ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ| ಆಲೂಗಡ್ಡೆ ಬೆಲೆ ಕುಸಿತ: ರೈತ ಕಂಗಾಲು

ಒಂದು ಚೀಲ ಆಲೂಗಡ್ಡೆ ಕೇವಲ ₹350-400ಕ್ಕೆ ಮಾರಾಟ
Last Updated 10 ಏಪ್ರಿಲ್ 2023, 5:08 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಭಾರೀ ಪ್ರಮಾಣದಲ್ಲಿ ಬೆಳೆಯಲಾದ ಆಲೂಗಡ್ಡೆ ಬೆಳೆಗೆ ಸೂಕ್ತ ಬೆಲೆ ಹಾಗೂ ಖರೀದಿಸುವವರಿಲ್ಲದೆ ತೋಟಗಳಲ್ಲಿ ಬಿದ್ದಿರುವ ರಾಶಿ ರಾಶಿ ಆಲೂಗಡ್ಡೆ ಫಸಲು ಬಿಸಿಲನಿನಿಂದಾಗಿ ಕೊಳೆಯುವಂತಾಗಿದೆ. ಇದರಿಂದಾಗಿ ಬಿತ್ತನೆ ಮಾಡಿದ ಬೆಳೆಗೆ ಹಾಕಿದ ಬಂಡವಾಳವೂ ವಾಪಸ್ ಬಾರದೆ ರೈತರು ಕಂಗಾಲಾಗಿದ್ದಾರೆ.

ತಾಲ್ಲೂಕಿನಲ್ಲಿ ಒಟ್ಟು 120 ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲಾಗಿದೆ. ಉತ್ತಮ ಬೆಳೆ ಬಂದಿದ್ದರೂ, ಅದಕ್ಕೆ ಸೂಕ್ತ ಬೆಲೆ ಮಾತ್ರ ಸಿಗುತ್ತಿಲ್ಲ. ಒಂದು ಮೂಟೆ ಬಿತ್ತನೆ ಆಲೂಗಡ್ಡೆಗೆ ₹1,800-1,900 ಕೊಟ್ಟು ಖರೀದಿಸಿ ಬಿತ್ತನೆ ಮಾಡಿದ್ದ ರೈತರು, ಇದೀಗ ಒಂದು ಮೂಟೆ ಆಲೂಗಡ್ಡೆಯನ್ನು ಕೇವಲ ₹350 ರಿಂದ ₹400ಕ್ಕೆ ಮಾರುವ ಅನಿವಾರ್ಯತೆಗೆ ಸಿಲುಕಿದ್ದಾರೆ.

‘ಒಂದು ಮೂಟೆ ಆಲೂಗಡ್ಡೆ ₹800-900ಗೆ ಮಾರಾಟವಾದರೆ ಮಾತ್ರ, ನಮ್ಮ ಕಷ್ಟಕ್ಕೆ ಪ್ರತಿಫಲ ಸಿಗುತ್ತದೆ. ಇಲ್ಲವಾದರೆ ಹಾಕಿದ ಬಂಡವಾಳವೂ ಬರದೆ ನಾವು ಸಾಲಗಾರರಾಗಬೇಕಾಗುತ್ತದೆ. ಜುಲೈ ತಿಂಗಳವರೆಗೂ ಕಾಯಬೇಕಾಗುತ್ತದೆ’ ಎಂದು ರೈತ ಮೂರ್ತಿ ಆತಂಕ ವ್ಯಕ್ತಪಡಿಸಿದರು.

‘5 ಎಕರೆ ಭೂಮಿಯ ಪೈಕಿ ಮೂರು ಎಕರೆಯಲ್ಲಿ ಆಲೂಗಡ್ಡೆ ಬಿತ್ತನೆ ಮಾಡಿದ್ದೇನೆ. ಇದುವರೆಗೂ ಸುಮಾರು ₹4 ಲಕ್ಷಕ್ಕೂ ಹೆಚ್ಚು ಬಂಡವಾಳ ಹೂಡಿದ್ದೇನೆ. ಈಗ ಆಲೂಗಡ್ಡೆ ಅಗೆಯುವುದಕ್ಕೆ ಎಕರೆಗೆ ₹25,000 ಕೂಲಿ ಕೊಡಬೇಕು. ವ್ಯಾಪಾರಸ್ಥರಿಗೆ ಮಾರಾಟ ಮಾಡಲು ನಾವೇ ಚೀಲ ತಂದು, ಗಡ್ಡೆ ತುಂಬಿಸಿಕೊಟ್ಟರೆ ₹400 ರೂಪಾಯಿಗೆ ಖರೀದಿ ಮಾಡಿಕೊಂಡು ಹೋಗುತ್ತಾರೆ. ಒಂದು ಚೀಲಕ್ಕೆ ಹೆಚ್ಚುವರಿ ₹100 ಖರ್ಚಾಗುತ್ತದೆ’ ಎಂದರು.

ಆಲೂಗಡ್ಡೆ ವ್ಯಾಪಾರಿ ಚಿದಾನಂದ್ ಮಾತನಾಡಿ, ‘ಮಧ್ಯಪ್ರದೇಶದ ಇಂದೋರ್, ಆಗ್ರಾ, ಗುಜರಾತ್ ಸೇರಿದಂತೆ ಇನ್ನಿತರ ಕಡೆಗಳಿಂದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ಆಲೂಗಡ್ಡೆ ಬರುತ್ತಿದೆ. ಬೆಂಗಳೂರಿನ ಮಾರುಕಟ್ಟೆಯಲ್ಲಿ
ಒಂದು ಮೂಟೆ ₹400ಕ್ಕೆ ಸಿಗುತ್ತಿದೆ. ನಾವು ರೈತರ ತೋಟದಲ್ಲಿ ಖರೀದಿ ಮಾಡಬೇಕಾದರೂ ₹400 ಕೊಡಬೇಕು’ ಎಂದರು.

ಕೊಳೆತ ಫಸಲು

ಆಲೂಗಡ್ಡೆಗೆ ಮುಂದಿನ ದಿನಗಳಲ್ಲಿ ಬೆಲೆ ಬರಬಹುದು ಎಂಬ ಲೆಕ್ಕಾಚಾರವಿಟ್ಟುಕೊಂಡು, ಅನೇಕ ರೈತರು ತಮ್ಮ ತೋಟದಲ್ಲೆ ನೆರಳಿನಡಿ ಆಲೂಗಡ್ಡೆ ರಾಶಿ ಮಾಡಿ, ಕೆಡದಂತೆ ರಾಸಾಯನಿಕ ಸಿಂಪಡಿಸಿದರೂ, ಬಿಸಿಲಿನ ತಾಪಕ್ಕೆ ರಾಶಿಯಲ್ಲೇ ಆಲೂಗಡ್ಡೆ ಕೊಳೆಯುತ್ತಿದೆ. ವ್ಯಾಪಾರಸ್ಥರು ಕೇಳಿದ ಬೆಲೆಗೆ ಮಾರಾಟ ಮಾಡಲಾಗದ ಸ್ಥಿತಿ ಎದುರಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT