ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿವಾಳ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಡ

ಮಡಿವಾಳ ಮಾಚಿದೇವ ಜಯಂತ್ಯುತ್ಸವದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಭರವಸೆ
Last Updated 1 ಫೆಬ್ರುವರಿ 2019, 13:44 IST
ಅಕ್ಷರ ಗಾತ್ರ

ದೇವನಹಳ್ಳಿ: ಮಡಿವಾಳ ಸಮುದಾಯದ ಅಭಿವೃದ್ಧಿಗೆ ಅಧಿಕಾರಿಗಳು ಇಚ್ಛಾಸಕ್ತಿ ಪ್ರದರ್ಶಿಸಬೇಕೆಂದು ತಾಲ್ಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಕೆ.ರಮೇಶ್ ಒತ್ತಾಯಿಸಿದರು.

ಇಲ್ಲಿನ ತಾಲ್ಲೂಕು ಆಡಳಿತ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಜಿಲ್ಲಾ ಮಡಿವಾಳ ಸಂಘದ ಸಹಭಾಗಿತ್ವದಲ್ಲಿ ನಡೆದ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಬಟ್ಟೆಗಳನ್ನು ಶುಚಿಗೊಳಿಸುವ ಏಕೈಕ ಸಮುದಾಯ ಮಡಿವಾಳರದ್ದು. ಅವರ ಸ್ಥಿತಿ ಆಯೋಮಯವಾಗಿದೆ. ಅರ್ಥಿಕ ಸಂಕಷ್ಟಕ್ಕೆ ಸಿಲುಕಿ ಆನೇಕ ಕುಟುಂಬಗಳು ಬಟ್ಟೆ ತೊಳೆಯುವುದನ್ನೇ ಕಾಯಕ ಮಾಡಿಕೊಂಡಿವೆ. ಸತತ ಬರಗಾಲದಿಂದ ಯಾವುದೇ ಕೆರೆ –ಕುಂಟೆಗಳಲ್ಲಿ ನೀರಿಲ್ಲದೆ ಬಟ್ಟೆ ತೊಳೆದು ಜೀವನ ನಡೆಸುವುದೇ ಕಷ್ಟಕರವಾಗಿದೆ ಎಂದು ಹೇಳಿದರು.

ಪ್ರತಿ ವರ್ಷ ಫೆ.1ರಂದು ಮಡಿವಾಳ ಮಾಚೀದೇವರ ಜಯಂತಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಕೆರೆ – ಕುಂಟೆಗಳ ಬಳಿ ಕೊಳವೆ ಬಾವಿ ಕೊರೆಯಿಸಿ ಸಿಮೆಂಟ್ ತೊಟ್ಟಿಗಳ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತಿದೆ. ಪ್ರತಿ ಪುರಸಭೆ ವ್ಯಾಪ್ತಿಯಲ್ಲಿ ₹10ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಇತರ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಆದರೆ, ತಾಲ್ಲೂಕಿನಲ್ಲಿ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ನಡೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಡಿವಾಳರನ್ನು ಪರಿಶಿಷ್ಟ‌ ಜಾತಿಗೆ ಸೇರ್ಪಡೆಗೊಳಿಸಲು ಹೋರಾಟ ನಡೆಯುತ್ತಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಲೇ ಇದೆ. ಕೆಲ ಸಮುದಾಯಗಳಿಗೆ ನಿಗಮ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಈ ಸಮುದಾಯಕ್ಕೂ ನಿಗಮ ಮಂಡಳಿ ಅವಶ್ಯವಿದ್ದು, ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಒತ್ತಾಯಿಸಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ‘ಚುನಾವಣೆಗೆ ಮೊದಲು ಮಡಿವಾಳ ಭವನಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದೆ. ಚಂದೇನಹಳ್ಳಿ ಗ್ರಾಮದ ಬಳಿ 32ಗುಂಟೆ ಜಾಗ ಮಡಿವಾಳ ಸಮುದಾಯಕ್ಕೆ ಮೀಸಲಿಡಲು ಸಂಬಂಧಿಸಿದ ದಾಖಲಾತಿ ಜಿಲ್ಲಾಧಿಕಾರಿಗೆ ನೀಡಲು ಈಗಾಗಲೇ ತಹಶೀಲ್ದಾರ್‌ಗೆ ಸೂಚಿಸಿರುವೆ’ ಎಂದು ತಿಳಿಸಿದರು.

ಮಾಚಿದೇವರ ದೇವಾಲಯದ ಸುತ್ತ ತಡೆಗೋಡೆ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ₹10 ಲಕ್ಷ ಅನುದಾನ ನೀಡಲಾಗುವುದು. ಮಡಿವಾಳ ಅಭಿವೃದ್ಧಿ ನಿಗಮ ಸ್ಥಾಪನೆಗೆ ಜೆಡಿಎಸ್ ವರಿಷ್ಠ ದೇವೇಗೌಡ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮೇಲೆ ಒತ್ತಡ ತರಲಾಗುವುದು ತಿಳಿಸಿದರು.

ಮಡಿವಾಳ ಮಾಚೀದೇವರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ನಂಜಪ್ಪ, ತಹಶೀಲ್ದಾರ್ ಕೇಶವಮೂರ್ತಿ, ಕೆಪಿಸಿಸಿ ಹಿಂದುಳಿದ ವರ್ಗ ಜಿಲ್ಲಾ ಘಟಕ ಅಧ್ಯಕ್ಷ ಅಪ್ಪಣ್ಣ, ಮಡಿವಾಳ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಪ್ಪ, ಗೌರವಾಧ್ಯಕ್ಷ ಹೇಮಂತ್ ಕುಮಾರ್, ತಾಲ್ಲೂಕು ಘಟಕ ಅಧ್ಯಕ್ಷ ರಮೇಶ್, ನಗರ ಘಟಕ ಅಧ್ಯಕ್ಷ ವಿಜಯಕುಮಾರ್, ಕಾರ್ಯದರ್ಶಿ ನಾಗೇಶ್, ಜಿಲ್ಲಾ ಘಟಕ ಕಾರ್ಯದರ್ಶಿ ರಾಜಣ್ಣ, ಶಿಕ್ಷಕ ಆಂಜಿನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT