ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆನೇಕಲ್: ಗುಂಡಿ ರಸ್ತೆಯಲ್ಲಿ ವಾಹನಗಳ ಸರ್ಕಸ್‌

ಕೆಮ್ಮಣ್ಣು ಹಳ್ಳ‌– ಜಿಗಣಿ ಮುಖ್ಯರಸ್ತೆಯ ಸಂಪರ್ಕ ರಸ್ತೆ ಅಧ್ವಾನ
Published : 9 ಸೆಪ್ಟೆಂಬರ್ 2024, 5:18 IST
Last Updated : 9 ಸೆಪ್ಟೆಂಬರ್ 2024, 5:18 IST
ಫಾಲೋ ಮಾಡಿ
Comments

ಆನೇಕಲ್: ತಾಲ್ಲೂಕಿನ ಇಂಡ್ಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಮ್ಮಣ್ಣು ಹಳ್ಳ–ಜಿಗಣಿ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯು ಗುಂಡಿಗಳಿಂದ ತುಂಬಿದ್ದು, ಇಲ್ಲಿ ಸಂಚರಿಸುವ ವಾಹನ

ಜನರು ಸಂಚರಿಸಲು ಸಾಧ್ಯವಿಲ್ಲದಂತಾಗಿದೆ. ದ್ವಿಚಕ್ರ ವಾಹನಗಳಲ್ಲಿ ಸಂಚರಿಸಲು ಪ್ರತಿನಿತ್ಯ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ರಸ್ತೆಯು ಇಂಡ್ಲವಾಡಿ ತಿರುವಿನ ಮೂಲಕ ಬನ್ನೇರುಘಟ್ಟ ಜಿಗಣಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಜಿಗಣಿ ಕೈಗಾರಿಕ ಪ್ರದೇಶಕ್ಕೆ ತೆರಳುವ ಕಾರ್ಮಿಕರು, ವಿವಿಧ ಉದ್ಯೋಗಗಳಿಗಾಗಿ ಬನ್ನೇರುಘಟ್ಟ, ಬೆಂಗಳೂರಿಗೆ ತೆರಳುವವರು ಈ ಮಾರ್ಗದ ಮೂಲಕ ಸಂಚರಿಸಬೇಕಾಗಿದೆ.

ಈ ರಸ್ತೆ ಡಾಂಬರು ಕಂಡು ಹಲವು ವರ್ಷಗಳೇ ಕಳೆದಿದ್ದು, ರಸ್ತೆಯಲ್ಲಿನ ಸಂಚಾರ ತಂತಿಯ ಮೇಲಿನ ನಡಿಗೆಯಂತಿದೆ. ಚಿನ್ನಯ್ಯನ ಪಾಳ್ಯ, ಲಕ್ಷ್ಮೀಪುರ, ಸಿದ್ದನಪಾಳ್ಯ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ಮಂದಿ ಈ ಮಾರ್ಗದಲ್ಲಿ ಸಂಚರಿಸಬೇಕು. ಆದರೆ ಎರಡು ಕಿ.ಮೀ. ದೂರ ರಸ್ತೆ ಗುಂಡಿಗಳಿಂದ ತುಂಬಿದ್ದು, ಮಳೆ ಬಂದರೆ ಕೆರೆಯಂತಾಗುವ ರಸ್ತೆಯಲ್ಲಿ ಸವಾರರು ಸಂಚರಿಸಲು ಭಯಪಡುತ್ತಾರೆ.

ಕ್ರಷರ್‌ನ ಭಾರಿ ವಾಹನಗಳು ಈ ರಸ್ತೆಯ ಮೂಲಕ ಸಂಚರಿಸುತ್ತವೆ. ಹೀಗಾಗಿ ರಸ್ತೆ ಮತ್ತಷ್ಟು ಅಧ್ವಾನಗೊಂಡಿದೆ. ರಸ್ತೆ ಅಭಿವೃದ್ಧಿಗೆ ಕ್ರಷರ್‌ ಮಾಲೀಕರ ಸಹಕಾರ ಪಡೆದು ಸಸಜ್ಜಿತ ರಸ್ತೆ ನಿರ್ಮಿಸಿ ಎಂಬುದು ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಒತ್ತಾಯ. ರಸ್ತೆ ಅಭಿವೃದ್ಧಿಗಾಗಿ ಗ್ರಾಮಸ್ಥರು ರಸ್ತೆ ತಡೆದು ಹಲವು ಬಾರಿ ಪ್ರತಿಭಟನೆ ನಡೆಸಿದ್ದರೂ ಇದುವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ.

ಪ್ರತಿಕ್ರಿಯಿಸಿ ಕೆಮ್ಮಣ್ಣುಹಳ್ಳದಿಂದ ಕಕ್ಕಮಲ್ಲೇಶ್ವರ ಬೆಟ್ಟದ ಮಾರ್ಗವಾಗಿ ಜಿಗಣಿ ರಸ್ತೆಗೆ ಸಂಪರ್ಕ ಕಲ್ಪಿಸುವ ಸಂಪರ್ಕ ರಸ್ತಯು ಕ್ರಷರ್‌ ವಾಹನಗಳ ಸಂಚಾರದಿಂದಾಗಿ ಹಾಳಾಗಿದೆ. ಇದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ಎರಡು ಮೂರು ಬಾರಿ ರಸ್ತೆ ತಡೆ ನಡೆಸಲಾಗಿತ್ತು. ಆದರೆ ತ್ವರಿತವಾಗಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದ ಅಧಿಕಾರಿಗಳು ಭರವಸೆಯನ್ನು ಮರೆತಿದ್ದಾರೆ ಎಂದು ಚಿನ್ನಯ್ಯನಪಾಳ್ಯದ ಗೌತಮ್‌ ವೆಂಕಿ ತಿಳಿಸಿದರು.

ದೂಳು ಬರುವುದನ್ನು ತಡೆಗಟ್ಟಲು ನೀರು ಹಾಕುತ್ತಿರುವುದು
ದೂಳು ಬರುವುದನ್ನು ತಡೆಗಟ್ಟಲು ನೀರು ಹಾಕುತ್ತಿರುವುದು
3 ಕಿ.ಮೀ ರಸ್ತೆ–30 ಕಿ.ಮೀ ಸಂಚಾರದ ಅನುಭವ
ಕೆಮ್ಮಣ್ಣುಹಳ್ಳ-ಜಿಗಣಿ ಮುಖ್ಯ ರಸ್ತೆಯಲ್ಲಿ ಮೂರು ಕಿ.ಮೀ. ಸಂಚರಿಸಬೇಕಾದರೆ 30 ಕಿ.ಮೀ. ಸಂಚರಿಸಿದ ಅನುಭವವಾಗುತ್ತದೆ. ರಸ್ತೆಯುದ್ದಕ್ಕೂ ಗುಂಡಿಗಳಿಂದ ತುಂಬಿವೆ. ದಪ್ಪ ದಪ್ಪ ಕಲ್ಲುಗಳು ರಸ್ತೆಯುದ್ದಕ್ಕೂ ಇರುವುದರಿಂದ ದ್ವಿಚಕ್ರ ವಾಹನಗಳು ಸ್ಕಿಡ್‌ ಆಗಿ ಬೀಳುವ ಪರಿಸ್ಥಿತಿಯಿದೆ. ಜಿಗಣಿ ಕೈಗಾರಿಕ ಪ್ರದೇಶ ಶಾಲಾ-ಕಾಲೇಜುಗಳಿಗೆ ಹೋಗಬೇಕಾದರೆ ಜನರು ಈ ಮಾರ್ಗದ ಪರಿಸ್ಥಿತಿಯಿಂದಾಗಿ ಆನೇಕಲ್‌ ಮೂಲಕ ಜಿಗಣಿಗೆ ಓಡಾಡುವಂತಾಗಿದೆ. ಐದಾರು ಕಿ.ಮೀ. ಸುತ್ತುಕೊಂಡು ಓಡಾಡಬೇಕಾಗಿದೆ. ಇದರಿಂದಾಗಿ ಸಮಯ ಹಣ ವ್ಯರ್ಥವಾಗುತ್ತಿದೆ. ಈ ಭಾಗದ ಜನರಿಗೆ ಸೌಲಭ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಂಡು ಜನರ ಪರದಾಟಕ್ಕೆ ಮುಕ್ತಿ ಕಲ್ಪಿಸಬೇಕು ಎಂಬುದು ಸ್ಥಳೀಯರ ಒತ್ತಾಸೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT