತುಗಳಿಗೆ ರವೆ ಗಂಜಿ, ಬೆಣ್ಣೆ, ಹುರುಳಿ, ಅಕ್ಕಿ ನುಚ್ಚು, ರವೆಬೂಸ, ಗೋವಿನ ಜೋಳದ ಜೊತೆಗೆ ತಾವು ಉಣ್ಣುವುದನ್ನೂ ಎತ್ತುಗಳಿಗೂ ತಿನ್ನಿಸುತ್ತಾರೆ. ಎಪ್ಪತ್ತು ವಯಸ್ಸಿನ ಆಸುಪಾಸಿಲ್ಲಿದ್ದರೂ ಹಳ್ಳಿಕಾರ್ ರಾಸುಗಳನ್ನು ಚೆಂದವಾಗಿ ಸಾಕಾಣಿಕೆ ಮಾಡುವ ಹುಮ್ಮಸ್ಸು ಕಡಿಮೆಯಾಗಿಲ್ಲ. ಚಿಕ್ಕಂದಿನಿಂದಲೂ ಈ ರಾಸುಗಳ ಪಾಲನೆ-ಪೋಷಣೆ ಮಾಡುವುದು ತನಗೆ ಖುಷಿಯ ಸಂಗತಿ ಎನ್ನುತ್ತಾರೆ ಅವರು.

‘ಪಾರಂಪಾರಿಕವಾಗಿ ಕೃಷಿ ಮಾಡುತ್ತಾ ಬಂದ ಮನೆತನ ನಮ್ಮದು. ಮೂರು ದಶಕಗಳ ಮೊದಲು ಮನೆಯಲ್ಲಿ ರಾಸುಗಳು ಸಮೃದ್ಧಿಯಾಗಿದ್ದವು. ಈಗ ಮೇವಿನ ಕೊರತೆ ಹಾಗೂ ಪೋಷಣೆ ಮಾಡುವವರ ಸಂಖ್ಯೆ ಕಡಿಮೆ ಇರುವ ಕಾರಣ ರಾಸುಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ ಇವುಗಳ ಸಾಕಾಣಿಕೆಯಲ್ಲಿ ಸಂತಸವಿದೆ’ ಎನ್ನುತ್ತಾರೆ ರೈತ ಕೆಂಪಣ್ಣ.

‘ಒಂದು ಜೊತೆ ಹಳ್ಳಿಕಾರ್ ರಾಸುಗಳನ್ನು ಸಾಕಲು ಪ್ರತಿ ತಿಂಗಳು ₹ 8ರಿಂದ ₹ 10 ಸಾವಿರ ಖರ್ಚಾಗುತ್ತದೆ. ರಾಸುಗಳ ಸಾಕಾಣಿಕೆಯಲ್ಲಿಯೇ ದೇವರನ್ನು ಕಾಣುವ ಮನೋಭಾವ ನಮ್ಮದು. ಹಲವು ಜಾತ್ರೆಗಳಿಗೆ ಭೇಟಿ ನೀಡಿ, ಉತ್ತಮ ರಾಸುಗಳನ್ನು ನೋಡುತ್ತೇವೆ. ಅವುಗಳಲ್ಲಿ ಸುಳಿ, ನಿಲ್ಲುವ, ನಡೆಯುವ ರೀತಿ, ಕಾಲುಗಳ ರಚನೆ ಗಮನಿಸಿ ಸೂಕ್ತ ಎನ್ನಿಸಿದರೆ ಖರೀದಿ ಮಾಡುತ್ತೇವೆ’ ಎಂದು ತಿಳಿಸಿದರು.

‘ಒಂದು ಜೋಡಿ ಎತ್ತುಗಳ ಕೊಂಬು ಚೂಪು ಮಾಡಿ, ಅವುಗಳಿಗೆ ಹೊಳಪು ನೀಡಲು ₹ 3 ಸಾವಿರ, ಕಾಲುಗಳಿಗೆ ಲಾಳ ಕಟ್ಟಿಸಲು ಒಂದು ಜೋಡಿಗೆ ₹ 600ರಿಂದ ₹ 1 ಸಾವಿರದವರೆಗೂ ಆಗುತ್ತದೆ. ಪ್ರತಿ ಮೂರು ಅಥವಾ ನಾಲ್ಕು ತಿಂಗಳಿಗೊಮ್ಮೆ ಲಾಳ ಕಟ್ಟಿಸಬೇಕು’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು