ಸರ್ಕಾರಿ ಶಾಲಾ ಶಿಕ್ಷಕರ ಪ್ರತಿಭಟನೆ

ಭಾನುವಾರ, ಜೂಲೈ 21, 2019
22 °C
ಕೇವಲ ಭರವಸೆ ನೀಡುತ್ತ ಕಾಲಹರಣ ಮಾಡುತ್ತಿರುವ ಸರ್ಕಾರ ಆರೋಫ

ಸರ್ಕಾರಿ ಶಾಲಾ ಶಿಕ್ಷಕರ ಪ್ರತಿಭಟನೆ

Published:
Updated:
Prajavani

ದೇವನಹಳ್ಳಿ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಇಲ್ಲಿನ ಜಿಲ್ಲಾಡಳಿತ ಭವನದ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ನೆಲಮಂಗಲ ತಾಲ್ಲೂಕು ಸರ್ಕಾರಿ ನೌಕರರ ಸಂಘ ಅಧ್ಯಕ್ಷ ವಾಸುದೇವ್, ‘ಶಿಕ್ಷಕರ ಸಂಘ ಕಳೆದ ಹತ್ತು ವರ್ಷಗಳಿಂದ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯ ಮಾಡುತ್ತಲೇ ಇದೆ. ಆಡಳಿತ ನಡೆಸುವ ಸರ್ಕಾರ ಬರಿ ಭರವಸೆಯನ್ನು ನೀಡುತ್ತ ಕಾಲಹರಣ ಮಾಡುತ್ತಿದೆ. ದಿನೇ ದಿನೇ ಶಿಕ್ಷಕರ ಮೇಲೆ ಕರ್ತವ್ಯದ ಹೊರೆ ಹೆಚ್ಚುಮಾಡಿ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರವೇ ಅಡ್ಡಿಪಡಿಸುತ್ತಿದೆ’ ಎಂದು ದೂರಿದರು.

ಇಲಾಖೆಯಲ್ಲಿನ ಪ್ರತಿಯೊಂದು ಆದೇಶ, ಸುತ್ತೋಲೆ, ಶಾಲೆಯಲ್ಲಿ ಕೈಗೊಂಡ ಕಾರ್ಯಚಟುವಟಿಕೆ, ಪಠ್ಯಕ್ರಮ, ಬಿಸಿಯೂಟ ಅನೇಕ ರೀತಿಯ ವಿಷಯವಾರು ಕಾರ್ಯಾನುಷ್ಠಾನದ ಬಗ್ಗೆ ಪ್ರತಿದಿನ ಹಿರಿಯ ಅಧಿಕಾರಿಗಳಿಗೆ ವಿಷಯ ಮನವರಿಕೆ ಮಾಡಬೇಕು, ಶಿಕ್ಷಕರು ಬೋಧನೆ ಮಾಡುವುದಾದರೂ ಯಾವಾಗ. ಮೂರು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ಆಗಿಲ್ಲ. ಪ್ರಸ್ತುತ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದೆ. ಈ ಪ್ರಕ್ರಿಯೆ ಮುಗಿದ ತಕ್ಷಣ ಅಕ್ಟೋಬರ್ ತಿಂಗಳಲ್ಲಿ ಮತ್ತೊಮ್ಮೆ ಕೋರಿಕೆ ವರ್ಗಾವಣೆ ನಡೆಸಬೇಕೆಂದು ಆಗ್ರಹಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಕೆ. ಕಾಂತರಾಜ್ ಮಾತನಾಡಿ, ಜಿಲ್ಲೆಯ ನಾಲ್ಕು ತಾಲ್ಲೂಕಿನಿಂದ 4,500 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರು ಇದೇ ಮೊದಲ ಬಾರಿಗೆ ಜಿಲ್ಲಾಡಳಿತ ಭವನದ ಮುಂದೆ ಶಕ್ತಿ ಪ್ರದರ್ಶನ ನಡೆಸಿದ್ದಾರೆ. ಆದರೂ ಮಾತೃಸಂಘದಿಂದ ಹಲವು ಸಂಘಗಳನ್ನು ಹುಟ್ಟಿಹಾಕುವುದು ಬೇಡ ಬಲಪ್ರದರ್ಶನಕ್ಕೆ ಒಗ್ಗಟ್ಟು ಮುಖ್ಯ ಎಂದು ಹೇಳಿದರು.

ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಜಯರಾಮ್ ಮಾತನಾಡಿ, ಶಿಕ್ಷಕರ ಬೇಡಿಕೆ ಈಡೇರದಿದ್ದರೆ ಸೆ. 5 ರಂದು ಶಿಕ್ಷಕರ ದಿನಾಚರಣೆ ಬಹಿಷ್ಕರಿಸಿ ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಸಂಘದ ಉಪಾಧ್ಯಕ್ಷ ನಾಗೇಶ್ ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕ ಉಪಾಧ್ಯಕ್ಷ ವೆಂಕಟಾಚಲ, ನಿರ್ದೇಶಕ ಪುಟ್ಟಸ್ವಾಮಿ, ಅಧ್ಯಕ್ಷ ಮುನಿಶಾಮಪ್ಪ, ಜಿಲ್ಲಾ ಸಂಘ ಗೌರವಾಧ್ಯಕ್ಷ ಮಲ್ಲಿಕಾರ್ಜುನ್, ನಿರ್ದೇಶಕ ರಾಜಶೇಖರ್, ವಿವಿಧ ಘಟಕ ಪದಾಧಿಕಾರಿಗಳಾದ ಚಂದ್ರಶೇಖರ್ ಹಡಪದ್, ಕೆ.ಮುನಿಯಪ್ಪ, ಜಯಕುಮಾರ, ಆದರ್ಶ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !